ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ

ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ Request for appropriate action against the culprits

                 ರಾಯಬಾಗ, 16 : ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ತಹಸೀಲ್ದಾರ ಅವರಿಗೆ ಅವಮಾನಕಾರಿ ಪದ ಬಳಸಿ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಿಪಿಐ ಎಮ್‌.ಎಮ್‌.ಡಪ್ಪಿನ ಅವರಿಗೆ ತಹಸೀಲ್ದಾರ ಮಹಾದೇವ ಸನಮುರಿ ಹಾಗೂ ಸರ್ಕಾರಿ ನೌಕರರ ಸಂಘದಿಂದ ಶುಕ್ರವಾರ ದೂರು ನೀಡಲಾಯಿತು. ಸರ್ಕಾರಿ ನೌಕರರ ಸಂಘದ ಸದಸ್ಯರು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಕನ್ನಡ ಮತ್ತು ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ತಹಸೀಲ್ದಾರ ಅವರಿಗೆ ಬೆಂಬಲ ವ್ಯಕ್ತ ಪಡಿಸಿ, ಪಟ್ಟಣದ ಮಿನಿ ವಿಧಾನಸೌಧದಿಂದ ಪೋಲಿಸ ಠಾಣೆವರೆಗೆ ಮೌನ ಕಾಲ್ನಡಿಗೆಯಿಂದ ತೆರಳಿ,ತಹಸೀಲ್ದಾರ ಅವರಿಗೆ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

                  ಘಟನೆ ಹಿನ್ನಲೆ: ಜ.12 ರಂದು, ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ರೈತ ಸಂಘದ ವತಿಯಿಂದ ಪ್ರತಿಭಟನೆ ಮಾಡುತ್ತಿದ್ದಾಗ, ಸಂಘದ ಮನವಿಯನ್ನು ಸ್ವೀಕರಿಸಲು ತಹಸೀಲ್ದಾರರ ಪ್ರತಿನಿಧಿಯಾಗಿ ತಹಸೀಲ್ದಾರ ಕಾರ್ಯಾಲಯದ ಹಿರಿಯ ಶಿರಸ್ತೇದಾರ ಪಿ.ಎಸ್‌.ಮಂಗಸೂಳಿ ಅವರು ಪಟ್ಟಣದ ಝೆಂಡಾ ಕಟ್ಟೆಯಲ್ಲಿ ಹತ್ತಿರ ನಡೆಯುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಮನವಿ ಪತ್ರ ಸ್ವೀಕರಿಸಲು ಹೋಗಿದ್ದಾಗ, ರೈತ ಸಂಘದ ಸದಸ್ಯ ಅಂತಾ ಬಿಂಬಿಸಿಕೊಂಡ ಖಾಸಗಿ ವ್ಯಕ್ತಿ, ತಾಲೂಕು ದಂಡಾಧಿಕಾರಿ ಹಾಗೂ ತಹಸೀಲ್ದಾರ ಅವರಿಗೆ ಸಾರ್ವಜನಿಕವಾಗಿ ಅತ್ಯಂತ ಕೀಳು ಮಟ್ಟದ ಭಾಷೆ ಬಳಸಿ, ನಿಂದನೆ ಮಾಡಿ ಅವಮಾನಿಸಿದ್ದು,

                  ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರವಾಗಿತ್ತು. ಇದರಿಂದ ತಹಸೀಲ್ದಾರ ಹುದ್ದೆಗೆ ಮತ್ತು ಕಂದಾಯ ಇಲಾಖೆಗೆ ಅಗೌರವ ಉಂಟಾಗಿದ್ದರಿಂದ, ಶುಕ್ರವಾರ ಸರ್ಕಾರಿ ನೌಕರರ ಸಂಘ ಸದಸ್ಯರು, ಕಂದಾಯ ಇಲಾಖೆ. ಸಿಬ್ಬಂದಿಯವರು, ಸಾರ್ವಜನಿಕವಾಗಿ ನಿಂದನೆ ಮಾಡಿದ ವ್ಯಕ್ತಿ ಮತ್ತು ಆತನಿಗೆ ಪ್ರಚೋದನೆ ನೀಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದರು. ತಹಸೀಲ್ದಾರ ಮಹಾದೇವ ಸನಮುರಿ, ಉಪ ತಹಸೀಲ್ದಾರ ಡಿ.ಎಸ್‌.ಜಮಾದಾರ, ತಾ.ಪಂ.ಇಒ ಡಾ.ಸುರೇಶ ಕದ್ದು, ತಾ.ಆರೋಗ್ಯಾಧಿಕಾರಿ ಡಾ.ಎಸ್‌.ಎಮ್‌.ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಚಂದರಗಿ, ಅರಣ್ಯಾಧಾರಿಕಾಗಳಾದ ಉಮೇಶ ಪ್ರಧಾನಿ, ಶಿವಕುಮಾರ. ಡಿ, ಸಿಡಿಪಿಒ ಭಾರತಿ ಕಾಂಬಳೆ, ವಿಶ್ವನಾಥ ಹಾರೂಗೇರಿ, ಸುರೇಶ ಮೇಖಳಿ, ಸಂಗಮೇಶ ನ್ಯಾಮಗೌಡರ, ರಾಜೇಂದ್ರ ಡಬ್ಬಗೋಳ, ಮಲ್ಲಿಕಜಾನ ಕೊರಬು, ವಿನಾಯಕ ಭಾಟೆ, ನಂದಕುಮಾರ ಪಾಟೀಲ, ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳು, ಎಲ್ಲ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು, ನಿರ್ದೇಶಕರುಗಳು, ಸರ್ವ ಸದಸ್ಯರುಗಳು, ವಿವಿಧ ಕನ್ನಡ ಮತ್ತು ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.