ನಿರಂತರ ಪರಿಶ್ರಮದಿಂದ ವಿದ್ಯಾರ್ಥಿಗಳ ಕನಸು ಸಾಕಾರ: ವಿ. ಜೀವಂಧರಕುಮಾರ
ಧಾರವಾಡ 08: ದೇಶದ ಭವಿಷ್ಯವಾಗಿರುವ ಇಂದಿನ ವಿದ್ಯಾರ್ಥಿಗಳು ನಿರಂತರ ಪರಿಶ್ರಮದಿಂದ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಂಡು ಸದೃಢ ಮತ್ತು ಸಶಕ್ತ ರಾಷ್ಟ್ರದ ನಿರ್ಮಾಣದಲ್ಲಿ ಕೈಜೋಡಿಸಬೇಕು ಎಂದು ಎಸ್.ಡಿ.ಎಂ.ಇ ಸೊಸೈಟಿಯ ಕಾರ್ಯದರ್ಶಿ ವಿ. ಜೀವಂಧರಕುಮಾರ ಹೇಳಿದರು.
ಅವರು ಇಂದು ಜನತಾ ಶಿಕ್ಷಣ ಸಮಿತಿಯ ಆರ್.ಎಸ್. ಹುಕ್ಕೇರಿಕರ ಪದವಿಪೂರ್ವ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾಸಂಘಗಳ ಸಮಾರೋಪ ಸಮಾರಂಭ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಂದುವರೆದು ಮಾತನಾಡಿದ ಅವರು ಯಶಸ್ಸೆಂಬುದು ಯಾರೊಬ್ಬರ ಸ್ವತ್ತಲ್ಲ. ನಿರಂತರ ಸಾಧನೆಯಿಂದ ವಿದ್ಯಾರ್ಥಿಗಳು ಯಶಸ್ಸನ್ನು ಕಂಡುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿ ಸತತ ಪ್ರಯತ್ನದಿಂದ, ಆತ್ಮವಿಶ್ವಾಸದಿಂದ ಮುನ್ನಡೆದಾಗ ತನ್ನ ಗುರಿ ಮುಟ್ಟುತ್ತಾನೆ. ಅತಿಯಾದ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಯ ಮನೋಸ್ಥೈರ್ಯಕ್ಕೆ ಧಕ್ಕೆಯಾಗುತ್ತದೆ ಹಾಗೂ ಪರೀಕ್ಷಾ ಭಯಕ್ಕೆ ತುತ್ತಾಗದೇ, ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಒಂದು ಸವಾಲಾಗಿ ತೆಗೆದುಕೊಳ್ಳಬೇಕು ಅಲ್ಲದೇ ಕಲಿಕೆಯೊಂದಿಗೆ ನಿಮ್ಮ ಉತ್ತಮವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಅವರು ಮಾತನಾಡಿ ಪಿಯುಸಿ ಕಲಿಕೆಯ ಹಂತವು ವಿದ್ಯಾರ್ಥಿ ಬದುಕಿನ ಪ್ರಮುಖ ಕಾಲಘಟ್ಟ. ಈ ಹಂತದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುವುದು ತುಂಬ ಅಗತ್ಯ. ಈ ದಿಸೆಯಲ್ಲಿ ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಿದರೆ ಬದುಕು ಬಂಗಾರವಾಗಲಿದೆ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಬಹಳ ಮುಖ್ಯ, ಮೊಬೈಲ್, ಇಂಟರನೆಟ್ ಹಾಗೂ ಇನ್ನಿತರ ವ್ಯಸನಗಳಿಗೆ ಒಳಗಾಗದೇ ಕಲಿಕೆಯಲ್ಲಿ ತಮ್ಮ ಚಿತ್ತವಿರಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳ ಹಾಗೂ ಅಧ್ಯಕ್ಷರನ್ನು ಶ್ರೀನಿವಾಸ ಅರಬಟ್ಟಿ ಪರಿಚಯಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ. ಭಾರತಿ ಶಾನಭಾಗ ಅವರು ವಾರ್ಷಿಕ ವರದಿಯನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಈ ವರ್ಷದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಿಕ್ಷಕರನ್ನು ಮತ್ತು ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಳೆದ ವರ್ಷ ಪ್ರಥಮ ಹಾಗೂ ದ್ವಿತೀಯ ಪರೀಕ್ಷೆಯಲ್ಲಿ, ಜೆಇಇ ಮತ್ತು ನೀಟ್ ಪರೀಕ್ಷೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನೂ ಸಹ ಸನ್ಮಾನಿಸಲಾಯಿತು. ಇದನ್ನು ಸ್ವಾತಿ ಪ್ರಭು ಮತ್ತು ಮಮತಾ ಯು.ಆರ್ ನಿರೂಪಿಸಿದರು.
ವೇದಿಕೆಯ ಮೇಲೆ ಜೆ.ಎಸ್.ಎಸ್. ಐ,ಟಿ.ಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಡಾ. ಎಸ್. ಕೆ ಪಾಟೀಲ, ಕ್ರೀಡಾ ನಿರ್ದೇಶಕ ಶಿ ಬಾಹುಬಲಿ ಚೌಗಲಾ, ವಿದ್ಯಾರ್ಥಿ ಪ್ರತಿನಿಧಿ ಚಂದನಾ ಅಂಗಡಿ ಉಪಸ್ಥಿತರಿದ್ದರು.
ಮಹಾವಿದ್ಯಾಲಯದ ಎಲ್ಲ ಭೋದಕ-ಭೋದಕೇತರ ಸಿಬ್ಬಂದಿ ವರ್ಗ ಹಾಗೂ ಪಾಲಕರು ಉಪಸ್ಥಿತರಿದ್ದರು. ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಜರುಗಿತು. ವಿದ್ಯಾರ್ಥಿನಿ ಭೂಮಿಕಾ ಪವಾರ ನಿರೂಪಿಸಿದರು. ಸುಪ್ರಿಯಾ ಜನಗೌಡ ಸ್ವಾಗತಿಸಿದರು. ಶ್ರದ್ಧಾ ಮುಧೋಳೆ ವಂದಿಸಿದರು. ಆನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.