ಢಾಕ .22 ಭಾರತ ಮತ್ತು ಬಾಂಗ್ಲಾದೇಶ ನಡುವೆ ಶುಕ್ರವಾರ ನಡೆಯುವ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ಶೇಖ್ ಹಸೀನಾ ಅವರು ಢಾಕಾದಿಂದ ವಿಶೇಷ ವಿಮಾನದ ಮೂಲಕ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಇಂದು ಈಡನ್ ಗಾರ್ಡನ್ನಲ್ಲಿ ಗುಲಾಬಿ ಚೆಂಡಿನೊಂದಿಗೆ ನಡೆಯಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಹಾಜರಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರಿಗೆ ಆಹ್ವಾನ ನೀಡಿದ್ದರು. ಹಸೀನಾ ಮತ್ತು ಅವರ ಪರಿವಾರ, ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಎಚ್ಎಸ್ಐಎ) ವಿಶೇಷ ವಿಮಾನದ ಮೂಲಕ ಬೆಳಿಗ್ಗೆ 10.15 ಕ್ಕೆ ಕೋಲ್ಕತ್ತಾಕ್ಕೆ ಹೊರಟಿತು ಎಂದು ಡೈಲಿ ಸ್ಟಾರ್ ವರದಿ ಮಾಡಿದೆ. ವಿಮಾನವು ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 10:40 ಕ್ಕೆ (ಭಾರತೀಯ ಸಮಯ) ಬಂದು ಇಳಿದಿದೆ. ಬಾಂಗ್ಲಾದೇಶದ ಪ್ರಧಾನಿ ಮಧ್ಯಾಹ್ನ 12.30 ಕ್ಕೆ (ಸ್ಥಳೀಯ ಕಾಲಮಾನ) ಈಡನ್ ಗಾರ್ಡನ್ಸ್ ಕ್ರೀಡಾಂಗಣಕ್ಕೆ ತೆರಳಲಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನಜರ್ಿ ಅವರೊಂದಿಗೆ ಟೆಸ್ಟ್ ಪಂದ್ಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಸೀನಾ ಅವರು ಕೋಲ್ಕತ್ತಾದಿಂದ ಬಿಮನ್ ಬಾಂಗ್ಲಾದೇಶ ಏರ್ ಲೈನ್ಸ್ ವಿಶೇಷ ವಿಮಾನ ಇಂದು ರಾತ್ರಿ 10 ಗಂಟೆಗೆ (ಸ್ಥಳೀಯ ಸಮಯ) ಹೊರಟು ರಾತ್ರಿ 11.30 ಕ್ಕೆ (ಬಾಂಗ್ಲಾದೇಶ ಸಮಯ) ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಎಚ್ಎಸ್ಐಎ) ತಲುಪಲಿದೆ.