ಬೆಂಗಳೂರು, ಜ 25: ರಾಜ್ಯದ ರಾಜಕೀಯ ಪಕ್ಷಗಳಿಗೆ ಒಂದು ರೀತಿಯಲ್ಲಿ ಗ್ರಹಣ ಹಿಡಿದಿದ್ದು, ಸದ್ಯಕ್ಕೆ ಬಿಡುಗಡೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಆಂತರಿಕ ಸಮಸ್ಯೆಗಳಿಂದ ಬಳಲುತ್ತಿವೆ. ಅಧಿಕೃತ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಗೆ ಸಾರಥಿಯೆ ಇಲ್ಲ. ಮತ್ತೊಂದೆಡೆ ಸಂಪುಟ ವಿಸ್ತರಣೆ ಸಂಕಟ ಆಡಳಿತಾರೂಢ ಬಿಜೆಪಿಯನ್ನು ಕಾಡುತ್ತಿದೆ. ಇನ್ನು ಜೆಡಿಎಸ್ ನಲ್ಲಿ ಸ್ವತಃ ಸ್ವಪಕ್ಷೀಯ ಶಾಸಕರಲ್ಲೇ ಅಸಮಾಧಾನ ಇದೆ.
ಎರಡೂ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಲ್ಲಿ ಆಂತರಿಕ ಕಚ್ಚಾಟದ ನೇರ ಪರಿಣಾಮ ರಾಜ್ಯದ ಜನತೆಯೆ ಮೇಲೆ ಆಗುತ್ತಿದೆ. ಕೇವಲ 17 ಜನರು ಮಾತ್ರ ಅಧಿಕಾರ ನಡೆಸುತ್ತಿದ್ದು, ಸರ್ಕಾರವನ್ನು ಪ್ರಶ್ನಿಸಲು ಅಧಿಕೃತ ವಿರೋಧ ಪಕ್ಷ ಕಾಂಗ್ರೆಸ್‌ನಲ್ಲಿ ಸಾರಥಿಯೆ ಇಲ್ಲ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರ ಅಸ್ಥಿತ್ವದ ಪ್ರಶ್ನೆ ಎದುರಾಗಿದೆ. ಉಪ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ಶಾಸಕಾಂಗ ನಾಯಕನ ಹುದ್ದೆ ಮತ್ತು ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಧ್ಯಕ್ಕೆ ಅವರ ರಾಜೀನಾಮೆಯನ್ನು ಹೈಕಮಾಂಡ್ ಅಂಗೀಕರಿಸಿಲ್ಲ. ಈಗಿರುವ ಹುದ್ದೆಯಲ್ಲಿ ಮುಂದುವರೆಯುವಂತೆ ಸೂಚಿಸಿದೆ. ಆದರೆ ಅವರು ಪರಿಣಾಮಕಾರಿ ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರ ನೇಮಕವೂ ಆಗುತ್ತಿಲ್ಲ. ದೆಹಲಿ ಚುನಾವಣೆಯ ಪರಿಣಾಮ ರಾಜ್ಯದ ಮೇಲಾಗುತ್ತಿದೆ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ನೇಮಕಾತಿ ಮಡಲು ಮೀನಾಮೇಷ ಎಣಿಸುತ್ತಿದೆ.
ಇನ್ನೂ ರಾಜ್ಯ ಸರ್ಕಾರ ದಲ್ಲಿ ಸಂಪುಟ ವಿಸ್ತರಣೆ ವಿಚಾರದಲ್ಲಿ ಬಿಜೆಪಿ ವರಿಷ್ಠರು ತಲೆಕೆಡಿಸಿಕೊಂಡಿಲ್ಲ. ಒಂದು ರೀತಿಯಲ್ಲಿ ಉಪ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಹಾಗೂ ಸೋತು ಸುಣ್ಣವಾಗಿದ್ದ ಕಾಂಗ್ರೆಸ್, ಒಂದೇ ಒಂದು ಸ್ಥಾನವನ್ನು ಗೆಲ್ಲದ ಜೆಡಿಎಸ್ ಪಕ್ಷದ ಸ್ಥಿತಿ ಅಯೋಮಯವಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಕ್ಕೆ ಇರುವಷ್ಟೆ ಮಹತ್ವ ವಿರೋಧ ಪಕ್ಷಕ್ಕಿದೆ. ಸರ್ಕಾರವನ್ನು ಪ್ರಶ್ನೆ ಮಾಡಲು ಅಧಿಕೃತವಾಗಿ ವಿರೋಧ ಪಕ್ಷದ ನಾಯಕರೇ ಇಲ್ಲದಂತಾಗಿದೆ. ಒಂದೆಡೆ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಮತ್ತೊಂದೆಡೆ, ಬಜೆಟ್ ಅಧಿವೇಶನ ಬರುವ ತಿಂಗಳು ನಡೆಯಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಪ್ರತಿಪಕ್ಷ ಕಾಂಗ್ರೆಸ್ ನಲ್ಲಿ ಹುಮ್ಮಸ್ಸು ಮಾಯವಾಗಿದೆ. ಜೆಡಿಎಸ್ ನಲ್ಲಿ ಮಂಕು ಕವಿದಿದೆ. ಕಾಂಗ್ರೆಸ್ ನಲ್ಲಿ ಮೂಲ-ವಲಸೆ ನಾಯಕರ ಕಿತ್ತಾಟ ತೀವ್ರಗೊಂಡಿದ್ದು, ಈ ಬೆಳವಣಿಗೆಗೆ ಆಡಳಿತ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ.
ಮೈತ್ರಿ ಸರ್ಕಾರ ರಾಜೀನಾಮೆ ಮೂಲಕ ತಮ್ಮ ಶಾಸಕ ಸ್ಥಾನ ತ್ಯಾಗ ಮಾಡಿ ಗೆದ್ದವರ ಸ್ಥಿತಿಯೂ ಅತಂತ್ರವಾಗಿದೆ. ಬಿಜೆಪಿ ಸರ್ಕಾರ ರಚನೆಗಾಗಿ 17 ಜನ ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿದ್ದರು. ಅದರಲ್ಲೂ ಮಾಜಿ ಸಚಿವ ಎಂಟಿಬಿ ನಾಗರಾಜ್ ಸಚಿವ ಸ್ಥಾನವನ್ನೇ ತೊರೆದಿದ್ದರು. ರಾಜೀನಾಮೆ ಕೊಟ್ಟಿದ್ದ 17 ಶಾಸಕರಲ್ಲಿ 12 ಜನರು ಮತ್ತೆ ಶಾಸಕರಾಗಿ ಆಯ್ಕೆ ಆದರೂ ಮಂತ್ರಿ ಆಗುವ ಭಾಗ್ಯ ಮಾತ್ರ ಇನ್ನೂ ದೊರೆತಿಲ್ಲ.
ಇನ್ನು ಸೋತವರಿಗೆ ಮಂತ್ರಿ ಪದವಿ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ಕೊಟ್ಟಿರುವುದು ಗೆದ್ದವರಲ್ಲಿಯೂ ಆತಂಕವನ್ನುಂಟು ಮಾಡಿದೆ. ಬಿಜೆಪಿ ಹೈಕಮಾಂಡ್ ಜೊತೆ ಮಾತನಾಡುವ ಸ್ಥಿತಿಯಲ್ಲಿಯೂ ಗೆದ್ದಿರುವ ಶಾಸಕರಿಲ್ಲ. ಹೀಗಾಗಿ ಮತ್ತೆ ಎಲ್ಲ 17 ಜನರೂ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ
ರಾಜ್ಯ ಬಿಜೆಪಿ ನಾಯಕರು ಹಿಂದೆ ಮಾತು ಕೊಟ್ಟಂತೆ ಎಲ್ಲರನ್ನು ಮಂತ್ರಿ ಮಾಡಲೇಬೇಕು ಎಂದು ಮಾಜಿ ಸಚಿವರಾದ ಆರ್.ಶಂಕರ್, ಎಚ್.ವಿಶ್ವ ನಾಥ್ ಬಹಿರಂಗ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರ ಬರಲು ನಾವು ರಾಜೀನಾಮೆ ಕೊಟ್ಟಿದ್ದೇವೆ. ನಮಗೆ ಮೊದಲು ಮಾತು ಕೊಟ್ಟಂತೆ ಎಲ್ಲರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮಾಜಿ ಸಚಿವರಾದ ಎಚ್. ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಅವರನ್ನು ಸಹ ಮಂತ್ರಿ ಮಂಡಲಕ್ಕೆ ಸೇರಸಿಕೊಳ್ಳುವಂತೆ ಬಿಜೆಪಿ ಸೇರಿರುವ ಎಲ್ಲ 17 ಮಂದಿ ಒತ್ತಾಯ ಮಾಡುತ್ತಿದ್ದಾರೆ.
ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ಅವರು ಬಿಜೆಪಿಯಲ್ಲಿ ಉಳಿಯುವುದು ಕಷ್ಟ ಎನ್ನುತ್ತಾರೆ ರಾಜಕೀಯ ಪರಿಣಿತರು. ಹಾಗಾಗಿ ಉಳಿದಿರುವ 17 ಸ್ಥಾನಗಳನ್ನು ಬಿಜೆಪಿಗೆ ಸೇರ್ಪಡೆಯಾದವರಿಗೆ ನೀಡಿದರೆ ಬಿಜೆಪಿಯಲ್ಲಿನ ಹಿರಿಯ ಶಾಸಕರನ್ನು ಸಮಾಧಾನ ಮಾಡುವುದು ಯಡಿಯೂರಪ್ಪ ಅವರಿಗೆ ಭಾರೀ ಕಷ್ಟವಾಗಲಿದೆ.
ಎರಡೂ ರಾಷ್ಟ್ರೀಯ ಪಕ್ಷಗಳು ದೆಹಲಿ ಚುನಾವಣೆಯತ್ತ ಗಮನ ಕೊಟ್ಟಿವೆ. ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಸಮಯ ಕೊಡುತ್ತಿಲ್ಲ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷರ ನೇಮಕ, ವಿರೋಧ ಪಕ್ಷದ ನಾಯಕರ ಆಯ್ಕೆಗೆ ಕಾಂಗ್ರೆಸ್ ಹೈಕಮಾಂಡ್ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಜೆಡಿಎಸ್ ಸಂಘಟನೆ ದೃಷ್ಟಿಯಿಂದ ಮೊನ್ನೆಯಷ್ಟೆ ಅರಮನೆ ಮೈದಾನದಲ್ಲಿ ಸಮಾವೇಶ ಮಾಡಿ, ಚುನಾವಣೆಯ ಸೋಲಿನ ಪರಾಮರ್ಶೆ ನಡೆಸಿದೆ. ಜೊತೆಗೆ ಸಿಎಎ ಹಾಗೂ ಎನ್ಆರ್‌ಸಿ ವಿರೋಧಿಸುವ ನಿರ್ಣಯಗಳನ್ನು ಅಂಗೀಕರಿಸಿದೆ ಆದರೂ ಪಕ್ಷದ ಶಾಸಕರು ಶಾಸಕಾಂಗ ನಾಯಕ ಕುಮಾರಸ್ವಾಮಿ ಹಾಗೂ ದೇವೇಗೌಡರ ಮೇಲೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಕಡೆಗೆ ಗಮನ ಕೊಡುತ್ತಿಲ್ಲ. ತಮ್ಮ ರಾಜಕೀಯ ಹಿತಾಸಕ್ತಿಯನ್ನು ಮಾತ್ರ ನೋಡುತ್ತಿವೆ. ರಾಜ್ಯದ ನಾಯಕರುಗಳಿಗೂ ಎರಡೂ ರಾಷ್ಟ್ರೀಯ ಪಕ್ಷಗಳ ವರಿಷ್ಠರು ಸಮಯ ಕೊಡುತ್ತಿಲ್ಲ. ರಾಷ್ಟ್ರೀಯ ಪಕ್ಷಗಳ ರಾಜಕೀಯ ಮೇಲಾಟದ ನೇರ ಪರಿಣಾಮ ರಾಜ್ಯದ ಅಭಿವೃದ್ಧಿಗೆ ಕರಿನೆರಳು ಬಿದ್ದಿದೆ.