ರಾಜ್ಯ ಸರ್ಕಾರ ಬಸ್ ದರ ಏರಿಕೆಯ ಕ್ರಮವನ್ನು ಖಂಡಿಸಿ ಎಸ್‌.ಯು.ಸಿ.ಐ ಪ್ರತಿಭಟನೆ

SUCI protests against state government's move to increase bus fares

ರಾಜ್ಯ ಸರ್ಕಾರ ಬಸ್ ದರ ಏರಿಕೆಯ ಕ್ರಮವನ್ನು ಖಂಡಿಸಿ ಎಸ್‌.ಯು.ಸಿ.ಐ ಪ್ರತಿಭಟನೆ

ಬಳ್ಳಾರಿ 04: ಜಿಲ್ಲಾ ಸಮಿತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯನ್ನು ಉದ್ದೇಶಿಸಿ ಕಾಮ್ರೆಡ್ ಕೆ ಸೋಮಶೇಖರ್ ರವರು ಮಾತನಾಡುತ್ತಾ " ರಾಜ್ಯದಲ್ಲಿ ರಸ್ತೆ ಸಾರಿಗೆ ನಿಗಮಗಳ ಬಸ್ ದರವನ್ನು ಶೇ. 15ರಷ್ಟು ಏರಿಕೆ ಮಾಡಿದ್ದನ್ನು ಎಸ್ಯುಸಿಐ ಕಮ್ಯುನಿಸ್ಟ್‌ ಪಕ್ಷವು ತೀವ್ರವಾಗಿ ಖಂಡಿಸುತ್ತದೆ ಎಂದರು.ಈಗಾಗಲೇ ಆಹಾರ ಪದಾರ್ಥಗಳು ಮತ್ತು ಇಂಧನ ಹಣದುಬ್ಬರದ ಬಿಸಿಯಿಂದ ರಾಜ್ಯದ ಜನತೆ ಬಸವಳಿದಿದ್ದಾರೆ. ಇಂದಿನ ಆಧುನಿಕ ಬದುಕಿನಲ್ಲಿ ಪ್ರಯಾಣವು ಮೂಲಭೂತ ಅವಶ್ಯಕತೆಯಾಗಿದೆ. ಹಾಗಾಗಿ ಬಸ್ ದರ ಏರಿಕೆ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಸರ್ಕಾರವು ರಾಜ್ಯದ ಜನರಿಗೆ ಹೊಸವರ್ಷಕ್ಕೆ ಇಂತಹ ಉಡುಗೊರೆ ನೀಡಿರುವುದು ವಿಪರ್ಯಾಸ ಎಂದು ಮಾತನಾಡಿದರು.  ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿದ ಡಾ. ಪ್ರಮೋದ್ ರವರು "ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಬಾಕಿ ಹಣವನ್ನು ತಡ ಮಾಡದೆ ಸಾರಿಗೆ ನಿಗಮ ಗಳಿಗೆ ಪಾವತಿ ಮಾಡಬೇಕು.  

ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿರುವ ಭ್ರಷ್ಟಾಚಾರ, ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕು. ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾದ ನ್ಯಾಯಸಮ್ಮತ ತೆರಿಗೆ ಬಾಕಿಯನ್ನು ಪಾವತಿಸಬೇಕು. ಆ ಮೂಲಕ ಸಾರಿಗೆ ಸಂಸ್ಥೆಗಳ ಆದಾಯ ಕೊರತೆಯನ್ನು ತುಂಬಬೇಕೇ ಹೊರತು ಯಾವುದೇ ಕಾರಣಕ್ಕೂ ದರ ಏರಿಕೆ ಮಾಡಕೂಡದು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಪಕ್ಷದ ಸದಸ್ಯರಾದ ಹನುಮಪ್ಪ, ಗೋವಿಂದ್, ಸೌಮ್ಯ, ರಾಜಾ, ಈಶ್ವರಿ, ಅಭಿಲಾಷ, ಮಂಜು ಈರಣ್ಣ, ಶಾಂತಿ, ಉಮಾ ಇನ್ನಿತರರು ಇದ್ದರು.