ರಡ್ಡಿ ಸಮುದಾಯದ ದಾನ ಸಮಾಜದ ಏಳ್ಗೆಯಲ್ಲಿ ಮಹತ್ತರ ಪಾತ್ರ; ದಿಂಗಾಲೇಶ್ವರಶ್ರೀ

Raddy community charity played a major role in the development of the society; Dingaleswar Sri

ರಡ್ಡಿ ಸಮುದಾಯದ ದಾನ ಸಮಾಜದ ಏಳ್ಗೆಯಲ್ಲಿ ಮಹತ್ತರ ಪಾತ್ರ; ದಿಂಗಾಲೇಶ್ವರಶ್ರೀ  

ರನ್ನಬೆಳಗಲಿ 21: ದಾನವನ್ನು ಹೇಗೆ ಮಾಡಬೇಕು. ಎಲ್ಲಿ ಮಾಡಬೇಕು ಎಂಬುದರ ಪರಿಜ್ಞಾನ ಹೊಂದಿರುವ ಮುಧೋಳದ ರೆಡ್ಡಿ ಸಮುದಾಯದ ಜನರು ಶಿಕ್ಷಣದ ಕಾರ್ಯಕ್ಕಾಗಿ ನೀಡಿರುವ ದಾನವು ಮುಂಬರುವ ದಿನಗಳಲ್ಲಿ ಸಮಾಜದ ಏಳ್ಗೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ ಎಂದು ಶಿರಹಟ್ಟಿ-ಬಾಲೆ ಹೊಸೂರಿನ ಫಕೀರಶ್ವರ ಸಂಸ್ಥಾನಮಠದ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.   ಸೋಮವಾರ ಮುಧೋಳ ನಗರದ ಹೇಮರಡ್ಡಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನರ ಜಯಂತ್ಯುತ್ಸವ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಒಂದು ಶಿಕ್ಷಣ ಸಂಸ್ಥೆ ನಿರ್ಮಾಣ ಕಾರ್ಯದಲ್ಲಿ ಉತ್ಸುಕತೆ ತೋರುತ್ತಿ ರುವ ನೀವುಗಳು ದಾನಶೂರ ಕರ್ಣನ ಸಾಲಿ ನಲ್ಲಿ ನಿಲ್ಲುತ್ತೀರಿ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ವಯಸ್ಸಿನಲ್ಲಿ ಚಿಕ್ಕವರಾದರೂ ಅಧ್ಯಕ್ಷತೆ ವಹಿಸಿಕೊಂಡಿರುವ ದಯಾನಂದ ಪಾಟೀಲರು ಸಮಾಜದ ಎಲ್ಲ ಹಿರಿಯರ ಮಾರ್ಗದರ್ಶನ ದಲ್ಲಿ ಅತ್ಯಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.  

ನಮ್ಮ ಭಾಗದಲ್ಲಿ ಅತ್ಯುನ್ನತ ಶಾಲೆಗಳು ನಿರ್ಮಾಣಗೊಂಡಿದ್ದರೂ ಈ ಭಾಗದ ಪಾಲಕರು ತಮ್ಮ ಮಕ್ಕಳನ್ನು ದಕ್ಷಿಣ ಕನ್ನಡ, ದಕ್ಷಿಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕೊಡಿಸಲು ಮುಂದಾಗುತ್ತಿದ್ದೀರಿ. ಇಂತಹ ಮನೋಭಾವ ಬದಲಾಗಬೇಕು. ನಮ್ಮಲ್ಲಿಯೇ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿಯೇ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದರು.   

ಉಪನ್ಯಾಸಕ ಸಂಜಯ ನಡುವಿನಮನಿ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ವೇಮನರು ಹಾಗೂ ಹೇಮರಡ್ಡಿ ಮಲ್ಲಮ್ಮನವರು ತಮ್ಮ ಬದುಕನ್ನೆ ಮುಡಿಪಾಗಿಟ್ಟಿದ್ದರು. ಅವರ ಕೊಡುಗೆಯನ್ನು ನಾವು ಎಂದಿಗೂ ಮರೆಯಬಾರದು. ರಾಜಮನೆತನದ ಪಿತೃವಾತ್ಸಲ್ಯ ತೊರೆದ ವೇಮನರು ಪಾರಮಾರ್ಥಿಕ ಆನಂದಕ್ಕಾಗಿ ಕಾಡಿನೆಡೆಗೆ ತೆರಳಿ ಕಠಿಣ ತಪಸ್ಸಿನಿಂದ ಯೋಗಿಯಾಗಿ ರೂಪುಗೊಂಡರು ಎಂದು ಮಹಾ ಯೋಗಿಯ ಜೀವನ ವೃತ್ತಾಂತ ತಿಳಿಸಿದರು.    

ವೇಮನರು ಸರಿಸುಮಾರು ಇಪ್ಪತ್ತು ಸಾವಿರ ಪದ್ಯಗಳ ಮೂಲಕ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಮಣ್ಣಿನ ಸಂಸ್ಕಾರ ಹೊಂದಿರುವ ರೆಡ್ಡಿ ಜನಾಂಗ ಶ್ರೇಷ್ಠ ಜನಾಂಗ, ಹಿರಿಯರ ಆಶಿರ್ವಾದದಿಂದ ನಮ್ಮ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ಕಾರ್ಯ ಮಾಡೋಣ ಎಂದರು. ಮಕ್ಕಳು ಮೊಬೈಲ್ ಬಳಕೆಗೆ ನೀಡಿರುವಸಮಯವನ್ನು ಮಹಾನ್ ಪುರುಷರವಚನದ ಓದಿಗೆ ನೀಡಿದ್ದರೆ ಮಹಾನ್ ಶಕ್ತಿಯಾಗಿ ಹೊರ ಹೊತ್ತಿದ್ದರು. ಮಕ್ಕಳಿಗೆ ಶರಣರ ಜೀವನವನ್ನು ತಿಳಿಸಿಕೊಡುವ ಕಾರ್ಯವಾಗಬೇಕು ಎಂದರು.    

ಹುಲಕೋಟಿಯ ಎಸ್‌.ಆರ್‌. ಪಾಟೀಲರು ವೇಮನರ ಪದ್ಯಗಳನ್ನು ನಾಡಿನಾದ್ಯಂತ ಪರಿಚಯಿಸುವ ಅಮೋಘವಾದ ಕಾರ್ಯ ಮಾಡುವ ಮೂಲಕ ವೇಮನರ ಜೀವನದ ಮೌಲ್ಯಕ್ಕೆ ಹೊಸ ಹೊಳಪು ನೀಡಿದ್ದಾರೆ ಎಂದರು.   

ಪ್ರಾಸ್ತಾವಿಕವಾಗಿ ಮಾತನಾಡಿದ ಹೇಮರಡ್ಡಿ ಮಲ್ಲಮ್ಮ ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆ ಅಧ್ಯಕ್ಷ ದಯಾನಂದ ಪಾಟೀಲ, ಎಪ್ಪತ್ತರ ದಶಕದಲ್ಲಿ  ದಶಕದಲ್ಲಿ ನಮ್ಮ ಮಹನೀಯರು ಇಲ್ಲಿನ ಜಮೀನು ಖರೀದಿಸಿ ಮುಂಬರುವ ಪೀಳಿಗೆಗೆ ಉಪಯುಕ್ತ ಕಾಣಿಕೆ ನೀಡಿದ್ದಾರೆ. ಅವರ ಸೇವೆ ನಮ್ಮ ಸಮಾಜದ ಶ್ರೇಯೋಭಿವೃದ್ಧಿಗೆ ಕಾರಣೀಕರ್ತವಾಗಿದೆ ಎಂದರು.  

ಶಿಕ್ಷಣದಮೂಲಕ ಸಮಾಜವನ್ನು ಮುನ್ನೆಲೆಗೆ ತರುವ ನಮ್ಮ ಪ್ರಯತ್ನಕ್ಕೆ ಸಮಾಜದ ಮಹನೀಯರು ಅಭೂತಪೂರ್ವ ಕೊಡುಗೆ ನೀಡಿದ್ದಾರೆ ಅವರೆಲ್ಲರಿಗೂ ಧನ್ಯವಾದ ಸಲ್ಲಿಸಿದರು. ನಿಮ್ಮೆಲ್ಲರ ಸಹಕಾರದಿಂದ ಶೈಕ್ಷಣಿಕ ಕೇಂದ್ರದ ಕಟ್ಟಡ ಬಹುತೇಕ ಪೂರ್ಣಗೊಂಡಿದ್ದು ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಶಾಲಾರಂಭ ಮಾಡುವ ಉದ್ದೇಶ ಹೊಂದಿದ್ದೇವೆ ಎಂಬ ಆಶಾಭಾವ ವ್ಯಕ್ತಪಡಿಸಿದರು.  ಪ್ರೌಢ ಶಾಲೆಯ ಸಹಶಿಕ್ಷಕ ಸಂಜಯ ನಡುವಿನಮನಿ ಉಪನ್ಯಾಸ ನೀಡಿದರು.  

ಮುಖಂಡರಾದ ಹನಮಂತಗೌಡ ಬಿರಾದಾರಪಾಟೀಲ, ಕೆ.ಆರ್‌. ಮಾಚಪ್ಪನವರ, ಎಲ್‌.ವಿ. ಕುರ್ತಕೋಟಿ, ಎ.ಜಿ.ಪಾಟೀಲ, ಡಾ.ಸತೀಶ ಮಲಘಾಣ, ತಮ್ಮಣ್ಣಪ್ಪ ಅರಳಿಕಟ್ಟಿ ಶಿವನಗೌಡ ನಾಡಗೌಡ, ಶಂಕರ ಪಾಟೀಲ, ಮಹಾದೇವ ದಾಸರಡ್ಡಿ, ರಮೇಶ ನಿಡೋಣಿ ಸೇರಿದಂತೆ ಇತರರು ಇದ್ದರು.ಬಾಕ್ಸ್ದಾನಿಗಳಿಗೆ ಸನ್ಮಾನವೇಮನ ಶಿಕ್ಷಣ ಸಂಸ್ಥೆಗೆ ಸಹಾಯಹಸ್ತ ನೀಡಿದ ಶಿವನಗೌಡ ನಾಡಗೌಡ, ಶಾಂತವ್ವ ಪಾಟೀಲ, ಜಗದೀಶ, ರವಿ, ಅಶೋಕ ಪಾಟೀಲ, ಅರವಿಂದ ಕಳ್ಳಿಗುತ್ತಿ, ಮಂಜುನಾಥ ಪಾಟೀಲ, ಅಭಯ ಸರನಾಯಕ, ಹನಮಪ್ಪ ಪಂಚಗಾವಿ, ತಮ್ಮಣ್ಣ ಉದಪುಡಿ, ದೀಪಕ ಪಾಟೀಲ, ಸುಭಾಸ ಸಂಗಣ್ಣವರ, ಸುರೇಶ ಹೊಸೂರ, ಸತೀಶ ಒಂಟಗೋಡಿ, ಗಿರಿಯಪ್ಪ ತುಳಸಿಗೇರಿ, ಪದ್ಮಾ ಬಿರಾದಾರ ಪಾಟೀಲ, ಸುಜಾತಾ ಕಡಿವಾಳ ಅವರನ್ನು ಸನ್ಮಾನಿಸಲಾಯಿತು.