ಜೀತ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿ -ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್‌

Raise awareness about the Bonded Labor Prohibition Act - Deputy Collector Dr. Nagaraja L

ಜೀತ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿ -ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್‌. 

ಹಾವೇರಿ 15 :  ಜೀತ ಕಾರ್ಮಿಕ ಪದ್ಧತಿ ಒಂದು ಅಪರಾಧವಾಗಿದೆ. ಜೀತ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಕುರಿತು ಸಾರ್ವಜನಿಕರಿಗೆ ಅಗತ್ಯ ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್‌. ಅವರು ಹೇಳಿದರು.  

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ  ಜೀತ ಪದ್ಧತಿ (ರದ್ಧತಿ) ನಿರ್ಮೂಲನಾ ದಿನಾಚರಣೆ ಪ್ರಯುಕ್ತ  ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಲಾದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ, ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು. 

ಜೀತಪದ್ಧತಿ ಅನಾದಿಕಾಲದಿಂದ ನಡೆದುಕೊಂಡು ಬಂದಿದ್ದು, ಜೀತಪದ್ಧತಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. ಕಾಫಿ ಎಸ್ಟೇಟ್, ಇಟ್ಟಂಗಿ ಭಟ್ಟಿ, ಕಲ್ಲು ಕ್ವಾರಿಗಳಲ್ಲಿ ಸಹ ಇಂತಹ ಕಾರ್ಮಿಕರನ್ನು ನೋಡಬಹುದಾಗಿತ್ತು.  1976ರಲ್ಲಿ ಜೀತ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಜಾರಿ ಮಾಡಿದ್ದರಿಂದ  ಈಗ ಹತೋಟಿಗೆ ಬಂದಿದೆ. ಕಾರ್ಮಿಕರ ವಾಕ್‌ಸ್ವಾತಂತ್ರ್ಯ, ಓಡಾಡುವ ಹಕ್ಕು ಹಾಗೂ ಕನಿಷ್ಠ ವೇತನ ನೀಡದಿರುವುದು ಜೀತ ಪದ್ಧತಿಯಾಗಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.ಆತ್ಮಸ್ಥೈರ್ಯ ತುಂಬಿ:ಬೇರೆ ಬೇರೆ ರಾಜ್ಯಗಳಿಂದ ಕಾರ್ಮಿಕರನ್ನು ಕರೆದುಕೊಂಡು ಬಂದು, ಯಾರಿಗೂ ತಿಳಿಯದಂತೆ  ಒಂದು ಕೊಠಡಿಯಲ್ಲಿ ಇರಿಸಿಕೊಂಡು ಕೆಲಸಮಾಡಿಸಿಕೊಳ್ಳುವುದು, ವರ್ಷಾನುಗಂಟಲೆ ಸಂಬಳ ನೀಡದಿರುವುದು ನಡೆಯುತ್ತದೆ. ಹಾಗಾಗಿ ಇಂತಹ ಪ್ರಕರಣಗಳನ್ನು ಗಮನಿಸಬೇಕು.  ಅವರನ್ನು ಜೀತದಿಂದ ಮುಕ್ತಗೊಳಿಸಬೇಕು. ಜೀತಪದ್ಧತಿಯಿಂದ ಮುಕ್ತಗೊಳಿಸಿದವರಿಗೆ ಮೊದಲು ಆತ್ಮಸ್ಥೈರ್ಯ ತುಂಬಬೇಕು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮಕ್ಕಳಾಗಿದ್ದರೆ ಅವರನ್ನು ಶಾಲೆಗೆ ದಾಖಲಿಸಬೇಕು, ವಯಸ್ಕರರಿದ್ದರೆ ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸಮಾಡಬೇಕು ಎಂದು ಸಲಹೆ ನೀಡಿದರು.  

ಸಹಾಯವಾಣಿ: ಜೀತ ಪದ್ಧತಿ ಪ್ರಕರಣಗಳು ಬಂದರೆ ಕೂಡಲೇ  ಕಾರ್ಮಿಕ ಸಹಾಯವಾಣಿ 155214,  ತುರ್ತು ಸ್ಪಂದನ ಸಹಾಯವಾಣಿ (ಪೊಲೀಸ್)112,  ಮಕ್ಕಳ ಸಹಾಯವಾಣಿ 1098, ಮಹಿಳಾ ಸಹಾಯವಾಣಿ 181 ಹಾಗೂ ಮಾನವ ಹಕ್ಕುಗಳ ಆಯೋಗ ಸಹಾಯವಾಣಿ 180042523333ಕ್ಕೆ ಕರೆ ಮಾಡಬೇಕು ಎಂದು ತಿಳಿಸಿದರು.  

ಉಪ ವಿಭಾಗಾಧಿಕಾರಿ ಚೆನ್ನಪ್ಪ ಅವರು ಮಾತನಾಡಿ, ಜೀತ ಪದ್ಧತಿ ಸಾಮಾಜಿಕ ಪಿಡುಗಾಗಿದೆ.  ಇದು ರಾಜ-ಮಹಾರಾಜರ ಕಾಲದಿಂದ ನಡೆದುಕೊಂಡುಬಂದಿದೆ. ಜೀತ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಜಾರಿಯಿಂದ  ಇಂದು ಶೇ.99 ರಷ್ಟು ಜೀತ ಪದ್ಧತಿ  ಹತೋಟಿಗೆ ಬಂದಿದೆ. ಅಲ್ಲೊಂದು ಇಲ್ಲೊಂದು ಜೀತ ಪದ್ಧತಿ ಕಾಣಬಹುದಾಗಿದೆ.  ಇಂತಹ ಪ್ರಕರಣಗಳನ್ನು ಸಹ ಪತ್ತೆ ಹೆಚ್ಚಿ ಜೀತಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಎಲ್ಲರೂ ಸಂಕಲ್ಪಮಾಡೋಣ ಎಂದು ಹೇಳಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಜೀತಪದ್ಧತಿ ನಿರ್ಮೂಲನಾ ರಾಜ್ಯ ಉನ್ನತ ಸಮಿತಿ ಸಂಚಾಲಕರಾದ ಶ್ರೀಮತಿ ಬೃಂದಾ ಅಡಿಗ ಅವರು  ಜೀತ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ  ಕುರಿತು ಮಾತನಾಡಿದರು.  

ಕಾರ್ಯಕ್ರಮದಲ್ಲಿ ಜಿ.ಪಂ. ಪ್ರಭಾರ ಉಪ ಕಾರ್ಯದರ್ಶಿ ಮಿಶೆ, ಡಿವೈಎಸ್‌ಪಿ ಎಂ.ಎಸ್‌.ಪಾಟೀಲ,  ತಹಶೀಲ್ದಾರ ಶ್ರೀಮತಿ ಶರಣಮ್ಮ,  ಜೀತಪದ್ಧತಿ ನಿರ್ಮೂಲನಾ  ಜಿಲ್ಲಾ ಸಂಚಾಲನಾ ಸಮಿತಿ  ಸದಸ್ಯರಾದ ಎಸ್‌.ಎಚ್‌. ಮಜೀದ್, ಮುತ್ತುರಾಜ ಮಾದರ ಇತರರು ಉಪಸ್ಥಿತರಿದ್ದರು.