ಲೋಕದರ್ಶನ ವರದಿ
ರಾಣಿ ಚನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕ್ 8.94 ಕೋಟಿ ನಿವ್ವಳ ಲಾಭ
ಬೆಳಗಾವಿ 17: ಬೆಳಗಾವಿಯಲ್ಲಿ ಇಂದು ಜನಪ್ರಿಯತೆಯ ಉತ್ತುಂಗಕ್ಕೇರಿರುವ ಸಹಕಾರಿ ಬ್ಯಾಂಕ್ಗಳಲ್ಲಿ ‘ರಾಣಿ ಚನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕ್’ ಆರ್ಥಿಕ ಕ್ಷೇತ್ರದಲ್ಲಿ ಭರವಸೆಯ ಹೆಜ್ಜೆ ಇಟ್ಟಿದೆ. ಕಳೆದ 28 ವರ್ಷಗಳಿಂದ ಜಿಲ್ಲೆಯ ಏಕೈಕ ಮಹಿಳಾ ಸಹಕಾರಿ ಬ್ಯಾಂಕ್ ಎಂಬ ಅಭಿದಾನಕ್ಕೆ ಪಾತ್ರವಾಗಿರುವ ಬ್ಯಾಂಕ್ ಹಲವುಹತ್ತು ಪ್ರಥಮ ಹೆಜ್ಜೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಅಸಂಖ್ಯ ಮಹಿಳೆಯರ ಬದುಕನ್ನು ಸದೃಢಗೊಳಿಸುವ ನಿಟ್ಟಿನಲ್ಲಿಯೇ ಅಸ್ತಿತ್ವಕ್ಕೆ ಬಂದದ್ದು ಈ ಬ್ಯಾಂಕಿನ ಹಿರಿಮೆಗಳಲ್ಲಿ ಒಂದು.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷಡಾ.ಪ್ರಭಾಕರ ಕೋರೆಯವರ ಸಮರ್ಥ ಮಾರ್ಗದರ್ಶನ ಹಾಗೂ ಪರಿಶ್ರಮದ ಫಲವಾಗಿ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ 28.05.1996 ರಂದು ಸ್ಥಾಪನೆಗೊಂಡಿತು. ಆಶಾ ಪ್ರಭಾಕರ ಕೋರೆಯವರು ಬ್ಯಾಂಕನ ಪ್ರಥಮ ಅಧ್ಯಕ್ಷರಾಗಿ 27 ವರ್ಷಗಳವರೆಗೆ ಬ್ಯಾಂಕನ್ನು ವಿಸ್ತಾರದಿಂದ ವಿಸ್ತಾರೋನ್ನತವಾಗಿ ಬೆಳೆಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಹಕಾರಿ ಬ್ಯಾಂಕ್ಗೆ ಒಂದು ಸ್ಥಾನಮಾನವನ್ನು ಕಲ್ಪಿಸಿದ್ದಾರೆ.
ಪ್ರಸ್ತುತ ಬ್ಯಾಂಕ್ ಸೂಚ್ಯಂಕ: 31.03.2025 ರ ಅನ್ವಯ ಬ್ಯಾಂಕ್ 6271 ಸದಸ್ಯರ ಸಂಖ್ಯಾಬಲವನ್ನು ಹೊಂದಿದ್ದು, ಹಾಗೂ ಪ್ರತಿವರ್ಷ ಪ್ರತಿಶತ 15ಅ ಲಾಭಾಂಶವನ್ನು ಸದಸ್ಯರಿಗೆ ಕೊಡುತ್ತಾ ಬಂದಿದೆ. 6.21 ಕೋಟಿಗಳ ಷೇರು ಬಂಡವಾಳಗಳೊಂದಿಗೆ 402.78 ಕೋಟಿ ರೂ.ಗಳ ಠೇವಣಿ ಹಾಗೂ 252.79 ಕೋಟಿ ರೂ.ಗಳ ಸಾಲಗಳನ್ನು ನೀಡಿದೆ. ಪ್ರಸಕ್ತ ಸಾಲಿನಲ್ಲಿ 8.94 ಕೋಟಿ ನಿವ್ವಳ ಲಾಭವನ್ನು ಹೊಂದಿರುವುದು ಬ್ಯಾಂಕ್ನ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿಯಾಗಿದೆ. ನೆಟ್ ಎನ್ಪಿಎ ಸೂಚ್ಯಂಕ ಶೂನ್ಯವಿದೆ.
ರಾಣಿ ಚನ್ನಮ್ಮಾ ಮಹಿಳಾ ಬ್ಯಾಂಕ್ ಬೆಳಗಾವಿಯ ಕಾಲೇಜು ರಸ್ತೆ, ನೆಹರುನಗರ, ಕುವೆಂಪುನಗರ, ಬಿ.ಎಂ.ಕಂಕಣವಾಡಿ ಆಸ್ಪತ್ರೆ ಶಾಹಾಪೂರ ಹಾಗೂ ಸವದತ್ತಿ, ಅಥಣಿ, ಚಿಕ್ಕೋಡಿ, ಗೋಕಾಕ ತಾಲೂಕುಗಳಲ್ಲಿ ಮತ್ತು ಹುಬ್ಬಳ್ಳಿ ಸೇರಿ 9 ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಣಿ ಚೆನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕ್ ಲಾಭಾಂಶ ಒಂದನ್ನೇ ತನ್ನ ಗುರಿಯನ್ನಾಗಿಟ್ಟುಕೊಳ್ಳದೆ, ಗ್ರಾಹಕರ ಬೇಕುಬೇಡಿಕೆಗಳಿಗೆ ಸ್ಪಂದಿಸಿದೆ. ಇಂದಿನ ಆರ್ಥಿಕ ವಿದ್ಯಮಾನಗಳಿಗೆ ಅನುಗುಣವಾಗಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿದೆ. ತನ್ನ ಗ್ರಾಹಕರಿಗೆ ಯಾವುದೇ ವಿಧದ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನೂ ಕೈಕೊಂಡಿದೆ.
ಸೌಲಭ್ಯಗಳು: ಎಲ್ಲವೂ ಗಣಕೀತೃತಗೊಳಿಸಿರುವ ಬ್ಯಾಂಕ್ ಇ-ಬ್ಯಾಂಕ್ ವ್ಯವಸ್ಥೆಯನ್ನು ಕಲ್ಪಿಸಿದೆ. ಕೋರ್ ಬ್ಯಾಂಕಿಂಗ್, ಎಸ್‌ಎಂಎಸ್ ಸೌಲಭ್ಯ, ಆರ್ಟಿಜಿಎಸ್ / ಎನ್‌ಇಎಫ್ಟಿ / ಡಿಡಿ/ಯುಪಿಐ, ಡಿಬೆಟ್ಕಾರ್ಡ, ಲಾಕರ್, ಎಲ್ಲ ವಿಧದ ಮೊಬೈಲ ಬ್ಯಾಂಕಿಂಗ್ ಸೌಲಭ್ಯ, ಕ್ಯೂಆರ್ ಕೋಡ್ ಮೊದಲ್ಗೊಂಡು ಹಲವಾರು ಅಗತ್ಯ ಉಪಕ್ರಮಗಳನ್ನು ಕೈಗೊಂಡಿದೆ. ಅದೇ ರೀತಿ ತನ್ನ ಗ್ರಾಹಕರಿಗೆ ಎಟಿಎಂ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಪ್ರತಿಷ್ಠಿತ ಬ್ಯಾಂಕ್ಗಳ ಸಾಲಿನಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ಇದೆಲ್ಲದಕ್ಕೂ ಕಾರಣ ಹಿಂದಿನ ಅಧ್ಯಕ್ಷರು ಹಾಗೂ ಪ್ರಸ್ತುತ ನಿರ್ದೇಶಕರಾಗಿರುವ ಆಶಾ ಪ್ರಭಾಕರ ಕೋರೆ, ಪ್ರಸ್ತುತ ಕ್ರಿಯಾಶೀಲ ಅಧ್ಯಕ್ಷರಾಗಿರುವ ಡಾ.ಪ್ರೀತಿ ದೊಡವಾಡ, ಆಡಳಿತ ಮಂಡಳಿಯವರ ಮುಂದಾಲೋಚನೆ ಹಾಗೂ ಸಿಬ್ಬಂದಿವರ್ಗದವರ ದಣಿವರಿಯದ ದುಡಿಮೆಯ ಫಲವೇ ಮಹಿಳಾ ಬ್ಯಾಂಕ್ ರಾಜ್ಯದಲ್ಲಿ ದಿಟ್ಟವಾದ ಹೆಜ್ಜೆಯನ್ನು ಇಟ್ಟಿದೆ.