ಅರಿವಿನ ಜ್ಯೋತಿ ಬೆಳಗಿದ ಶ್ರೀಗುರು ಕೊಟ್ಟೂರೇಶ್ವರರು
ಹರ್ಲಾಪುರ 14 : ಋಷಿಮುನಿಗಳ ಕಾಲದಿಂದಲೂ ಅಗಣಿತ ಮಹಾಮಹಿಮರು ನಮ್ಮ ಮಣ್ಣಿನಲ್ಲಿ ಜನಿಸಿ ತಮ್ಮ ಅಮೋಘ ತಪೋಬಲದಿಂದ ಸಿದ್ದಸಾಧಕರಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. ಹೀಗಾಗಿ ನಮ್ಮ ಭಾರತ ದೇಶವು ಜಗತ್ತಿಗೆ ಆತ್ಮದ ಅತ್ಯಂತಿಕ ಸತ್ಯವನ್ನು ಬಿತ್ತರಿಸಿದೆ. ಅಧ್ಯಾತ್ಮದ ಕೈಂಕರ್ಯದ ಮೂಲಕ ಜನಮಾನಸ ತಿದ್ದಲು ಬಂದವರಲ್ಲಿ ಗದಗ ತಾಲೂಕಿನ ಹರ್ಲಾಪುರ ಗ್ರಾಮದ ಹಠಯೋಗ ಸಾಧಕ ಶ್ರೀ ಗುರು ಕೊಟ್ಟೂರೇಶ್ವರರು ಪ್ರಮುಖರು. ಇಂದಿಗೆ 150 ವರ್ಷಗಳ ಹಿಂದೆ ಜಾತಿ- ಮತ, ಅಜ್ಞಾನ, ಮೂಢನಂಬಿಕೆ, ಕಂಧಾಚಾರಗಳ ಸುಳಿಯಲ್ಲಿ ಸಿಲುಕಿ ನಲಗುತ್ತಿದ್ದ ಸಮಾಜದ ಕಣ್ತೆರೆಸಿ ಪ್ರೀತಿ, ವಾತ್ಸಲ್ಯ, ಮಾನವೀಯತೆಗಳನ್ನು ಬಿತ್ತಿ ಅವರ ಹೃದಯದ ತೋಟವನ್ನು ನಳನಳಿಸುವಂತೆ ಮಾಡಿದ ಗುರು ಕೊಟ್ಟೂರೇಶ್ವರರ ಕಾರ್ತಿಕೋತ್ಸವ ಹಾಗೂ ಲಕ್ಷದೀಪೋತ್ಸವ ನಿಮಿತ್ಯ ಈ ಲೇಖನ.
ಇಂದಿನ ಹೂವಿನ ಹಡಗಲಿ ತಾಲೂಕಿನ ಕೊಂಬಳಿ ಎಂಬ ಪುಟ್ಟ ಗ್ರಾಮದಲ್ಲಿ ಮಹೇಶ್ವರಯ್ಯ ಮತ್ತು ಗಂಗಾಂಬಿಕೆ ಎಂಬ ಜಂಗಮ ದಂಪತಿಗಳ ಪುಣ್ಯ ಉದರದಲ್ಲಿ ಕ್ರಿ.ಶ. 1807ರಲ್ಲಿ ಕೊಟ್ಟೂರೇಶ್ವರರು ಜನಿಸುತ್ತಾರೆ. ಕೊಟ್ಟೂರಿನ ಗುರು ಬಸವರಾಜರ ವರ್ರಸಾದದಿಂದ ಸತಿಪತಿಗಳ ಮುಗ್ಧ ಭಕ್ತಿಯು ಮಗುವಿನ ಜನನಕ್ಕೆ ಕಾರಣವಾಗುತ್ತದೆ.
ಬಾಲ್ಯದಲ್ಲಿಯೇ ಮನೆ ತೊರೆದು ನಿಂದಕರಿಂದ ನೋವು-ನಿಂದನೆಗಳನ್ನು ಸಹಿಸಿಕೊಂಡು ಹಸಿವು ತೃಷೆಗಳೆನ್ನದೆ ಊರೂರು ಅಲೆದು ಇತಿಹಾಸ ಪ್ರಸಿದ್ಧ ಕೊಪ್ಪಳದ ಗವಿಮಠವನ್ನು ಬಂದು ತಲುಪುತ್ತಾರೆ. ಶ್ರೀಮಠದ ಅಂದಿನ 14ನೇ ಪೀಠಾಧಿಪತಿಗಳಾದ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ ಕರಕಮಲ ಸಂಜಾತನಾಗಿ ಗವಿಸಿದ್ದೇಶ್ವರರ ಪರಮ ಆರಾಧಕನಾಗಿ ಅಧ್ಯಾತ್ಮ ವಿದ್ಯೆ ಕಲಿತು ಭವ ಬಂಧನಕ್ಕೆ ಸಿಲುಕದೆ ಲೋಕ ಕಲ್ಯಾಣಕ್ಕಾಗಿ ವಿರಾಗಿ ಆಗುತ್ತಾರೆ ಆಗ ಪೂಜ್ಯರು "ಕೊಟ್ಟೂರೇಶ" ಎಂಬ ನಾಮದೊಂದಿಗೆ "ನೀನು ನೆಲೆ ನಿಲ್ಲುವ ಸ್ಥಳ ಪಾವನವಾಗಲೆಂದು" ಹರಸಿ ಗವಿಮಠದಿಂದ ಬೀಳ್ಕೊಡುತ್ತಾರೆ.
ಅಂದು ಪೂಜ್ಯರು ಕೊಟ್ಟೂರೇಶ ಎಂಬ ನಾಮದೊಂದಿಗೆ ಗವಿಮಠದಿಂದ ಹೊರಟು ನೂರಾರು ಊರುಗಳನ್ನು ಸುತ್ತಿ ಕಪ್ಪತಗಿರಿಗೆ ಬರುತ್ತಾರೆ. ಅಲ್ಲಿ ಅನೇಕ ವಿಸ್ಮಯಗಳನ್ನು ಮೆರೆದು 1-ಮಂತ್ರಯೋಗ,2- ಲಯ ಯೋಗ,3- ಹಠಯೋಗ,4- ರಾಜ ಯೋಗಗಳೆಂಬ ನಾಲ್ಕು ಯೋಗಗಳನ್ನು ಸಾಧಿಸಿ ಸಿದ್ಧಾವಸ್ಥೆಯನ್ನು ತಲುಪಿ ಜಪ-ತಪ ಅನುಷ್ಠಾನಗೈದು ಅದ್ಭುತ ಶಕ್ತಿ ಪಡೆಯುತ್ತಾರೆ. ಮಲ್ಲಯ್ಯನ ದೇಗುಲದ ಮುಂದಿರುವ ಗಿರಿಯ ನೆತ್ತಿಯ ಮೇಲಿನ ದೀಪ ಮಾಲಿ ಸ್ತಂಭದಿಂದ ಕೆಳಗೆ ಇರುವ ಕೊಳ್ಳಕ್ಕೆ ಜಿಗಿದು ತಮ್ಮ ಅತ್ಯದ್ಭುತ ಶಕ್ತಿಯನ್ನು ಓರೆಗೆ ಹಚ್ಚುತ್ತಾರೆ.
ಮುಂದೆ ಹರ್ಲಾಪುರ ಗ್ರಾಮಕ್ಕೆ ಆಗಮಿಸಿ ಅಲ್ಲಿನ ಭಕ್ತರ ಒತ್ತಾಸೆಯ ಮೇರೆಗೆ ಅಲ್ಲಿಯೇ ನೆಲೆ ನಿಂತು ಲೋಕೋದ್ದಾರವೇ ಪರಮ ಗುರಿ ಎಂದು ಬಗೆದು ಅಧ್ಯಾತ್ಮದ ಬೆಳಕಿನಲ್ಲಿ ಧರ್ಮದ ದೇಗುಲ ಕಟ್ಟುತ್ತಾರೆ. ಮುಂದೆ ದಿನಗಳೆದಂತೆ ಶರೀರವು ಕೃಷವಾಗಿ ತಮ್ಮ ಮರಣದ ವಾರ್ತೆಯನ್ನು ಸಹಿತ ಭಕ್ತರಿಗೆ ಮುಂಚಿತವಾಗಿಯೇ ತಿಳಿಸಿ ಕ್ರಿಸ್ತ ಶಕ 1887 ರಲ್ಲಿ ಇಹದ ಬದುಕಿಗೆ ವಿದಾಯ ನೀಡುತ್ತಾರೆ.
ಬಡಜಂಗಮರ ಮನೆಯಲ್ಲಿ ಹುಟ್ಟಿದ ಸಾಮಾನ್ಯ ವ್ಯಕ್ತಿಯೋರ್ವನು ಅಸಾಮಾನ್ಯ ಸಾಧಕರಾಗಿ ಪರಿಪೂರ್ಣ ಎಂಬತ್ತು ವಸಂತಗಳನ್ನು ಪೂರೈಸಿ, ಮರಣವನ್ನು ಮಹಾನವಮಿ ಎಂದು ಬಗೆದು ಸಂಭ್ರಮದಿಂದ ಹರ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಕಣ್ಣೀರಿನ ಕಡಲ ಮಧ್ಯ ಲಿಂಗದಲ್ಲಿ ಲೀನವಾಗುತ್ತಾರೆ. ಪೂಜ್ಯರ ಯೋಗಿಕ ಕಾಯವನ್ನು ಸಕಲ ಸದ್ಭಕ್ತರು ಸೇರಿ ಶ್ರೀಮಠದಲ್ಲಿ ಸಮಾಧಿ ಮಾಡಿ ಅಲ್ಲೊಂದು ಗದ್ದಿಗೆ ನಿರ್ಮಿಸಿದ್ದಾರೆ. ಅಂದಿನಿಂದ ಪ್ರತಿ ವರ್ಷವೂ ಕಾರಹುಣ್ಣಿಮೆ ಕಳೆದು ಒಂಭತ್ತು ದಿನಕ್ಕೆ ಶ್ರೀಗಳ ಜಾತ್ರೆ, ವಿಜೃಂಭಣೆಯಿಂದ ಜರುಗುತ್ತದೆ ಹಾಗೂ ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ, ಲಕ್ಷ ದೀಪೋತ್ಸವ, ಪುರಾಣ ಪ್ರವಚನಗಳು ನಡೆಯುತ್ತವೆ.
ಹೀಗೆ ದೇಹ ಧರಿಸಿ ಬಂದ ಕೊಟ್ಟೂರೇಶ್ವರರು ದೇಹದ ಸುಖಕ್ಕೆ ಮನಸ್ಸು ಹರಿಸಲಿಲ್ಲ ಸ್ವಂತಕ್ಕೆ ಅಂಟಿಕೊಳ್ಳದವನೇ ಸಂತ ಎಂಬಂತೆ ಬದುಕಿನುದ್ದಕ್ಕೂ ಗವಿಸಿದ್ದೇಶ್ವರನ ಸ್ಮರಣೆಯಲ್ಲದೆ ಬೇರೇನನ್ನು ಬಯಸಲಿಲ್ಲ ಜಾತಿ ಮತಗಳ ಮಧ್ಯೆ ಇರುವ ಅಡ್ಡಗೋಡೆಗಳನ್ನು ಕೆಡವಿ, "ಮಾನವ ಕುಲಂ ಒಂದೇ ವಲಂ" ಎಂಬ ಪಂಪನ ವಾಣಿಯಂತೆ ಸಕಲವನ್ನು ಸಮೀಕರಿಸಿ ಸರ್ವಾರ್ಣ ದೃಷ್ಟಿಯಿಂದ ಸಮನ್ವಯಗೊಳಿಸಿದರು. ಅಲ್ಲಿ ಆತ್ಮ, ದೇವರು, ಕುಟುಂಬ, ಸಮಾಜ, ಉಚ್ಛ- ನೀಚ, ಬಡವ- ಧನಿಕ ಬೇರೆ ಬೇರೆಯಾಗಿ ಕಾಣಲಿಲ್ಲ, ಧರ್ಮ ಜಾತಿಗಳ ಕಟ್ಟಳೆಗಳಿಲ್ಲ, ಭಾಷೆ ಭಾವನೆಗಳ ಬಂಧನವಿಲ್ಲ, ಭೌಗೋಳಿಕ ಗಡಿಗಳಿಲ್ಲ ಹೀಗಾಗಿ ಕೊಟ್ಟೂರೇಶ್ವರರು ಒಬ್ಬ ಮಹಾತ್ಮರಾದರು. ಭಕ್ತಿಯಿಂದ ಬೇಡಿದವರಿಗೆ ಬೇಡಿದ್ದನ್ನು ಕೊಡುವ ದೈವತ್ವ ಸಾಧಿಸಿದ ಒಬ್ಬ ಅವತಾರಿ ಪುರುಷರಾದರು.
ಅಂತಹ ಪುಣ್ಯ ಪುರುಷರ ಕಾರ್ತಿಕೋತ್ಸವದ ಕಾರ್ಯಕ್ರಮಗಳಲ್ಲಿ ಧರ್ಮ-ಬೇದ ತೊರೆದು, ಜಾತಿ- ಪಂಥ ಮರೆತು ಎಲ್ಲರೂ ಒಂದಾಗಿ ಬೆರೆತು ಅವರ ತತ್ವಗಳನ್ನು ಪಾಲಿಸೋಣ ಮಹಾಮಹಿಮ ಶ್ರೀ ಗುರುಕೊಟ್ಟೂರೇಶ್ವರರ ದಿವ್ಯ ಕೃಪೆಗೆ ಪಾತ್ರರಾಗೋಣ.