ಸುಜ್ಞಾನದ ಬೆಳಕು ಚೆಲ್ಲಿದ ಸಂತ ಸೇವಾಲಾಲ್; ಜಾಲೋಜಿ

Saint Sewalal, who shed the light of wisdom; Jaloji

ಸುಜ್ಞಾನದ ಬೆಳಕು ಚೆಲ್ಲಿದ ಸಂತ ಸೇವಾಲಾಲ್; ಜಾಲೋಜಿ

ಚಿಕ್ಕಪಡಸಲಗಿ, 17 : ಪವಾಡ ಪುರುಷ, ಸ್ವಾಭಿಮಾನಿ ಸಂತ ಸೇವಾಲಾಲ್ ಮಹಾರಾಜರು ಸಾಮಾಜಿಕ ಪಿಡುಗುಗಳನ್ನು ಹತ್ತಿಕ್ಕಲು ಗಟ್ಟಿ ಧ್ವನಿ ಎತ್ತಿದ್ದರು. ಅವರ ಮನಭಾವ ಸದಾ ಲೋಕ ಕಲ್ಯಾಣಕ್ಕಾಗಿ ಮಿಡಿದಿದೆ. ಸಮಾಜಕ್ಕಾಗಿ ಸುಜ್ಞಾನದ ಬೆಳಕು ಸೇವಾಲಾಲರು ಚೆಲ್ಲಿದ್ದಾರೆ ಎಂದು ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ನುಡಿದರು.  

        ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಸಂತ ಸೇವಾಲಾಲ್ ಮಹಾರಾಜರ 286 ನೇ ಜಯಂತ್ಯುತ್ಸವ ನಿಮಿತ್ಯ ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ದೇಶಕಂಡ ಅಪರೂಪದ ಸಂತರಲ್ಲೊಬ್ಬರಾದ ಸೇವಾಲಾಲರು ಅಸಾಮಾನ್ಯ ಶ್ರೇಷ್ಠ ದಾರ್ಶನಿಕರಾಗಿ ಜನಮಾನಸದಲ್ಲಿಂದು ನೆಲೆಗೊಂಡಿದ್ದಾರೆ ಎಂದರು. 

     ಬಂಜಾರಾ ಸಮಾಜದ ಆರಾಧ್ಯ ದೈವರಾಗಿರುವ ಸೇವಾಲಾಲರು ಜಗದ ಆಶಾಕಿರಣರು. ಸತ್ಯ, ಅಹಿಂಸೆ ಪ್ರತಿಪಾದಕರಾಗಿ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಸಾರಿದ್ದಾರೆ. ಅವರೊಬ್ಬ ಪ್ರಾಂಜಲ್ಯಮನಭಾವದ ಸಮಾಜ ಸುಧಾರಕರು, ಆದರ್ಶ ದಾರ್ಶನಿಕರು. ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗಿಲ್ಲ. ಜಾತಿ, ಮತ, ಪಂಥ, ಧರ್ಮ ಬೇಧ ಭಾವಗಳಿಲ್ಲದೇ ಎಲ್ಲರೂ ಸಮಾನರು ಎಂಬ ದಿವ್ಯಾನುಭೂತಿಯ ತತ್ವಗಳನ್ನು ಸಾರುವ ಮೂಲಕ ಜನಮನದಲ್ಲಿ ಅಚ್ಚಳಿಯರಾಗಿ ವಿಶ್ವ ಮಾನ್ಯತೆ ಪಡೆದಿದ್ದಾರೆ ಎಂದರು.  

     ಸೇವಾ ಮನೋಭಾವದ ಸರಳತೆ ಜೀವ ಸೇವಾಲಾಲರಲ್ಲಿ ಅಗಾಧ ಜ್ಞಾನ ಭಕ್ತಿ, ಅಮೋಘ ಶಕ್ತಿ ಜೊತೆಗೆ ಅಪ್ರತಿಮ ಚಿಂತನಾ ಯುಕ್ತಿಪಂಕ್ತಿ ಇತ್ತು. ದಿಟ್ಟ ತಪಸ್ಸಿನ ತಿರುಳಿನಿಂದ ಸಾಧನೆಯಂಥ ಪರಮ ಪವಿತ್ರ ಪಥ ಕಂಡಂತಹ ಸೇವಾಲಾಲರು ಹೆಸರಿಗೆ ತಕ್ಕಂತೆ ಅಮೂಲ್ಯ ಸೇವಾ ಜೀವರಾಗಿದ್ದಾರೆ. ಭಾತೃತ್ವದಿಂದ ಸಕಲರನ್ನು ಕಾಣವಂಥ ವಿಶೇಷ ಗುಣಸ್ವಭಾವ ಅವರಲ್ಲಿ ಹುದುಗಿದ್ದ ಕಾರಣ ಸಾಮಾನ್ಯ ವ್ಯಕ್ತಿ ದೇವ ಸ್ವರೂಪ ಪಡೆದು ಜನರ ಹೃದಯದಲ್ಲಿ ನೆಲೆಯೂರಿ ಪೂಜ್ಯನೀಯ ಸ್ಥಾನ ಮಾನ ಹಾಗೂ ಪ್ರೀತಿ, ಭಕ್ತಿ ಭಾವದ ಸಂಪ್ರೇಮ ಭೂಷಣಾಭಿಮಾನ ಪಡೆದಿದ್ದಾರೆ ಎಂದು ಜಾಲೋಜಿ ಅಭಿಪ್ರಾಯಿಸಿದರು. 

         ಹಿರಿಯ ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ, ಮಾನವೀಯತೆ ಮೌಲ್ಯ ಎತ್ತಿ ಹಿಡಿದಿರುವ ಸೇವಾಲಾಲ್ ಮಹಾರಾಜರು ಸಮಾಜಕ್ಕೆ ನೀಡಿರುವ ಕೊಡುಗೆ ಆವಣೀರ್ಯವಾಗಿವೆ. ಶಿಕ್ಷಣದ ಮಹತ್ವ ತಿಳಿದಿದ್ದ ಅವರು ಎಲ್ಲರೂ ಅಕ್ಷರ ಜ್ಞಾನದ ಹಸಿವು ನೀಗಿಸಿಕೊಳ್ಳಬೇಕು. ಶಿಕ್ಷಣದಿಂದಲೇ ಸಕಲ ಪ್ರಗತಿವೆಂದು ಒತ್ತಿ ಹೇಳಿದ್ದರು. ಬಂಜಾರಾ ಸೇರಿದಂತೆ ಎಲ್ಲ ಜನಾಂಗದ ಜನತೆ ಉತ್ತಮ ಜ್ಞಾನ ಸಂಸ್ಕೃತಿಯಲ್ಲಿ ಮೊಳಗಬೇಕೆಂಬ ಅಪೇಕ್ಷೆಯಿಂದ ಸಮಾಜದ ಅಭ್ಯುದಯಕ್ಕಾಗಿ ತಡಕಾಡಿದ್ದಾರೆ. 

     ಈ ಸರಳ ಸಂತನ ಧಾರ್ಮಿಕ ಸಂದೇಶಗಳು,ಜೀವನ ಸಾಧನೆಗಳು ನಮಗೆಲ್ಲ ಪ್ರೇರಣೆಗಳಾಗಿವೆ. ಜನತೆಯಲ್ಲಿ ದಯೆ, ಕರುಣೆ ಭಾವಾಂತರ ಅರಳಿಸಿರುವ ವಿಚಾರವಾದಿ ಸೇವಾಲಾಲರು ಐಕ್ಯತೆ, ಸಹಬಾಳ್ವೆಗೆ ಪ್ರೀತಿಪುಂಜದ ದಿಸೆ ತೋರಿದ್ದಾರೆ. ಅವರ ತತ್ವ, ಚಿಂತನೆಗಳು ಮನುಕುಲದ ಆಧಾರಸ್ತಂಭವಾಗಿವೆ. ಇಂತಹ ಮಹಾನುಭಾವ ಶರಣರ ತತ್ವಾಮೃತ ಚರಿತ್ರೆ, ಆದರ್ಶಗಳು ಅರಿತು ಮುನ್ನಡೆಯಬೇಕು. ಸಮಾಜದ ಒಳಿತಿಗಾಗಿ ಶ್ರಮಿಸಿ ಪುಣ್ಯಭಾವ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದರು.      ಸಂತ ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಶಿಕ್ಷಕರು, ಮಕ್ಕಳು ಪುಷ್ಪ ನಮನ ಸಲ್ಲಿಸಿದರು.  ಶಿಕ್ಷಕ ಗುಲಾಬಚಂದ ಜಾಧವ, ಈರ​‍್ಪ ದೇಸಾಯಿ, ಲೋಹಿತ ಮಿರ್ಜಿ, ಶ್ರೀಶೈಲ ಹುಣಶಿಕಟ್ಟಿ, ಗುರುಮಾತೆಯರಾದ ಸಹನಾ ಹತ್ತಳ್ಳಿ (ಕಲ್ಯಾಣಿ), ಪ್ರಮೀಳಾ ತೇಲಸಂಗ, ಶೃುತಿ ಲಿಗಾಡೆ ಇತರರಿದ್ದರು.