ಇನ್ನರ ವ್ಹೀಲ್ ಸಂಸ್ಥೆಯ ಬೆಳ್ಳಿ ಹಬ್ಬ: ಹೆಣ್ಣು ಮಕ್ಕಳ ಕವಿಗೋಷ್ಠಿ
ಅಥಣಿ 27: ರೋಟರಿ ಮತ್ತು ಇನ್ನರ್ ವ್ಹೀಲ್ ಸಂಸ್ಥೆಗಳು ಸಾಮಾಜಿಕ, ಸೇವಾ, ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೂ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡಿರುವುದು ಅಭಿನಂದನಾರ್ಹ ಸಂಗತಿ ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಹೇಳಿದರು.
ಅವರು ಇನ್ನರ ವ್ಹೀಲ್ ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಯುಕ್ತ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಖೋತ್ ಕಲ್ಯಾಣ ಮಂಟಪದಲ್ಲಿ ಹೆಣ್ಣು ಮಕ್ಕಳಿಗಾಗಿ ಆಯೋಜಿಸಿದ್ದ ಕವಿ ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಅಥಣಿಯಲ್ಲಿ ಕಳೆದ 25 ವರ್ಷಗಳಿಂದ ರೋಟರಿ ಮತ್ತು ಇನ್ನರ ವ್ಹೀಲ್ ಸಂಸ್ಥೆಗಳು ಜನಪರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಅಥಣಿ ಜನರ ಹೃದಯ ಗೆದ್ದುಕೊಂಡಿವೆ ಎಂದ ಅವರು ಈ ಎರಡೂ ಸಂಸ್ಥೆಗಳು ಕವಿ ಗೋಷ್ಠಿ ಆಯೋಜಿಸುವ ಮೂಲಕ ಕವಿಗಳ ಪ್ರತಿಭೆಗೆ ಸುವರ್ಣಾವಕಾಶ ಕಲ್ಪಿಸಿರುವುದು ಶ್ಲಾಘನೀಯ ಕಾರ್ಯ ಎಂದರು.
ಕವಿ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ, ಕಳೆದ ವರ್ಷ ರೋಟರಿ ಕ್ಲಬ್ ನ ಬೆಳ್ಳಿ ಹಬ್ಬದ ಪ್ರಯುಕ್ತ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಅಥಣಿಯಲ್ಲಿ ಆಚರಿಸಿದಂತೆ ಈ ವರ್ಷ ಇನ್ನರ ವ್ಹೀಲ್ ಸಂಸ್ಥೆ ಪ್ರಾರಂಭಗೊಂಡು 25 ವರ್ಷದ ಅಂಗವಾಗಿ 25 ವಿಶೇಷ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗುವುದು ಎಂದು ಹೇಳಿದರು.
ರೋಟರಿ ಸಂಸ್ಥೆ ಅಧ್ಯಕ್ಷ ಅರುಣ ಸೌದಾಗರ, ಕಾರ್ಯದರ್ಶಿ ಸಚಿನ ದೇಸಾಯಿ, ಇನ್ನರ್ ವೀಲ್ ಅಧ್ಯಕ್ಷೆ ತೃಪ್ತಿ ಕುಲಕರ್ಣಿ, ಕಾರ್ಯದರ್ಶಿ ಲಲಿತಾ ಮೇಕನಮರಡಿ ಸೇರಿದಂತೆ ರೋಟರಿ ಪರಿವಾರದ ಅನೇಕರು ಉಪಸ್ಥಿತರಿದ್ದರು. 17 ಜನ ಕವಿಗಳು ತಮ್ಮ ಕವನವಾಚನ ಮಾಡಿದರು.