ಪ್ರಿಯಾಂಕಾ ವಾದ್ರಾ ನಿವಾಸದ ಬಳಿ ಭದ್ರತಾ ಲೋಪ: ಸಮಸ್ಯೆಯ ಚರ್ಚೆಗೆ ಸಚಿವರ ಭರವಸೆ

ಜಿ ಕಿಶನ್ ರೆಡ್ಡಿ

ನವದೆಹಲಿ, ಡಿ ೦೨-ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರ ದೆಹಲಿ ನಿವಾಸದಲ್ಲಿ ಭದ್ರತಾ ಲೋಪದ ವರದಿಯಾಗಿದ್ದು, ಈ ಕುರಿತು ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಗೃಹಖಾತೆ ಸಹಾಯಕ ಸಚಿವ ಜಿ ಕಿಶನ್ ರೆಡ್ಡಿ ಸೋಮವಾರ ಹೇಳಿದ್ದಾರೆ.

ನವೆಂಬರ್ ೨೫ ರಂದು ನಡೆದಿದೆ ಎನ್ನಲಾಗಿರುವ ಭದ್ರತಾ ಉಲ್ಲಂಘನೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, "ಭದ್ರತಾ ಲೋಪದ ಕುರಿತು ನನಗೆ ಇನ್ನೂ ವಿವರಗಳು ತಿಳಿದಿಲ್ಲ, ಅದರ ಬಗ್ಗೆ  ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ" ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ, ಉತ್ತರ ಪ್ರದೇಶದ ಐದು ಜನರಿದ್ದ ಕಾರೊಂದು ಲೋಧಿ ಉದ್ಯಾನದ ಹೆಚ್ಚಿನ ಭದ್ರತಾ ಪ್ರದೇಶದಲ್ಲಿರುವ ಪ್ರಿಯಾಂಕಾ ಅವರ ಮನೆಗೆ ಪ್ರವೇಶಿಸಿ ಫೋಟೊ ತೆಗೆಸಿಕೊಳ್ಳುವಂತೆ ಬೇಡಿಕೆಯಿಟ್ಟಿತ್ತು ಎನ್ನಲಾಗಿದೆ.  

ಘಟನೆಯ ಬಗ್ಗೆ ಪ್ರಿಯಾಂಕಾ, ರಾಹುಲ್ ಹಾಗೂ ಸೋನಿಯಾ ಗಾಂಧಿಯವರಿಗೆ ರಕ್ಷಣೆ ನೀಡುತ್ತಿರುವ ಸಿಆರ್‌ಪಿಎಫ್‌ಗೆ  ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ. 

ಬೆದರಿಕೆ ಗ್ರಹಿಕೆ ಪರಿಷ್ಕರಣೆಯ ನಂತರ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಗಾಂಧಿ-ನೆಹರೂ ಕುಟುಂಬಕ್ಕಾಗಿ ನೀಡುತ್ತಿದ್ದ ವಿಶೇಷ ಸಂರಕ್ಷಣಾ ಗುಂಪಿನ (ಎಸ್‌ಪಿಜಿ) ಭದ್ರತೆ ತೆಗೆದುಹಾಕಿದ ಒಂದು ವಾರದ ನಂತರ ಈ ಘಟನೆ ನಡೆದಿದೆ.

ಪ್ರಸ್ತುತ ಸೋನಿಯಾ, ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಸಿಆರ್‌ಪಿಎಫ್‌ನ ಝಡ್ ಪ್ಲಸ್ ಭದ್ರತಾ ವ್ಯಾಪ್ತಿಯಲ್ಲಿದ್ದಾರೆ. 

ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ೧೯೯೧ ರಲ್ಲಿ ಶ್ರೀಲಂಕಾದ ಭಯೋತ್ಪಾದಕ ಗುಂಪು ಎಲ್‌ಟಿಟಿಇ ಹತ್ಯೆಗೈದ ನಂತರ ಗಾಂಧಿ-ನೆಹರೂ ಕುಟುಂಬ ಸದಸ್ಯರಿಗೆ ಎಸ್‌ಪಿಜಿ ರಕ್ಷಣೆ ನೀಡಲಾಗಿತ್ತು.