ಸಿದ್ದರಾಮೇಶ್ವರರ ಆದರ್ಶ, ತತ್ವಗಳನ್ನು ಯುವ ಪೀಳಿಗೆಗೆ ತಿಳಿಸುವುದು ಅಗತ್ಯ: ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ
ಕಾರವಾರ 15: ಇಂದಿನ ಕಾಲಮಾನದಲ್ಲಿ ಶಿವಯೋಗಿ ಸಿದ್ದರಾಮೇಶ್ವರಂತಹ ಮಹಾನ ವ್ಯಕ್ತಿಗಳ ಆದರ್ಶ, ತತ್ವಗಳು ಅವರ ಸಾಧನೆಗಳನ್ನು ಯುವ ಪೀಳಿಗೆಯು ತಿಳಿದುಕೊಳ್ಳುವುದು ಅಗತ್ಯವಾಗಿದ್ದು, ಅವುಗಳನ್ನು ಪಾಲನೆ ಮಾಡುವುದರ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಶಿವಯೋಗಿ ಸಿದ್ದ ರಾಮೇಶ್ವರ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಮಹಾನ್ ದಾರ್ಶನಿಕರುಸ್ವಾರ್ಥಿಗಳಾಗದೇ ಸಮಾಜಮುಖಿಯಾಗಿ, ತಮ್ಮ ಜ್ಞಾನ,ಭಕ್ತಿಯನ್ನು ಧಾರೆ ಎಳೆದು ಸಮಾಜದ ಒಳತಿಗಾಗಿ, ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವುದರಿಂದ ಅವರು ನಡೆದು ಬಂದ ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗಲಿ ಎಂದು ಸರ್ಕಾರ ಜಯಂತಿಗಳನ್ನು ಆಚರಿಸಿಕೊಂಡು ಬಂದಿದೆ ಎಂದರು.ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು. ಆದ್ದರಿಂದ ವಿದ್ಯಾರ್ಥಿಗಳು ಕೇವಲ ಅಂಕಪಟ್ಟಿಗೆ ಸೀಮಿತವಾಗದೆ ವ್ಯಕ್ತಿತ್ವವನ್ನು ರೂಪಿಸಿಕೊಂಡು ದೇಶಕ್ಕೆ, ಸಮಾಜಕ್ಕೆ,ತಂದೆ ತಾಯಿಗಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿ. ಕೇವಲ ಅಧಿಕಾರಕ್ಕೆ ಬೆಲೆಕೊಡುವ ವ್ಯಕ್ತಿಗಳಾಗದೆ ವ್ಯಕ್ತಿತ್ವಕ್ಕೆ ಬೆಲೆ ಕೊಡುವಂತ ಉತ್ತಮ ಪ್ರಜೆಗಳಾಗಿ ಚಿಗುರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.ಹಿಂದೂ ಹೈಸ್ಕೂಲ್ ನ ಶಿಕ್ಷಕಿ ವನಿತಾ ಶೆಟ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, 12 ನೇ ಶತಮಾನದ ವ್ಯಕ್ತಿಯನ್ನು ಇಂದಿಗೂ ಸ್ಮರಿಸಿಕೊಳ್ಳಲು ಅವರ ಹಾಕಿಕೊಟ್ಟ ಆದರ್ಶ, ತತ್ವ ಮಾರ್ಗಗಳು, ಸಾಧನೆಗಳು ಕಾರಣವಾಗಿದ್ದು ಇವು ಪ್ರತಿಯೊಬ್ಬರಿಗೂ ದಾರಿ ದೀಪವಾಗಿದೆ. ಶಿವನನ್ನೇ ಧರೆಗೆ ಇಳಿಸಿದ ಮಹಾನ್ ವ್ಯಕ್ತಿ ಶಿವಯೋಗಿ ಸಿದ್ದರಾಮ ರವರು ಎಂದರು.ವೈದಿಕ ಧರ್ಮದ ಮೌಡ್ಯತೆ, ಮೇಲುಕೀಳು, ವರ್ಣಧರ್ಮ ಶ್ರೇಣೀಕರಣ, ಸಂಪ್ರದಾಯಗಳಿಂದ ದೂರ ಉಳಿದು ಎಲ್ಲರೂ ಸಮಾನರು ಎಂಬ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಚಿಂತನೆಯನ್ನು ಆ ಕಾಲದಲ್ಲೇ ಹುಟ್ಟುಹಾಕಿದವರು. ಕೆರೆ ಕಟ್ಟೆಗಳನ್ನು, ದೇವಾಲಯಗಳು, ಅನ್ನದಾಸೋಹ ಕಟ್ಟಡಗಳನ್ನು ಕಟ್ಟಿದವರು ಹಾಗೆಯೇ ಸಾಮೂಹಿಕ ವಿವಾಹಗಳನ್ನು ಮಾಡಿಸಿದವರು. ಇವರು ದೇವರ ಬಗ್ಗೆ ಅಪಾರ ಭಕ್ತಿಯುಳ್ಳ ಶಿವಭಕ್ತರಾಗಿ, ಕರ್ಮಯೋಗಿಯಾಗಿ ಅಕ್ಷರಜ್ಞಾನದಿಂದ ವಚನಗಳನ್ನು ರಚಿಸುವ ಮೂಲಕ ಜ್ಞಾನಯೋಗಿಗಳಾಗಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ಎಂ ನಾಯ್ಕ, ಅಧಿಕಾರಿಗಳು, ಸಿಬ್ಬಂದಿಗಳು, ಶಿವಯೋಗಿ ಸಿದ್ದರಾಮೇಶ್ವರ ಸಮುದಾಯದ ಅಧ್ಯಕ್ಷ ಭರಮಪ್ಪ ಕಟ್ಟಿಮನಿ,ಪದವಿ ಪೂರ್ವ ಕಾಲೇಜಿನ ಉಪ ನಿರ್ದೇಶಕ, ಸೆಂಟ್ ಜೋಸೆಫ್, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.