ಜಿಲ್ಲಾ ಪಂಚಾಯತ ಆವರಣದಲ್ಲಿ ನವೀಕರಣಗೊಂಡ ಶಿಶು ಪಾಲಿನ ಕೇಂದ್ರ ಉದ್ಘಾಟನೆ

ಜಿಲ್ಲಾ ಪಂಚಾಯತ ಆವರಣದಲ್ಲಿ ನವೀಕರಣಗೊಂಡ ಶಿಶು ಪಾಲಿನ ಕೇಂದ್ರ ಉದ್ಘಾಟನೆ Renovated Child Welfare Center inaugurated at Zilla Panchayat premises


ಧಾರವಾಡ ಫೆ 23: ಧಾರವಾಡ ಜಿಲ್ಲಾ ಪಂಚಾಯತ ಆವರಣದಲ್ಲಿರುವ ನವೀಕರಣಗೊಂಡ ಶಿಶು ಪಾಲಿನ ಕೇಂದ್ರವನ್ನು ಇಂದು (ಫೆ.23) ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್, ವಿಧಾನ ಪರಿಷತ್ತ ಸದಸ್ಯ ಎಫ್‌.ಹೆಚ್‌.ಜಕ್ಕಪ್ಪನವರ, ಶಾಸಕ ಎಂ. ಆರ್‌. ಪಾಟೀಲ ಅವರು ಉದ್ಘಾಟಿಸಿದರು.  

ಸಚಿವ ಸಂತೋಷ್ ಲಾಡ್ ಅವರು ಮಾತನಾಡಿ, ಮಕ್ಕಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಿ. ಆರೋಗ್ಯ, ಪೌಷ್ಟಿಕ ಆಹಾರ, ಸ್ವಚ್ಛತೆ ಹಾಗೂ ಸುರಕ್ಷತೆಗೆ ವಿಶೇಷ ಗಮನ ನೀಡಬೇಕು. ಮಕ್ಕಳೊಂದಿಗೆ ಪ್ರೀತಿಯಿಂದ ಮತ್ತು ಸಹನೆಯಿಂದ ವರ್ತಿಸಿ, ಅವರಿಗೆ ಭದ್ರ ಮತ್ತು ಸ್ನೇಹಪರ ವಾತಾವರಣವನ್ನು ಒದಗಿಸಬೇಕು ಎಂದು ಹೇಳಿದರು. 

ಪ್ರತಿ ಮಗುವಿನಲ್ಲಿ ಇರುವ ಪ್ರತಿಭೆಯನ್ನು ಉತ್ತೇಜಿಸಬೇಕು. ಆಟದ ಮೂಲಕ ಕಲಿಕೆ, ಬುದ್ಧಿವರ್ಧಕ ಆಟಿಕೆಗಳ ಬಳಕೆ ಹಾಗೂ ಸೃಜನಶೀಲ ಚಟುವಟಿಕೆಗಳ ಮೂಲಕ ಅವರ ಬುದ್ಧಿವಿಕಾಸವನ್ನು ಹೆಚ್ಚಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು. 

ನವೀಕರಣ ಕಾರ್ಯದಡಿ ಕಟ್ಟಡದ ದುರಸ್ತಿ, ಗೋಡೆಗಳಿಗೆ ಆಕರ್ಷಕ ಬಣ್ಣ ಬಳಿಯುವುದು, ಹೊಸ ಫರ್ನಿಚರ್ ವ್ಯವಸ್ಥೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಮಕ್ಕಳ ಬುದ್ಧಿವಿಕಾಸ ಹಾಗೂ ಸೃಜನಶೀಲತೆ ಹೆಚ್ಚಿಸಲು ಬುದ್ಧಿವರ್ಧಕ ಆಟಿಕೆಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಶಿಶು ಕೇಂದ್ರಕ್ಕೆ ತರಲಾಗಿದೆ ಎಂದು ತಿಳಿಸಿದರು.   

ಮಕ್ಕಳು ಸಚಿವರಿಗೆ, ಶಾಸಕರಿಗೆ ಹಾಗೂ ಎಲ್ಲಾ ಅಧಿಕಾರಿಗಳಿಗೆ ಗುಲಾಬಿ ಹೂವುಗಳನ್ನು ನೀಡಿ, ಆತ್ಮೀಯವಾಗಿ ಬರಮಾಡಿಕೊಂಡರು. ಪುಟ್ಟ ಮಕ್ಕಳ ಮುದ್ದಾದ ಸ್ವಾಗತ ಎಲ್ಲರ ಗಮನ ಸೆಳೆಯಿತು. ಅವರ ನಗುಮುಖ ಮತ್ತು ಸಂಭ್ರಮ ವಿಶೇಷ ಮೆರುಗು ನೀಡಿತು ಮತ್ತು ಮಕ್ಕಳ ಈ ಪ್ರೀತಿಪೂರ್ವಕ ಸ್ವಾಗತಕ್ಕೆ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ಪಾಟೀಲ, ಜಿಲ್ಲಾಧಿಕಾರಿ ಸ್ನೇಹಲ್ ಆರ್‌., ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ, ಪ್ರೊಬೇಷನರಿ ಐಎಎಸ್ ಅಧಿಕಾರಿ ರೀತೀಕಾ ವರ್ಮಾ, ಜಿ.ಪಂ. ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಧಾರವಾಡ ತಹಶೀಲ್ದಾರ ಡಾ. ಡಿ.ಎಚ್‌.ಹೂಗಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕೆ ಡಾ. ಎಚ್‌.ಎಚ್ ಕುಕನೂರ, ಜಿಲ್ಲಾ ನಿರೂಪಣಾಧಿಕಾರಿ ಕಮಲಾ ಬೇಲೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುನೀತಾ ಪಾಟೀಲ, ಯಶೋಧ ಭಜಂತ್ರಿ ಹಾಗೂ ಶಿಶು ಪಾಲನಾ ಕೇಂದ್ರದ ಸಿಬ್ಬಂದಿ ವರ್ಗ, ಸಾರ್ವಜನಿಕರು ಹಾಗೂ ಪೋಷಕರು ಉಪಸ್ಥಿತರಿದ್ದರು.