371ಜೆ ಮೀಸಲಾತಿಗೆ ಆಗ್ರಹಿಸಿ ರೈತ ಭಾರತ ಪಕ್ಷದಿಂದ ಪ್ರತಿಭಟನೆ

371ಜೆ ಮೀಸಲಾತಿಗೆ ಆಗ್ರಹಿಸಿ ರೈತ ಭಾರತ ಪಕ್ಷದಿಂದ ಪ್ರತಿಭಟನೆ Raitha Bharat Party protests demanding 371J reservation

371ಜೆ ಮೀಸಲಾತಿಗೆ ಆಗ್ರಹಿಸಿ ರೈತ ಭಾರತ ಪಕ್ಷದಿಂದ ಪ್ರತಿಭಟನೆ 

ವಿಜಯಪುರ 11:  ಜಿಲ್ಲೆಗೆ 371 ಜೆ ಮೀಸಲಾತಿಗೆ ಆಗ್ರಹಿಸಿ ವಿಜಯಪುರ ನಗರದಲ್ಲಿ ರೈತ ಭಾರತ ಪಕ್ಷದಿಂದ  ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.  ವಿಜಯಪುರ ಜಿಲ್ಲೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳು, ಪ್ರಧಾನಮಂತ್ರಿ, ಕೇಂದ್ರ ಗೃಹ ಮಂತ್ರಿ, ರಾಜ್ಯಪಾಲರು, ಕರ್ನಾಟಕ ಮುಖ್ಯಮಂತ್ರಿಹಾಗೂ ಉಪ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 

ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಅವರು ಮಾತನಾಡಿ, ವಿಜಯಪುರ ಜಿಲ್ಲೆಯ ನೂರಾರು ಜನ ಸ್ವಾತಂತ್ರ್ಯ ಯೋಧರು ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಹೈದ್ರಾಬಾದ್ ವಿಮೋಚನಾ ಚಳುವಳಿಗೆ ಬಲಿದಾನಗೈದಿದ್ದಾರೆ. ಹೈದ್ರಾಬಾದ್ ವಿಮೋಚನಾ ಚಳುವಳಿಗಾರರ ತವರು ಜಿಲ್ಲೆ ವಿಜಯಪುರವನ್ನು ಮೀಸಲಾತಿಯಿಂದ ವಂಚಿಸಿದ್ದು ಖಂಡನೀಯ. ಕೂಡಲೇ ವಿಜಯಪುರ ಜಿಲ್ಲೆಗೆ 371ಜೆ ಮೀಸಲಾತಿಯನ್ನು ಒದಗಿಸಿ ಸ್ವಾತಂತ್ರ್ಯ ಯೋಧರಿಗೆ ನೈಜಗೌರವ ಸಲ್ಲಿಸಬೇಕೆಂದು ಆಗ್ರಹಿಸಿದರು. 

ಕಳೆದ ಹನ್ನೊಂದು ವರ್ಷದಿಂದ ಜಿಲ್ಲೆಯ ರಾಜಕಾರಣಿಗಳು ಮಾಡಿರುವ ಅನ್ಯಾಯ ಸಹಿಸಿಕೊಂಡಿದ್ದೇವೆ. ಇನ್ನು ಮುಂದೆ ಈ ಅನ್ಯಾಯ ಸಹಿಸಲಾಗದು. ಈಗಲೂ ಕಾಲ ಮಿಂಚಿಲ್ಲ. ಆಗಿರುವ ಅನ್ಯಾಯವನ್ನು ಸರಿಪಡಿಸಿ ಮೀಸಲಾತಿ ದೊರಕಿಸಿ ಜಿಲ್ಲೆಯ ಜನರು ನೀಡಿರುವ ಅಧಿಕಾರದ ಋಣ ತೀರಿಸಬೇಕು ಎಂದು ಹೇಳಿದರು.  

ಇನ್ನೋರ್ವ ಪಕ್ಷದ ಮುಖಂಡರಾದ ಅಂಬಾಜಿ ನಾರಾಯಣಕರ ಮಾತನಾಡಿ, ವಿಜಯಪುರ ಜಿಲ್ಲೆ ಸೇರಿ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ಕಲಂ 371 ಜೆ ವಿಶೇಷ ಮೀಸಲಾತಿ ನೀಡಬೇಕೆಂದು ಮೊದಲು ಹೋರಾಟ ಪ್ರಾರಂಭ ಮಾಡಿದವರು ವಿಜಯಪುರ ಜಿಲ್ಲೆಯ ಸ್ವಾತಂತ್ರ್ಯ ಯೋಧರು. 2014ರಲ್ಲಿ ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾದ ಮೀಸಲಾತಿಯನ್ನು ನೀಡದೆ ವಂಚಿಸಿದವು. ಇದರಿಂದ ವಿಜಯಪುರ ಜಿಲ್ಲೆಗೆ ದೊಡ್ಡ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ 371 ಜೆ ಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು. 

ಸಿದ್ದಪ್ಪ ಪೂಜಾರಿ, ಮಂಜುನಾಥ ಗೆಣ್ಣೂರ, ಶ್ರೀಶೈಲ ಗಣಪತಿ, ಇಬ್ರಾಹಿಂ ಗಣಿಹಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.