ಮಹಿಳಾ ವಿವಿ ಕಾರ್ಯಕ್ರಮಗಳಲ್ಲಿ “ಸಂವಿಧಾನ ಪೀಠಿಕೆ” ಓದು ಕಡ್ಡಾಯ- ಪ್ರೊ.ವಿಜಯಾ ಕೋರಿಶೆಟ್ಟಿ ಘೋಷಣೆ

ಮಹಿಳಾ ವಿವಿ ಕಾರ್ಯಕ್ರಮಗಳಲ್ಲಿ “ಸಂವಿಧಾನ ಪೀಠಿಕೆ” ಓದು ಕಡ್ಡಾಯ- ಪ್ರೊ.ವಿಜಯಾ ಕೋರಿಶೆಟ್ಟಿ ಘೋಷಣೆ Reading of the “Preamble to the Constitution” is mandatory in women’s university programs – Prof. V


ವಿಜಯಪುರ  27:  ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಮುಖ್ಯ ಆವರಣ ಹಾಗೂ ವಿವಿಯ ಎಲ್ಲಾ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲಿ, ಮಹಿಳಾ ವಿಶ್ವವಿದ್ಯಾನಿಲಯದಿಂದ ಆಯೋಜಿಸಲ್ಪಡುವ ಪ್ರತಿಯೊಂದು ಕಾರ್ಯಾಗಾರ, ವಿಚಾರಸಂಕಿರಣ, ಸಮ್ಮೇಳನ, ವಿಶೇಷ ಉಪನ್ಯಾಸ, ತರಬೇತಿ ಕಾರ್ಯಕ್ರಮ ಹಾಗೂ ಇತರ ಎಲ್ಲಾ ಶೈಕ್ಷಣಿಕ ಮತ್ತು ಅಧಿಕೃತ ಕಾರ್ಯಕ್ರಮಗಳ ಆರಂಭದಲ್ಲಿ “ಭಾರತದ ಸಂವಿಧಾನ ಪೀಠಿಕೆ”ಯ ವಾಚನವನ್ನು ಕಡ್ಡಾಯಗೊಳಿಸಲಾಗುತ್ತಿದೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಘೋಷಿಸಿದರು.  

ಮಹಿಳಾ ವಿವಿಯಲ್ಲಿ ಸೋಮವಾರ ನಡೆದ 77ನೆಯ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಈ ಘೋಷಣೆ ಮಾಡಿದ ಅವರು, ವಿಶ್ವವಿದ್ಯಾನಿಲಯದ ಮುಖ್ಯ ಆವರಣದಲ್ಲಿನ ಎಲ್ಲಾ ಕಟ್ಟಡಗಳು ಹಾಗೂ ವಿವಿಧ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಪ್ರಮುಖ ಸ್ಥಳಗಳಲ್ಲಿ, ಭಾರತದ ಸಂವಿಧಾನ ಪೀಠಿಕೆಯ ಅಂದವಾದ, ಸ್ಪಷ್ಟ ಹಾಗೂ ವಿಶಿಷ್ಟವಾಗಿ ಸಿದ್ಧಪಡಿಸಿರುವ ಫೋಟೋಗಳನ್ನು ಅಳವಡಿಸುವ ಕಾರ್ಯವನ್ನು ಕೂಡ ಕೈಗೊಳ್ಳಲಾಗುತ್ತಿದೆ. ಇಂದು ಸಾಂಕೇತಿಕವಾಗಿ ಆಡಳಿತ ಭವನದ ಕಟ್ಟಡದಲ್ಲಿ ಅಂದವಾದ “ಸಂವಿಧಾನ ಪೀಠಿಕೆ”ಯ ಫೋಟೋ ಅಳವಡಿಸಲಾಗಿದ್ದು ಇದೊಂದು ವಿಶಿಷ್ಟ ಕ್ರಮವಾಗಿದೆ ಎಂದರು. 

ಈ ಕ್ರಮವು ಕೇವಲ ವಿಧಿವಿಧಾನವಲ್ಲ. ಇದು ವಿದ್ಯಾರ್ಥಿನಿಯರಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳ ಅರಿವು ಮೂಡಿಸುವ ಮಹತ್ತರ ಉದ್ದೇಶ ಹೊಂದಿದೆ. ಸಂವಿಧಾನಬದ್ಧ ಕರ್ತವ್ಯಗಳ ಜಾಗೃತಿಗಾಗಿ ಈ ಉಪ ಕ್ರಮ ಸಹಕಾರಿಯಾಗಲಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳ ಬಲವರ್ಧನೆ ಮಾಡುವ ನಮ್ಮ ಪ್ರಯತ್ನಗಳಿಗೆ ಒತ್ತಾಸೆಯಾಗಲಿದೆ. ರಾಷ್ಟ್ರನಿಷ್ಠೆ ಮತ್ತು ನಾಗರಿಕ ಹೊಣೆಗಾರಿಕೆಯ ಬೆಳವಣಿಗೆಗೆ ಈ ಉಪ ಕ್ರಮವು ಸಹಕಾರಿಯಾಗಲಿದೆ ಎಂದು ಅವರು ವಿವರಿಸಿದರು. 

ಈ ಎಲ್ಲಾ ಉಪಕ್ರಮಗಳಿಂದ ನಮ್ಮ ವಿದ್ಯಾರ್ಥಿನಿಯರು ಮಾತ್ರವಲ್ಲದೆ, ಬೋಧಕಹಿಬೋಧಕೇತರ ಸಿಬ್ಬಂದಿ, ಪಾಲಕರು ಹಾಗೂ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡುವ ಸಾರ್ವಜನಿಕರುಶ್ರಿಎಲ್ಲರೂ ಸಂವಿಧಾನದ ಮೂಲ ಆದರ್ಶಗಳನ್ನು ದಿನನಿತ್ಯ ನೆನಪಿಸಿಕೊಳ್ಳಲು, ತಿಳಿದುಕೊಳ್ಳಲು ಹಾಗೂ ಅನುಸರಿಸಲು ಪ್ರೇರಣೆ ದೊರೆಯಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.  

ಈ ಕ್ರಮಗಳು ನಮ್ಮ ವಿಶ್ವವಿದ್ಯಾನಿಲಯದ “ಜ್ಞಾನ ಮತ್ತು ಜವಾಬ್ದಾರಿ” ಎಂಬ ಶಿಕ್ಷಣ ತತ್ವದ ಜೀವಂತ ಅನುಷ್ಠಾನವಾಗಿವೆ. ಸಂವಿಧಾನ ಜಾಗೃತಿಯ ಸಂಸ್ಕೃತಿಯನ್ನು ವಿಶ್ವವಿದ್ಯಾನಿಲಯದ ಆವರಣದೊಳಗೆ ಬೇರೂರಿಸುವ ಮೂಲಕ, ನಾವು ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಕಾರ್ಯಕ್ಕೆ ಮತ್ತಷ್ಟು ಬಲ ನೀಡುತ್ತಿದ್ದೇವೆ ಎಂದು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು. 

ಈ ಸಂದರ್ಭದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್‌. ಲಕ್ಕಣ್ಣವರ ಹಾಗೂ ಪ್ರಾಧ್ಯಾಪಕರಾದ ಪ್ರೊ.ಜಿ.ಜಿ.ರಜಪೂತ, ಪ್ರೊ.ಓಂಕಾರ ಕಾಕಡೆ, ಪ್ರೊ.ರಾಜಕುಮಾರ ಮಾಲಿಪಾಟಿಲ್, ಡಾ.ಬಾಬು ಲಮಾಣಿ,  ಪ್ರೊ.ಜ್ಯೋತಿ ಉಪಾಧ್ಯ, ಪ್ರೊ.ಹನುಮಂತಯ್ಯ ಪೂಜಾರಿ, ಪ್ರೊ.ಅಶೋಕ ಸುರಪುರ ಮತ್ತು ವಿಶ್ವವಿದ್ಯಾನಿಯಲದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿನಿಯರು  ಭಾಗವಹಿಸಿದ್ದರು.