ಸವಿತಾ ಮಹರ್ಷಿಗಳ ಆಚಾರ-ವಿಚಾರ ಮೈಗೂಡಿಸಿಕೊಳ್ಳಬೇಕು: ಎಸಿ ಪ್ರಮೋದ್
ಬಳ್ಳಾರಿ 04: ಸವಿತಾ ಮಹರ್ಷಿಗಳು ಇಂದಿನ ಸಮಾಜಕ್ಕೆ ದಾರೀದೀಪವಾಗಿದ್ದಾರೆ. ಅವರ ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡರೆ ಸಮಾಜದಲ್ಲಿ ಸತ್ಪ್ರಜೆಗಳಾಗಬಹುದು ಎಂದು ಸಹಾಯಕ ಆಯುಕ್ತ ಪಿ.ಪ್ರಮೋದ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮದಿರದ ವೇದಿಕೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಸವಿತಾ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸವಿತಾ ಸಮಾಜವು ಎಲ್ಲ ವರ್ಗದ ಜನರಿಗೂ ತಾರತಮ್ಯವಿಲ್ಲದೆ ಸೇವೆ ನೀಡುತ್ತಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಈ ಸಮುದಾಯ ಮತ್ತಷ್ಟು ಸದೃಢವಾಗಬೇಕಿದೆ. ಪ್ರತಿಯೊಬ್ಬರೂ ತಾನು ಮಾಡುವ ವಚನ ವೃತ್ತಿಯ ಮೇಲೆ ಗೌರವ, ನಿಷ್ಠೆ ಇಟ್ಟುಕೊಂಡಾಗ ಬದುಕಿನಲ್ಲಿ ಉತ್ತುಂಗಕ್ಕೇರಲು ಸಾಧ್ಯವಿದೆ ಎಂದು ತಿಳಿಸಿದರು.
ಸವಿತಾ ಸಮಾಜದ ಬಂಧುಗಳು ಮಹರ್ಷಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀನಿವಾಸಮೂರ್ತಿ.ಯು ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಪುರಾಣ ಗ್ರಂಥಗಳ ಪ್ರಕಾರ ಸವಿತಾ ಮಹರ್ಷಿ ಎಲ್ಲಾ ದೇವತೆಗಳ ಆಯುಷ್ಕರ್ಮ ಸೇವೆಯನ್ನು ಮಾಡುತ್ತಿದ್ದಾರೆಂದು ಕಾಶಿ ಕ್ಷೇತ್ರದಲ್ಲಿ ದೊರೆತ ಮಹಾಗ್ರಂಥದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
ಶಿವನ ದಿವ್ಯ ದೃಷ್ಠಿಯಲ್ಲಿ ಜನ್ಮ ತಾಳಿದ ಸವಿತಾ ಮಹರ್ಷಿ ಬ್ರಹ್ಮಜ್ಞಾನ ಹೊಂದಿರುವುದರಿಂದಲೇ ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಬರೆದ್ದಾರೆ. ಪೌರಾಣಿಕ ವ್ಯಕ್ತಿಯಾದ ಸವಿತಾ ಮಹರ್ಷಿಯು ರಥಸಮ್ತಿಯ ದಿನ ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದವರು. ಧಾರ್ಮಿಕವಾಗಿ ಶಿವನ ಎಡಗಣ್ಣನ್ನು ಚಂದ್ರನಿಗೆ ಬಲಗಣ್ಣನ್ನು ಸೂರ್ಯನಿಗೆ ಹೋಲಿಸಲಾಗುತ್ತದೆ. ಶಿವನ ಬಲಗಣ್ಣಿನಿಂದ ಜನಿಸಿದವರೇ ಸವಿತಾ ಮಹರ್ಷಿ ಎಂಬ ಪ್ರತೀತಿ ಇದೆ. ಇವರ ಮಗಳಾದ ಗಾಯತ್ರಿದೇವಿಯು ಶ್ರೇಷ್ಠ ಮಂತ್ರವಾದ ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ ಎಂಬುದನ್ನು ಕೂಡ ಉಲ್ಲೇಖಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಂಪ್ಲಿಯ ಜಿ.ಕೆ.ಸಿಂಧು ತಂಡದವರು ಭಕ್ತಿ ಗಾಯನ ಪ್ರಸ್ತುತ ಪಡಿಸಿದರು ಹಾಗೂ ಸಮುದಾಯದ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿ ಮಟ್ಟದಲ್ಲಿ ಅತ್ಯುತ್ತಮ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಜಿಲ್ಲಾ ಸವಿತಾ ಸಮಾಜ ಸಂಘದ ಅಧ್ಯಕ್ಷ ಸಣ್ಣಗೊಂಡ್ಲ ರಾಕೇಶ್ ಸೇರಿದಂತೆ ಸಮಾಜದ ಮುಖಂಡರು, ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಂಭ್ರಮದ ಮೆರವಣಿಗೆ:
ಸವಿತಾ ಮಹರ್ಷಿ ಜಯಂತಿಯ ಅಂಗವಾಗಿ ಏರಿ್ಡಸಿದ್ದ ಮೆರವಣಿಗೆಯು ಸಂಭ್ರಮದಿಂದ ನಡೆಯಿತು. ಮೆರವಣಿಗೆಗೆ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಅವರು ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಪೂರ್ಣ ಕುಂಭ ಹೊತ್ತ ಮಹಿಳೆಯರು ಹಾಗೂ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಗಮನ ಸೆಳೆದವು. ಮೆರವಣಿಗೆಯು ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜ್ ಮೈದಾನದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ತೇರು ಬೀದಿ, ಹೆಚ್.ಆರ್.ಗವಿಯಪ್ಪ ವೃತ್ತದ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮದಿರದ ವೇದಿಕೆ ಸಭಾಂಗಣಕ್ಕೆ ತಲುಪಿ ಸಂಪನ್ನಗೊಂಡಿತು.