ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಮರಾಠಿ ಪುಂಡರ ಮೇಲೆ ಕ್ರಮಕ್ಕೆ ಮನವಿ
ಬೆಳಗಾವಿ 22: ಮರಾಠಿ ಭಾಷೆಯಲ್ಲಿ ಮಾತನಾಡಲಿಲ್ಲವೆಂದು ರಾಜ್ಯ ಸಾರಿಗೆ ಸಂಸ್ಥೆಯ ಕಂಡಕ್ಟರ ಮೇಲೆ ಹಲ್ಲೆ ಮಾಡಿದ ಅಮಾನವೀಯ ಘಟನೆ ನಡೆದಿದ್ದು, ಅರೋಪಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಬೆಳಗಾವಿ ಕರುನಾಡ ರಕ್ಷಣಾ ವೇದಿಕೆ ವತಿಯಿಂದ ರೈತ ಘಟಕ ರಾಜ್ಯಾಧ್ಯಕ್ಷ, ಹೋರಾಟಗಾರ ಸತೀಶ ನಾಯಿಕ ಅವರ ನೇತೃತ್ವದಲ್ಲಿ ಪೊಲೀಸ್ ಆಯುಕ್ತರಿಗೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ವಿಶ್ವ ಮಾತೃಭಾಷೆ ದಿನವೇ ಕಿಡಿಗೇಡಿಗಳು ಬೆಳಗಾವಿ ಸುಳೇಭಾವಿ ಗ್ರಾಮದ ಬಳಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದಾರೆ. ಬೆಳಗಾವಿ-ಸುಳೇಭಾವಿ ಮಾರ್ಗಮಧ್ಯೆ ಸಂಚರಿಸುವ ಬಸ್‌ನಲ್ಲಿ ಗಲಾಟೆ ನಡೆದಿದ್ದು, ಮಹಾದೇವಪ್ಪ ಮಲ್ಲಪ್ಪ ಹುಕ್ಕೇರಿ(51) ಹಲ್ಲೆಗೆ ಒಳಗಾದ ಬಸ್ ನಿರ್ವಾಹಕ. ಬಸ್‌ನಲ್ಲಿದ್ದ ಯುವತಿಗೆ ಆಧಾರ ಕಾರ್ಡ ತೋರಿಸುವಂತೆ ನಿರ್ವಾಹಕ ಕನ್ನಡದಲ್ಲಿ ಕೇಳಿದ್ದಕ್ಕೆ ಮರಾಠಿ ಭಾಷಿಕ ಯುವಕರು ತಗಾದೆ ತೆಗೆದಿದ್ದಾರೆ. ಯುವಕರು ನಿರ್ವಾಹಕನ ನಡುವೆ ಮಾತಿನ ಚಕಮಕಿ ನಡೆದು ಮಾತಿಗೆ ಮಾತು ಬೆಳೆದು ಯುವಕರು ತಮ್ಮ ಸ್ನೇಹಿತರನ್ನು ಕರೆಸಿ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದಾರೆ. ಮರ್ಯಾದೆಗೆ ಧಕ್ಕೆ ತಂದಿದ್ದಾರೆ. ಒಬ್ಬ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಮರಾಠಿ ಪುಂಡರ ಮೇಲೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.