ಕಾರವಾರ: ಸಾರಾಯಿ- ಸಿಗರೇಟು ಅಭಿಷೇಕದ ಖಾಪ್ರಿ ದೇವರ ಜಾತ್ರೆ ಭಕ್ತಿಯಿಂದ ಆಚರಣೆ

ಲೋಕದರ್ಶನ ವರದಿ

ಕಾರವಾರ14 : ದೇವರಿಗೆ ಮದ್ಯದ ಅಭಿಷೇಕ ಹಾಗೂ ಸಿಗರೇಟ್ನ ಆರತಿ ಬೆಳಗುವ ಸಂಪ್ರದಾಯವಿರುವ  ಇಲ್ಲಿನ ಕೋಡಿಬಾಗ ಪ್ರದೇಶದ ಖಾಪ್ರಿ ದೇವರ ವಿಶಿಷ್ಠ ಜಾತ್ರೆ ಭಾನುವಾರ ನಡೆಯಿತು.  ಖಾಪ್ರಿ ದೇವರಿಗೆ ಮದ್ಯ, ಸಿಗರೇಟು, ಮೇಣದಬತ್ತಿ, ಕೋಳಿ ಮುಂತಾದವುಗಳನ್ನು ನೀಡುವುದಾಗಿ ಹರಕೆ ಹೊತ್ತ ಭಕ್ತರು ಇಂದು ಹರಕೆ ತೀರಿಸಿದರು ಹಾಗೂ ಜಾತ್ರೆಯ ಸಂಭ್ರಮದಲ್ಲಿ ಭಾಗಿಯಾದರು. ಸಂಕಲ್ಪ ಮಾಡಿ ಬೇಡಿಕೊಂಡರೆ, ಖಾಪ್ರಿ ದೇವರು ಭಕ್ತರ ಮನೋಭಿಲಾಷೆಗಳನ್ನು ಇಡೇರಿಸುತ್ತಾನೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ರಾಷ್ಟ್ರೀಯ ಹೆದ್ದಾರಿ 66ರ ಅಂಚಿನಲ್ಲಿರುವ ಈ ದೇವರ ದೇವಸ್ಥಾನ ಜಾತ್ರೆಗೆ ಈ ಸಲ ಹೆದ್ದಾರಿ ಕಾಮಗಾರಿಯಿಂದ ಸ್ವಲ್ಪ ಅಡಚಣೆಯಾಯಿತು.  ಸುತ್ತಮುತ್ತಲಿನ ಜನರ ಇಷ್ಟಾರ್ಥಗಳನ್ನು ಈಡೇರಿಸುವುದರ ಜೊತೆಗೆ ಈ ಭಾಗದಲ್ಲಿ ಯಾವುದೇ ಅಪಘಾತಗಳಾಗದಂತೆ, ಮೀನುಗಾರಿಕೆಗೆ ತೆರಳುವ ಮೀನುಗಾರರನ್ನು ರಕ್ಷಣೆ ಮಾಡುತ್ತಾನೆ ಎಂಬ ನಂಬಿಕೆಯೂ ಕೂಡ ಇದೆ.

 ಖಾಪ್ರಿ ದೇವರಿಗೆ ಜಾತ್ರೆಯಲ್ಲಿ ಮದ್ಯದ ಅಭಿಷೇಕ ನಡೆಸಲು, ಸಿಗರೇಟಿನ ಆರತಿ ಬೆಳಗಿ ಹರಕೆ ತೀರಿಸಲು ತಾಲೂಕಿನ ವಿವಿಧೆಡೆಯಿಂದಲ್ಲದೇ, ಗೋವಾ,ಮಹಾರಾಷ್ಟ್ರ ಕಡೆಯಿಂದಲೂ ಭಕ್ತರು ಆಗಮಿಸಿದ್ದರು.

ಬೆಳಗ್ಗೆಯಿಂದ ಸಂಜೆಯವರೆಗೂ ವಿಶೇಷ ಪೂಜೆ ನಡೆದವು. ಸರದಿಯಲ್ಲಿ ನಿಂತು ಭಕ್ತರು ದೇವರಿಗೆ ಮದ್ಯದ ಅಭಿಷೇಕ ಮಾಡಿದರು. ಕೋಳಿ ಬಲಿ ಹಾಗೂ ಸಿಗರೇಟಿನ ಆರತಿ ಮಾಡಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾಥರ್ಿಸಿದರು. 

ಆಫ್ರಿಕಾ ಮೂಲದ ದೇವರು:

ನಗರದ ಕೋಡಿಬಾಗದ ಕಾಳಿ ಸಂಗಮ ಪ್ರದೇಶದಲ್ಲಿ ನೆಲೆಸಿರುವ ಖಾಪ್ರಿ ಎಂಬ ಮಾನವೀಯ ಮನುಷ್ಯ ಜನರ ಕಷ್ಟಸುಖಗಳಿಗೆ ನೆರವಾಗುತ್ತಿದ್ದವನು. ಖಾಪ್ರಿಯ  ಮೂಲ ಆಫ್ರಿಕಾ ದೇಶವಾಗಿದೆ. ಪುರ್ಸಪ್ಪ ಮನೆತನದ ಈ ದೇವರು ಮೊದಲು ಸಾಮಾನ್ಯ ಮನುಷ್ಯರಂತೆ ಬಾಳಿದ್ದ. ಪುರ್ಸಪ್ಪ ಕುಟುಂಬದವರು ಹೇಳುವಂತೆ, 300 ವರ್ಷಗಳ ಹಿಂದೆ ಆಫ್ರಿಕಾದಿಂದ ಬಂದ ವ್ಯಕ್ತಿಯೊಬ್ಬರು ಇಲ್ಲಿ ಪೂಜೆ ಮಾಡುತ್ತಿದ್ದರು. ಒಮ್ಮೆ ಏಕಾಏಕಿ ಆ ವ್ಯಕ್ತಿ ಕಾಣೆಯಾಗಿದ್ದು ನಂತರ ಪುರ್ಸಪ್ಪ ಎಂಬವರ ಕನಸಿನಲ್ಲಿ ಬಂದು ತಾನು ದೇವರಾಗಿರುವದಾಗಿ ತಿಳಿಸಿದರು. ತನ್ನ ಇಷ್ಟಾರ್ಥದಂತೆ ಪೂಜೆ ಸಲ್ಲಿಸಿದರೆ ನಂಬಿದ ಜನರನ್ನು ಸಲಹುದಾಗಿ ಹೇಳಿದನಂತೆ. ಅಂದಿನಿಂದ ಪ್ರತಿ ಭಾನುವಾರ ಹಾಗೂ ಬುಧವಾರ ಖಾಫ್ರಿ ದೇವರಿಗೆಪೂಜೆ ಸಂಪ್ರದಾಯಬದ್ಧವಾಗಿ ನಡೆಯುತ್ತಾ ಬಂದಿದೆ. 

ಭಾವೈಕ್ಯತೆಯ ಜಾತ್ರೆ:

ಖಾಪ್ರಿ ದೇವರ ಸನ್ನಿದಾನಕ್ಕೆ ಹಿಂದುಗಳಷ್ಟೇ ಅಲ್ಲ ಮುಸ್ಲಿಂ, ಕ್ರಿಶ್ಚಿಯನ್ನರು ಬರುತ್ತಿದ್ದಾರೆ. ಇದೊಂದು ಭಾವೈಕ್ಯತೆಯ ಜಾತ್ರೆಯೂ ಆಗಿದೆ. ಅವರವರ ಧರ್ಮಕ್ಕೆ ತಕ್ಕಂತೆ, ಹೂವು,ಹಣ್ಣು,ಕಾಯಿ, ಮೇಣದಬತ್ತಿ,ಉದ್ಬತ್ತಿ,ಕಪರ್ೂರ,ಮದ್ಯ,ಸಿಗರೇಟು, ಬೀಡಿ,ಬಾಳೆಗೊನೆ ಅಲ್ಲದೇ ಅಕ್ಕಿ, ಹಣ್ಣುಹಂಪಲು, ತರಕಾರಿಯನ್ನು ದೇವರಿಗೆ ಸಮಪರ್ಿಸಲಾಗುತ್ತಿದೆ. ತುಲಾಭಾರ ಸೇವೆಯೂ ಇಲ್ಲಿ ನಡೆಯುತ್ತದೆ.

ಸಾರಾಯಿ ಸಮರ್ಪಣೆ ನೀತಿ ಸಂಹಿತೆ ಅಡ್ಡಿ;

ಖಾಪ್ರಿ ದೇವರಿಗೆ ಸಿಗರೇಟಿನ ಆರತಿ ಹಾಗೂ ಸಾರಾಯಿ ಅಭಿಷೇಕ ಮಾಡುವುದೇ ವಿಶೇಷ. ಈ ಬಾರಿ ಚುನಾವಣೆ ನೀತಿ ಸಂಹಿತೆಯಿಂದಾಗಿ ಗೋವಾದ ಅಕ್ರಮ ಸಾರಾಯಿ ಸಾಗಾಟ ಸಂಪೂರ್ಣವಾಗಿ ನಿಂತಿದೆ.  ಹೀಗಾಗಿ ಭಕ್ತರ ಕೈಯಲ್ಲಿ ಈ ಹಿಂದೆ ಕಾಣುತ್ತಿದ್ದ ಗೋವಾ ಬ್ರಾಂಡ್ ಸಾರಾಯಿ ಬಾಟಲಿಗಳು ಕಾಣಸಿಗಲಿಲ್ಲ. 

ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದ ಭಕ್ತರು:

ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಪಾರ ಪ್ರಮಾಣದಲ್ಲಿ ಏರುತ್ತಿದೆ. ಅಕ್ಕಿ, ತರಕಾರಿ, ತೆಂಗಿನಕಾಯಿ, ಬಾಳೆಗೊನೆ, ಹಣ್ಣು- ಹಂಪಲುಗಳು ಸೇರಿದಂತೆ, ಭಕ್ತರು ದೇವರಿಗೆ ಅಪರ್ಿಸಿದ ಧವಸ-ಧಾನ್ಯಗಳಿಂದಲೇ ಅಡುಗೆ ತಯಾರಿಸಿ ಜಾತ್ರೆಯ ಸಂದರ್ಭದಲ್ಲಿ ಅನ್ನಸಂತರ್ಪಣೆ ಮಾಡಲಾಗುತ್ತದೆ. ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು  ಪಾಲ್ಗೊಂಡು ಅನ್ನ ಪ್ರಸಾದ ಸ್ವೀಕರಿಸಿದರು.