ದಲಿತರ ಮೇಲಿನ ಹಲ್ಲೆಗೆ ತೀವ್ರ ಖಂಡನೆ : ಪಟ್ಟಣದಲ್ಲಿ ನಡೆದ ಪ್ರತಿಭಟನಾ ಪಾದಯಾತ್ರೆ : ಮೇಲ್ವರ್ಗದ 13 ಜನರನ್ನು ಬಂಧಿಸುವಂತೆ ಆಗ್ರಹ

ದಲಿತರ ಮೇಲಿನ ಹಲ್ಲೆಗೆ ತೀವ್ರ ಖಂಡನೆ : ಪಟ್ಟಣದಲ್ಲಿ ನಡೆದ ಪ್ರತಿಭಟನಾ ಪಾದಯಾತ್ರೆ : ಮೇಲ್ವರ್ಗದ 13 ಜನರನ್ನು ಬಂಧಿಸುವಂತೆ ಆಗ್ರಹ Strong condemnation of attack on Dalits: Protest march held in town: Demand to arrest 13 upper cast

ಲೋಕದರ್ಶನ ವರದಿ

ಕಂಪ್ಲಿ 08: ದಲಿತರ ಮೇಲಿನ ಹಲ್ಲೆ ಖಂಡಿಸಿ, ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಜನಶಕ್ತಿ, ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಪಟ್ಟಣದಲ್ಲಿ ಪ್ರತಿಭಟನಾ ಪಾದಯಾತ್ರೆ ಭಾನುವಾರ ನಡೆಸಿದರು. ಇಲ್ಲಿನ ನಂ.10 ಮುದ್ದಾಪುರ ಗ್ರಾಮದಲ್ಲಿ ಪಾದಯಾತ್ರೆ ಆರಂಭಿಸಿ, ಶಿಬಿರದಿನ್ನಿ ಮೂಲಕ ಮುದ್ದಾಪುರ ಅಗಸಿ, ನಡುವಲ ಮಸೀದಿ, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತದೊಂದಿಗೆ ಕಂಪ್ಲಿ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ, ನಂತರ ಡಿವೈಎಸ್‌ಪಿ ಪ್ರಸಾದ್ ಗೋಖುಲೆ ಇವರಿಗೆ ಮನವಿ ಪತ್ರ ಸಲ್ಲಿಸಿದರು.

ನಂತರ ಮುಖಂಡ ಕರಿಯಪ್ಪ ಗುಡಿಮನಿ ಮಾತನಾಡಿ, ಸ್ವಾತಂತ್ರ್ಯ ಬಂದು ಸುಮಾರು 74ವರ್ಷ ಕಳೆದರೂ ಕಂಪ್ಲಿ ತಾಲೂಕಿನಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಗುಡಿ, ದೇವಸ್ಥಾನಗಳು, ಸಾರ್ವಜನಿಕ ಕಟ್ಟೆ, ಹೋಟೇಲ್‌ಗಳಿಗೆ ಪ್ರವೇಶ ಮಾಡುವುದಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ದಲಿತರು ಇಂದಿಗೂ ಭಯಭೀತರಾಗಿದ್ದಾರೆ. ಆದರೆ, ಸಂಬಂಧಿಸಿದ ಇಲಾಖೆಗಳ ಬೇಜವಾಬ್ದಾರಿಯಿಂದ ಕಾನೂನಿನ ಅರಿವು ನೆರವು ದೊರಕದಂತಾಗಿದೆ. ಇತ್ತೀಚೆಗೆ ತಾಲೂಕು ವ್ಯಾಪ್ತಿಯ ನಂ.10 ಮುದ್ದಾಪುರ ಗ್ರಾಮದಲ್ಲಿ ರಸಿಕ ಎಂಬ ಮಾದಿಗ ಸಮುದಾಯದ ಯುವಕನ ಮೇಲೆ ಮೇಲ್ವರ್ಗದ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಯುವಕರ ರಕ್ತ ಸುರಿಯುತ್ತಾ ಇದ್ದರೂ ಕಂಪ್ಲಿ ಠಾಣೆಯಲ್ಲಿ ದೂರ ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದಾರೆ. ಇಂದಿನ ದಿನದಲ್ಲಿ ದಲಿತರ ಮೇಲೆ ನಿರಂತರ ಹಲ್ಲೆ, ದೌರ್ಜನ್ಯ ನಡೆಯುತ್ತಿವೆ. ಆದ್ದರಿಂದ 13 ಜನ ದಲಿತರ ಮೇಲೆ ಕೆಲ ಪೊಲೀಸ್ ಸಿಬ್ಬಂದಿಗಳ ಕುಮ್ಮಕ್ಕು ಆಧರಿಸಿ ದಾಖಲಾದ ಕೌಂಟರ್ ಕೇಸ್ ಕೂಡಲೇ ಮುಕ್ತಗೊಳಿಸಬೇಕು. ದಲಿತರಿಗೆ ನ್ಯಾಯ ಒದಗಿಸಬೇಕು. ಹಲ್ಲೆಕೋರರಿಗೆ ಸಹಕರಿಸಿದ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ಕೆಲಸದಿಂದ ವಜಾ ಮಾಡಬೇಕು. ಹಲ್ಲೆ ಮಾಡಿದ ಮೇಲ್ವರ್ಗದ ಆರೋಪಿತರನ್ನು ಕಡ್ಡಾಯವಾಗಿ ಬಂಧಸಲೇಬೇಕು. 13 ಜನ ದಲಿತರಿಗೆ ಆರ್ಥಿಕವಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರವಾಗಿ ನೇರ ಸಾಲಕ್ಕೆ ಸಹಾಯ ಮಾಡಲು ಶಿಫಾರಸ್ಸು ಮಾಡಬೇಕು. ಗ್ರಾಮದಲ್ಲಿ ಶಾಂತಿ ಸಭೆ ನಡೆಸಬೇಕು. ಹೀಗೆ ದಲಿತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟದ ಚಳುವಳಿ ಮಾಡಲಾಗುವುದು ಎಂದರು.  

ಮನವಿ ಸ್ವೀಕರಿಸಿದ ನಂತರ ಡಿವೈಎಸ್‌ಪಿ ಪ್ರಸಾದ್ ಗೋಖುಲೆ ಮಾತನಾಡಿ, ನಂ.10 ಮುದ್ದಾಪುರ ಗ್ರಾಮದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಾಗಿದೆ. ಬಳ್ಳಾರಿ ಜಿಲ್ಲಾ ಸಿಆರ್‌ಇಎಲ್ ತಂಡವೂ ತನಿಖೆ ಕೈಗೆತ್ತಿಕೊಂಡಿದೆ. ಸೂಕ್ತ ತನಿಖೆಗಾಗಿ ಸಹಕಾರ ನೀಡಲಾಗುವುದು. ಮೇಲ್ವರ್ಗದ ಹಲ್ಲೆ ಕೋರರಿಗೆ 3 ಜನ ಪೊಲೀಸ್ ಸಿಬ್ಬಂದಿಗಳು ಸಹಕರಿಸಿದ್ದಾರೆ ಎಂಬ ದೂರಿನ ಮೇರೆಗೆ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ, ಸೂಕ್ತಕ್ರಮವಹಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ವಸಂತರಾಜ ಕಹಳೆ, ನೀಲಪ್ಪ ಪೇಂಟರ್, ಶೋಭಾ, ಬಲರಾಮ, ಯಲ್ಲಪ್ಪ ಸೇರಿದಂತೆ ಅನೇಕರಿದ್ದರು.