ಬಿ. ಬೆಳಗಲ್ಲು ಗ್ರಾಮದಲ್ಲಿ ಸಮಾಜ ಕಾರ್ಯ ವಿಶೇಷ ಶಿಬಿರಕ್ಕೆ ಚಾಲನೆ

ಬಿ. ಬೆಳಗಲ್ಲು ಗ್ರಾಮದಲ್ಲಿ ಸಮಾಜ ಕಾರ್ಯ ವಿಶೇಷ ಶಿಬಿರಕ್ಕೆ ಚಾಲನೆ  Social work special camp launched in B. Belagallu village

ಬಳ್ಳಾರಿ, ಆ. 4: ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ವತಿಯಿಂದ ಬಳ್ಳಾರಿ ತಾಲೂಕಿನ ಬಿ. ಬೆಳಗಲ್ಲು ಗ್ರಾಮದಲ್ಲಿ ಆಯೋಜಿಸಲಾಗಿರುವ ಏಳು ದಿನಗಳ ಸಮಾಜ ಕಾರ್ಯ ವಿಶೇಷ ಶಿಬಿರಕ್ಕೆ ಬಳ್ಳಾರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್‌. ತಿಪ್ಪೇಸ್ವಾಮಿ ಅವರು ಮಂಗಳವಾರ ಚಾಲನೆ ನೀಡಿದರು.  

ಬಳಿಕ ಮಾತನಾಡಿದ ಅವರು, ಸಮಾಜಮುಖಿ ಕಾರ್ಯಗಳಲ್ಲಿ ಎಂಎಸ್ಡಬ್ಲ್ಯು ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ. ಗ್ರಾಮೀಣ ಜನರ ಸಮಸ್ಯೆಗಳು, ಅವರ ಜೀವನಶೈಲಿ ಹಾಗೂ ಸಾಮಾಜಿಕ ಸವಾಲುಗಳನ್ನು ನೇರವಾಗಿ ಅರಿತುಕೊಳ್ಳಲು ಇಂತಹ ಶಿಬಿರಗಳು ಉತ್ತಮ ವೇದಿಕೆಯಾಗಿವೆ ಎಂದು ಹೇಳಿದರು.  ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಂಡು ಶಿಬಿರದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಉತ್ಸಾಹದಿಂದ ಭಾಗವಹಿಸಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ವಿ. ಲೋಕೇಶ್ ಮಾತನಾಡಿ, ವಿಶ್ವವಿದ್ಯಾಲಯಗಳು ಕೇವಲ ಶಿಕ್ಷಣ ನೀಡುವ ಕೇಂದ್ರಗಳಾಗಿರದೆ ಸಮಾಜದ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಸಮುದಾಯಗಳು ವಿಶ್ವವಿದ್ಯಾಲಯದ ಸಮಾಜಮುಖಿ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಂಡು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.  

ಶಿಬಿರದ ಅವಧಿಯಲ್ಲಿ ಗ್ರಾಮ ಸ್ವಚ್ಛತಾ ಅಭಿಯಾನ, ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಜಾಗೃತಿ, ಪರಿಸರ ಸಂರಕ್ಷಣೆ, ಸಸಿ ನೆಡುವಿಕೆ, ಸರ್ಕಾರಿ ಯೋಜನೆಗಳ ಅರಿವು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವಜನರಲ್ಲಿ ಕೌಶಲ್ಯಾಭಿವೃದ್ಧಿ, ಶಿಕ್ಷಣದ ಮಹತ್ವ ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಆಯೋಜಕರು ತಿಳಿಸಿದರು.  

ಎಂಎಸ್ಡಬ್ಲ್ಯು ವಿಭಾಗದ ಮುಖ್ಯಸ್ಥೆ ಪ್ರೊ. ಗೌರಿ ಮಾಣಿಕ್ ಮಾನಸ ಅವರು ಶಿಬಿರದ ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಶಿಬಿರದ ಸಂಯೋಜಕ ಡಾ. ಕುಮಾರ್ ಅವರು ಸ್ವಾಗತಿಸಿ, ಶಿಬಿರದ ರೂಪುರೇಷೆಗಳನ್ನು ವಿವರಿಸಿದರು.  

ಕಾರ್ಯಕ್ರಮದಲ್ಲಿ ಡಾ. ಹನುಮಂತ ಜಿ., ಎಂಎಸ್ಡಬ್ಲ್ಯು ವಿಭಾಗದ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ಸ್ವಯಂಸೇವಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.