ಮಹಿಳೆಯರ ಪ್ರತಿಭೆಗೆ ಪ್ರೋತ್ಸಾಹ ನೀಡಲು ‘ಕಾಂತಿಯ ಹೊಸ ಕ್ರಾಂತಿ’ ಕಾರ್ಯಾಗಾರ

ಮಹಿಳೆಯರ ಪ್ರತಿಭೆಗೆ ಪ್ರೋತ್ಸಾಹ ನೀಡಲು ‘ಕಾಂತಿಯ ಹೊಸ ಕ್ರಾಂತಿ’ ಕಾರ್ಯಾಗಾರ  ‘Kanthiya Hosa Kranthi’ (A New Revolution of Radiance) workshop to encourage women’s talent

ಬಳ್ಳಾರಿ 18: ಮಹಿಳೆಯರಿಗೆ ವೇದಿಕೆ ಕಲ್ಪಿಸುವ ಮೂಲಕ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಟಚ್ ಫಾರ್ ಲೈಫ್ ಫೌಂಡೇಶನ್ನ ನಿರ್ದೇಶಕಿ ನಾರಾ ವೈಜಯಂತಿ ರೆಡ್ಡಿ ಹೇಳಿದರು.  

ನಗರದ ಖಾಸಗಿ ಹೋಟೆಲ್ನ ಸಭಾಂಗಣದಲ್ಲಿ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ‘ಕಾಂತಿಯ ಹೊಸ ಕ್ರಾಂತಿ’ ಒಂದು ದಿನದ ಪ್ರಸಾದನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.  

“ಎಲ್ಲ ಮಹಿಳೆಯರಲ್ಲಿಯೂ ಒಂದಲ್ಲೊಂದು ಪ್ರತಿಭೆ ಇರುತ್ತದೆ. ಆದರೆ ಅದಕ್ಕೆ ಸೂಕ್ತವಾದ ಪ್ರೋತ್ಸಾಹ ದೊರೆಯದೆ ಹಲವು ಪ್ರತಿಭೆಗಳು ಬೆಳಕಿಗೆ ಬರುವುದಿಲ್ಲ. ಮಹಿಳೆಯರು ತಮ್ಮ ಕುಟುಂಬ ಹಾಗೂ ಮಕ್ಕಳಿಗಾಗಿ ನಿರಂತರವಾಗಿ ಶ್ರಮಿಸುತ್ತಾರೆ. ಕಾಲಾನಂತರದಲ್ಲಿ ತಮ್ಮಲ್ಲಿಯೂ ಒಂದು ಪ್ರತಿಭೆ ಇದೆ ಎಂಬುದನ್ನು ಅರಿತುಕೊಳ್ಳುವಂತಾಗುತ್ತದೆ. ಮಹಿಳೆಯರ ಪ್ರತಿಭೆ ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಅವರನ್ನು ಪ್ರೋತ್ಸಾಹಿಸಲು ಈ ಕಾರ್ಯಾಗಾರ ಆಯೋಜಿಸಲಾಗಿದೆ,” ಎಂದು ನಾರಾ ವೈಜಯಂತಿ ರೆಡ್ಡಿ ಹೇಳಿದರು.  

ಕಾರ್ಯಾಗಾರದಲ್ಲಿ 500ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಯುವತಿಯರು ಹಾಗೂ ಗೃಹಿಣಿಯರು ಭಾಗವಹಿಸಿದ್ದರು. ಭಾಗವಹಿಸಿದ ತರಬೇತಿದಾರರಿಗೆ ಪ್ರಮಾಣಪತ್ರ ಹಾಗೂ ಉಚಿತವಾಗಿ ಮೇಕಪ್ ಕಿಟ್ ವಿತರಿಸಲಾಯಿತು.  

ಕಲಿಕಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ, ಮುಂದಿನ ದಿನಗಳಲ್ಲಿ ಇದೇ ರೀತಿಯ ಮತ್ತೊಂದು ಕಾರ್ಯಾಗಾರವನ್ನು ಆಯೋಜಿಸಲಾಗುವುದು ಎಂದು ನಾರಾ ವೈಜಯಂತಿ ರೆಡ್ಡಿ ತಿಳಿಸಿದರು.  

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಹಾಗೂ ಮಾಜಿ ಮೇಯರ್ ಎಂ. ರಾಜೇಶ್ವರಿ, ಪದ್ಮಾ, ಮಂಜುಳಾ, ಚಂಪಾ ಚವಾಣ್, ಯಶೋದಾ, ಶಮೀಮ್ ಜಕ್ಕಿ, ಕವಿತಾ, ಜ್ಯೋತಿ, ನಸೀಮಾ, ಸಲ್ಮಾ ಎಸ್‌.ಕೆ., ಕೆ.ಎಂ. ಅಭಿನಯ, ಚಾನಾಳ್ ಲತಾ ಮತ್ತಿತರರು ಉಪಸ್ಥಿತರಿದ್ದರು.