ಅಧ್ಯಾತ್ಮಿಕತೆಯು ಸಾರ್ಥಕ ಬದುಕಿಗೊಂದು ದಿವ್ಯೌಷಧಿ: ಇಂಗಳೇಶ್ವರ

ಅಧ್ಯಾತ್ಮಿಕತೆಯು ಸಾರ್ಥಕ ಬದುಕಿಗೊಂದು ದಿವ್ಯೌಷಧಿ: ಇಂಗಳೇಶ್ವರ Spirituality is a panacea for a meaningful life: Ingaleshwar

ಅಧ್ಯಾತ್ಮಿಕತೆಯು ಸಾರ್ಥಕ ಬದುಕಿಗೊಂದು ದಿವ್ಯೌಷಧಿ: ಇಂಗಳೇಶ್ವರ 

ವಿಜಯಪುರ 05: ಆಧುನಿಕ ಜಗತ್ತು ಕೇವಲ ಉದ್ಯೋಗ, ಕೆಲಸ, ಸಂಪತ್ತು ಗಳಿಕೆಯತ್ತ ಮುಖ ಮಾಡುತ್ತಿರುವ ಇಂದಿನ ದಿನಗಳಲ್ಲಿ ಶ್ರಾವಣ ಮಾಸದಲ್ಲಿ ನಮ್ಮ ಜೀವನ-ಬದುಕು ಸುಂದರ ಮತ್ತು ಸಾರ್ಥಕತೆ ಪಡೆಯಲು ಸತ್ಸಂಗಗಳು ಅವಶ್ಯಕ ಎಂದು ನವರಸಪುರ ಹಿರಿಯ ನಾಗರೀಕರ ವೇದಿಕೆಯ ಅಧ್ಯಕ್ಷ ಎಸ್‌.ಎಲ್‌.ಇಂಗಳೇಶ್ವರ ಅವರು ಅಭಿಪ್ರಾಯಪಟ್ಟರು.  

ನಗರದ ಅಥಣಿ ರಸೆಯಲ್ಲಿರುವ ಅಲ್‌-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಸೇನಾ ನಗರದ ಶಿವಾಲಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಜರುಗುತ್ತಿರುವ ಶಿರಹಟ್ಡಿಯ ಜಗದ್ಗುರು ಫಕೀರೇಸ್ವರ ಶಿವಯೋಗಿಗಳ ಚರಿತಾಮೃತ ಪ್ರವಚನದಲ್ಲಿ ದಿ. 3ರಂದು ಫಕೀರೇಶ್ವರ ತೊಟ್ಟಿಲು ಹಾಕುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. 

ಈ ಶಿವಾಲಯ ದೇವಸ್ಥಾನದಲ್ಲಿ ಹಳ್ಳಿಗಳಲ್ಲಿ ನಡೆಯುವಂತೆ ಪ್ರತಿಯೊಂದು ಧಾರ್ಮಿಕ, ಸಾಮಾಜಿಕ ಮತ್ತು ಶರಣ ಸಂಸ್ಕೃತಿ, ವಚನ ಸಾಹಿತ್ಯ, ಪ್ರತಿಭಾ ಪುರಸ್ಕಾರ, ಸೈನಿಕರನ್ನು ಗೌರವಿಸುವುದು ಮತ್ತು ಇನ್ನಿತರ ಸಮಾಜಮುಖಿಯಾದ ರಚನಾತ್ಮಕ ಕಾರ್ಯಕ್ರಮಗಳು ನಡೆಯುತ್ತಿರುವುದು ಒಂದು ವಿಶೇಷತೆ. ಇದು ನಗರ ಪ್ರದೇಶದ ಒಂದು ಬಡಾವಣೆಯಾಗಿದ್ದರೂ ನಮ್ಮ ಗ್ರಾಮಗಳಲ್ಲಿ ಇರುವ ಸಂಸ್ಕೃತಿ-ಸಂಸ್ಕಾರ, ಧಾರ್ಮಿಕ ಸಂಪ್ರದಾಯ, ಸಾಮಾಜಿಕ ಪದ್ಧತಿ, ಆಚರಣೆಗಳು ನಡೆಯುತ್ತಿರುವುದಕ್ಕೆ ಒಂದು ಮಾದರಿ ಬಡಾವಣೆಯಾಗಿದೆ ಎಂದರು. ದೇವಸ್ಥಾನದಲ್ಲಿ ಜರುಗುವ ಪ್ರವಚನ, ಪುರಾಣ, ಕೀರ್ತನೆ, ಭಜನೆ, ಸತ್ಸಂಗ, ಬೆಳದಿಂಗಳ ಬೆಳಕು ಕಾರ್ಯಕ್ರಮ, ಮಹಾಶಿವರಾತ್ರಿ ಉತ್ಸವ, ನವರಾತ್ರಿ ಉತ್ಸವ ಹೀಗೇ ಹತ್ತು ಹಲವಾರಗಳಲ್ಲಿ ನೂರಾರು ಬಹಳ ಭಕ್ತಿ-ಭಾವದಿಂದ ಪಾಲ್ಗೊಂಡು ನಮ್ಮ ಜನಪದ ಸೊಗಡು-ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಿದ್ದಾರೆ ಎಂದರು.  

ನಂತರ ಮುತ್ತೈದೆಯರು ಫಕೀರೇಶ್ವರನಿಗೆ ಚನ್ನಬಸು ಎಂದು ನಾಮಕರಣ ಮಾಡುತ್ತಾ, ತೊಟ್ಟಿಲೊಳಗಿನ ಕಂದ ತೋಳ ಬೀಸುವ ಚಂದ 

 ರಟ್ಟಿ ನೊಂದವು ಎಲೆ ಕಂದ 

 ನಿಮ್ಮವ್ವ ದೃಷ್ಟಿ ಮುರಿಲಾಕೆ ಅರಿಯಳು 

 ಎಂಬ ಜಾನಪದ ಜೋಗುಳ ಪದಗಳನ್ನು ಹಾಡುತ್ತಾ, ಬಹಳ ಸಡಗರ ಮತ್ತು ಸಂಭ್ರಮದಿಂದ ಫಕೀರೇಶ್ವರನನ್ನು ತೊಟ್ಟಿಲಿನಲ್ಲಿ ಹಾಕಿ ನಾಮಕರಣ ಮಾಡಿದರು. ಮಕ್ಕಳ ಅಪೇಕ್ಷೆ ಇರುವ ಮುತ್ತೈದೆಯರನ್ನು ತೊಟ್ಟಿಲು ಕೆಳಗಡೆ ಕೂಡ್ರಿಸಿ ಆ ದೇವರು ಅವರಿಗೆ ಮಕ್ಕಳ ಭಾಗ್ಯ ನೀಡಲೆಂದು ಹಾರೈಸಿದರು. ನಂತರ ಎಲ್ಲರಿಗೂ ನಾಮಕರಣದ ಗುಗ್ಗರಿ ಹಂಚಿದರು.  

ದೇವಸ್ಥಾನದ ಅಧ್ಯಕ್ಷ ಗುರುಬಸಯ್ಯ ಹಿರೇಮಠ, ಭರಮಣ್ಣ ಕಡಕೋಳ, ಶಿವಯೋಗಿ ಹತ್ತಿ, ಶ್ರೀಶೈಲ ಅವಜಿ, ಅರವಿಂದ ಹಂಗರಗಿ, ರಾಜಶೇಖರ ಉಮರಾಣಿ, ನಿಂಗಪ್ಪ ನಿಂಬಾಳಕರ, ಕೆ.ಜೆ.ಕೋಟ್ಯಾಳ, ಆರ್‌.ಜಿ.ಉತ್ತರಕರ, ಆನಂದ ಕಡಕೋಳ, ಸ್ವಪ್ನೀಲ್ ಚವ್ಹಾಣ, ಲಕ್ಷ್ಮೀ ದೇವಸ್ಥಾನದ ಅಧ್ಯಕ್ಷೆ ಶಾಂತಾ ಕಪಾಳಿ, ಶೋಭಾ ಚವ್ಹಾಣ, ಜ್ಯೋತಿ ಜೊಳ್ಳಿ, ಸಾವಿತ್ರಿ ಅಗ್ರಾಣಿ, ಶಕುಂತಲಾ ಅಂಕಲಗಿ, ಸುನೀತಾ ವಳಸಂಗ ಇನ್ನಿತರರು ಉಪಸ್ಥಿತರಿದ್ದರು. 

ಶ್ರಾವಣ ಮಾಸದ ಪ್ರಯುಕ್ತ ನಡೆಯುತ್ತಿರುವ ಈ ಪ್ರವಚನದಲ್ಲಿ ಸುತ್ತಮುತ್ತಲಿನ ಬಡಾವಣೆಗಳ ನೂರಾರು ಮಕ್ಕಳು, ಯುವಕರು, ಹಿರಿಯರು ಮತ್ತು ಮಹಿಳೆಯರು ಸೇರಿದಂತೆ ನೂರಾರು ಜನರು ಭಾಗವಹಿಸಿ, ನಂತರ ಮಹಾಪ್ರಸಾದ ಸೇವಿಸಿ, ಪರಶಿವನ ಅನುಗ್ರಹಕ್ಕೆ ಪಾತ್ರರಾದರು.