ಬಡ ಕೂಲಿಕಾರ್ಮಿಕನ ಅಂತ್ಯಕ್ರಿಯೆ ನೆರವೇರಿಸಿದ ಸಾಮಾಜಿಕ ಕಾರ್ಯಕರ್ತರು

ಬಡ ಕೂಲಿಕಾರ್ಮಿಕನ ಅಂತ್ಯಕ್ರಿಯೆ,

ಬಡ ಕೂಲಿಕಾರ್ಮಿಕನ ಅಂತ್ಯಕ್ರಿಯೆ ನೆರವೇರಿಸಿದ ಸಾಮಾಜಿಕ ಕಾರ್ಯಕರ್ತರು

ಖಾನಾಪುರ 25: ರೈಲು ಇಳಿಯುವಾಗ ಗಾಯಗೊಂಡು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಡ ಹಾಗೂ ನಿರ್ಗತಿಕ ಕೂಲಿಕಾರ್ಮಿಕರೊಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರಿಂದ ಪಟ್ಟಣದ ಸಾಮಾಜಿಕ ಕಾರ್ಯಕರ್ತರು ಮೃತರ ಅಂತ್ಯಕ್ರಿಯೆಯನ್ನು ಧಾರ್ಮಿಕ ವಿಧಿ-ವಿಧಾನದೊಂದಿಗೆ ನೆರವೇರಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಇತ್ತಿಚೇಗೆ ನಡೆಯಿತು. 

ಪಶ್ಚಿಮ ಬಂಗಾಳ ಮೂಲದ ಪೀಟರ್ ಬಪ್ಪಾ ಕಟನಿ ಎಂಬ ವ್ಯಕ್ತಿ ಹಲವು ವರ್ಷಗಳ ಹಿಂದೆ ಹುಟ್ಟೂರನ್ನು ತೊರೆದು ಗೋವಾ ರಾಜ್ಯಕ್ಕೆ ಬಂದು ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ತಮಗೊದಗಿದ ಬಡತನದಿಂದ ಬೆಂದಿದ್ದ ಅವರು, ಉದರಪೋಷಣೆಗಾಗಿ ಹೋಟೆಲ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡು ದಿನಗಳನ್ನು ಕಳೆಯುತ್ತಿದ್ದರು. ಕೆಲ ದಿನಗಳ ಹಿಂದೆ ಗೋವಾದಿಂದ ಹುಬ್ಬಳ್ಳಿಯತ್ತ ಸಾಗುತ್ತಿದ್ದ ರೈಲನ್ನೇರಿ ಹೊರಟಿದ್ದ ಅವರು ಮಾರ್ಗಮಧ್ಯದ ನಾಗರಗಾಳಿ-ತಾವರಗಟ್ಟಿ ನಿಲ್ದಾಣಗಳ ಬಳಿ ಚಲಿಸುತ್ತಿದ್ದ ರೈಲಿನಿಂದ ಇಳಿದು ಗಾಯಗೊಂಡಿದ್ದರು.  

ಹಳಿದಾಟಿ ಹೊರಬಂದಿದ್ದ ಅವರು, ರೈಲು ಇಳಿಯುವಾಗ ಗಾಯಗೊಂಡಿದ್ದರಿಂದ ತಾವರಗಟ್ಟಿ ಬಳಿ ಧಾರವಾಡ-ರಾಮನಗರ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದರು. ನಿತ್ರಾಣರಾಗಿ ಬಿದ್ದಿದ್ದ ಇವರನ್ನು ಗಮನಿಸಿದ ದಾರಿಹೋಕ ರೊಬ್ಬರು 108 ವಾಹನವನ್ನು ಸಂಪರ್ಕಿಸಿ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದರು.  

ಖಾನಾಪುರ ಆಸ್ಪತ್ರೆಗೆ ಆಗಮಿಸಿದ ಪೀಟರ್ ಆರೋಗ್ಯಸ್ಥಿತಿ ಪರೀಕ್ಷಿಸಿ ಪ್ರಥಮೋಪಚಾರ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬಿಮ್ಸ್‌ಗೆ ದಾಖಲಿಸಿದ್ದರು. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಖಾನಾಪುರ ಠಾಣೆಯ ಪೊಲೀಸರಿಗೆ ವೈದ್ಯರು ಮಾಹಿತಿ ನೀಡಿದ್ದರು. ಹಲವು ದಿನಗಳ ಕಾಲ ಬಿಮ್ಸ್‌ನಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಪೀಟರ್ ನ.10ರಂದು ಇಹಲೋಕ ತ್ಯಜಿಸಿದ್ದರು.  

ಇತ್ತ ಪೀಟರ್ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಅವರ ಬಳಿ ಇದ್ದ ಮೊಬೈಲ್ ಜಾಡುಹಿಡಿದು ಅವರ ಮೂಲವನ್ನು ಪತ್ತೆ ಹಚ್ಚಿದ್ದರು. ಪೀಟರ್ ಮರಣದ ಸುದ್ದಿಯನ್ನು ಅವರ ಸಂಬಂಧಿಗಳಿಗೆ ತಿಳಿಸಿದ್ದರು. ಆದರೆ ಪೊಲೀಸರಿಂದ ಪೀಟರ್ ಸಾವಿನ ಸುದ್ದಿ ಕೇಳಿದ ಸಂಬಂಧಿಕರು, ಪೊಲೀಸರಿಗೆ "ತಾವು ತೀವ್ರ ಬಡವರಿದ್ದು, ಪೀಟರ್ ಶವವನ್ನು ದೂರದ ಕರ್ನಾಟಕದಿಂದ ಪಶ್ಚಿಮ ಬಂಗಾಳಕ್ಕೆ ತಂದು ಅಂತ್ಯಕ್ರಿಯೆ ಮಾಡುವಷ್ಟು ಮತ್ತು ಅವರ ಅಂತಿಮದರ್ಶನಕ್ಕಾಗಿ ಪಶ್ಚಿಮ ಬಂಗಾಳದಿಂದ ಕರ್ನಾಟಕಕ್ಕೆ ಬಂದು ಹೋಗುವಷ್ಟು ಸ್ಥಿತಿವಂತರಲ್ಲ. ತೀವ್ರವಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಅವರ ಅಂತ್ಯಕ್ರಿಯೆಯನ್ನು ಕ್ರಿಶ್ಚಿಯನ್ ಧರ್ಮದ ವಿಧಿ-ವಿಧಾನದೊಂದಿಗೆ ನೀವೇ ನೆರವೇರಿಸಿ ಎಂದು ಪೊಲೀಸರನ್ನು ವಿನಂತಿಸಿದ್ದರು. 

ಕುಟುಂಬಸ್ಥರು ಪೀಟರ್ ಶವ ಸ್ವೀಕರಿಸಲು ನಿರಾಕರಿಸಿದ್ದರಿಂದ ಪೊಲೀಸರು ಪಟ್ಟಣದ ಕದಂಬ ಫೌಂಡೇಶನ್‌ನ ಮುಖ್ಯಸ್ಥ ಹಾಗೂ ಸಾಮಾಜಿಕ ಕಾರ್ಯಕರ್ತ ಜಾರ್ಡನ್ ಗೋನ್ಸಾಲ್ವಿಸ್ ಅವರಿಗೆ ಪೀಟರ್ ಸಾವಿನ ವಿಷಯ ತಿಳಿಸಿದ್ದರು. ಕೂಡಲೇ ಕಾರ್ಯತತ್ಪರರಾದ ಜಾರ್ಡನ್, ಪೀಟರ್ ಸಾವಿನ ವಿಷಯ ಮತ್ತು ಸಧ್ಯದ ಸ್ಥಿತಿಗತಿಯ ಬಗ್ಗೆ ಫಾದರ್ ಬಿಶಪ್ ಅವರಿಗೆ ವಿವರಿಸಿ ಅವರ ಅನುಮತಿಯೊಂದಿಗೆ ಪಟ್ಟಣದಿಂದ ಬೆಳಗಾವಿ ಬಿಮ್ಸ್‌ಗೆ ತೆರಳಿ ಅಲ್ಲಿಂದ ಪೀಟರ್ ಶವವನ್ನು ವಶಕ್ಕೆ ಪಡೆದರು.  

ಶವವನ್ನು ಪಟ್ಟಣಕ್ಕೆ ತಂದು ಪಟ್ಟಣದ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ಫೌಂಡೇಶನ್‌ನ ಪದಾಧಿಕಾರಿಗಳು, ಪೊಲೀಸರು ಮತ್ತು ಧರ್ಮಗುರುಗಳ ಸಮ್ಮುಖದಲ್ಲಿ ಶುಕ್ರವಾರ ಅಂತ್ಯಕ್ರಿಯೆಯನ್ನು ವಿಧಿವತ್ತಾಗಿ ನೆರವೇರಿಸಿದರು. ಕದಂಬ ಫೌಂಡೇಶನ್ ಪದಾಧಿಕಾರಿಗಳು, ಕ್ರಿಶ್ಚಿಯನ್ ಧರ್ಮದ ಬಾಂಧವರು ಇದ್ದರು.