ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹರಕಂಗಿ ನಿಧನ ಜಿಲ್ಲಾಧಿಕಾರಿಗಳಿಂದ ಅಂತಿಮ ನಮನ

ಹಾವೇರಿ24: ಹಿರಿಯ ಸ್ವಾತಂತ್ರ್ಯ ಯೋಧರಾದ ಪರಮಣ್ಣ ಹರಕಂಗಿ ಅವರು ನವಂಬರ್ 24ರ ಮುಂಜಾನೆ ನಿಧನರಾಗಿದ್ದು, ಮೃತರ ಅಂತಿಮ ಕ್ರಿಯೆಯನ್ನು ಇಂದು ಸಂಜೆ ನೆಗಳೂರ ಗ್ರಾಮದಲ್ಲಿ ನೆರವೇರಿಸಲಾಯಿತು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ನೆಗಳೂರಿಗೆ ಭೇಟಿ ನೀಡಿ ಮೃತ ಪರಮಣ್ಣ ಹರಕಂಗಿ ಅವರ ಅಂತಿಮ ದರ್ಶನಪಡೆದು ನಮನ ಸಲ್ಲಿಸಿದರು. 

93 ವರ್ಷ ವಯೋಮಾನದ ಪರಣ್ಣ ಅವರು 08 ಆಗಸ್ಟ್ 1926ರಲ್ಲಿ ನೆಗಳೂರ ಗ್ರಾಮದಲ್ಲಿ ಜನಿಸಿ ತನ್ನ 16ನೆಯ ವರ್ಷದಲ್ಲಿ ಹುತಾತ್ಮ ಮೈಲಾರ ಮಹದೇವಪ್ಪ ಅವರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದರು. ಬ್ರಿಟಿಷರ್ ವಿರುದ್ಧ  ಸಕ್ರೀಯವಾಗಿ ಹೋರಾಟದಲ್ಲಿ ತೊಡಗಿ ಭಾರತ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮುಡಪಾಗಿಟ್ಟಿದ್ದರು. ಜೈಲುವಾಸ ಅನುಭವಿಸಿದ್ದರು. 

      ಪ್ರಸ್ತುತ ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಸದಸ್ಯರಾಗಿ, ಸ್ವಾತಂತ್ರ್ಯ ಹೋರಾಟಗಾರರ ಸಂಘದ ಸಕ್ರೀಯ ಸದಸ್ಯರಾಗಿ ಚಟುವಟಿಕೆಯಲ್ಲಿ ನಿರತರಾಗಿದ್ದ ಪರಮಣ್ಣ ಹರಕಂಗಿ ಅವರು ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಪರಮಣ್ಣ ಹರಕಂಗಿ ಅವರ ಆತ್ಮ ಚಿತ್ರೆ ಸಂಗ್ರಾಮದ ನೆನಪುಗಳನ್ನು ಹೊರತಂದಿರುವುದು ಸ್ಮರಿಸಬಹುದಾಗಿದೆ. ಮೃತರು 10 ಜನ ಮಕ್ಕಳು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.