ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಗಾಗಿ ಆಗ್ರಹಿಸಿ ಜ.30 ರಂದು ಪ್ರತಿಭಟನೆ
ಬಳ್ಳಾರಿ 27: ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆಯ ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಮುಂಡಲೂರು ರಾಮಪ್ಪ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಲಾಯಿತು. ಮೆಣಸಿನಕಾಯಿ ಬೆಳೆಗೆ (5531 ವಿಧದ ಬೆಳೆಗೆ ರೂ 25,000, ಬ್ಯಾಡಗಿ 2043 ವಿಧದ ಬೆಳೆಗೆ ರೂ 50,000 ) ಬೆಂಬಲ ಬೆಲೆ ನೀಡಿ, ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಗಾಗಿ ಆಗ್ರಹಿಸಿ ದಿನಾಂಕ 30/01/2025 ರಂದು ನಡೆಯುವ ಪ್ರತಿಭಟನೆ ಕುರಿತು ಈ ಪತ್ರಿಕಾ ಗೋಷ್ಠಿಯು ನಡೆಯಿತು.
ಈ ಗೋಷ್ಠಿಯನ್ನು ಸಂಘದರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಮತ್ತು ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಕಾಂ. ಗೋವಿಂದ್ ಅವರು ನಡೆಸಿಕೊಟ್ಟರು. ಅವರು ಮಾತನಾಡುತ್ತಾ ಈ ವರ್ಷ ಮೆಣಸಿನಕಾಯಿ ಬೆಳೆ ಬೆಳೆಯಲು ರೈತರು ಒಂದು ಎಕರೆಗೆ ಅಂದಾಜು ಒಂದುವರೆ ಲಕ್ಷದಿಂದ ಎರೆಡು ಲಕ್ಷದ ವರೆಗೆ ಖರ್ಚು ಮಾಡಿದ್ದಾರೆ, ಹಾಗೂ ಕಳೆದ ಒಂದು ತಿಂಗಳ ಹಿಂದೆ ಕೆಲವು ದಿನಗಳವರೆಗೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಹಸಿ ಜಾಸ್ತಿಯಾಗಿ ಮೆಣಸಿನಕಾಯಿಗೆ ಕಪ್ಪು ಮಚ್ಚೆ ರೋಗ ತಗುಲಿದೆ. ಈ ಸಂದರ್ಭದಲ್ಲಿ ಮೆಣಸಿನಕಾಯಿ ಬೆಲೆ ಈಗಿನ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಮೆಣಸಿನಕಾಯಿಗೆ 8000 ರೂಪಾಯಿಯಿಂದ 11 ಸಾವಿರ ರೂ ವರೆಗೆ ಖರೀದಿಯಾಗುತ್ತಿದೆ.
ಈ ಕಡಿಮೆ ಬೆಲೆಯಿಂದ ರೈತರಿಗೆ ತುಂಬಾ ನಷ್ಟ ಆಗುತ್ತಿದೆ, ಕಳೆದ ನಾಲ್ಕು, ಐದು ವರ್ಷಗಳಿಂದ ಮೆಣಸಿನಕಾಯಿ ಬೆಲೆ ಭಾರಿ ಕುಸಿತ ಕಂಡಿದ್ದರಿಂದ ಬಳ್ಳಾರಿ ಜಿಲ್ಲೆಯ ರೈತರು ಹೆಚ್ಚಿನ ನಷ್ಟಕ್ಕೀಡಾಗಿ, ಬೆಳೆಗಾಗಿ ಮಾಡಿಕೊಂಡ ಸಾಲದ ಬಾದೆ ತಾಳಲಾರದೆ, ಆತ್ಮಹತ್ಯೆಯ ಮೊರೆ ಹೋಗುವತ್ತ ರೈತರನ್ನು ಪರಿಸ್ಥಿತಿ ತಳ್ಳುತ್ತಿದೆ. ಈ ಅನಾಹುತವನ್ನು ತಡೆಯಲು ಸರ್ಕಾರವು ಮೆಣಸಿನಕಾಯಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಹಾಗೂ ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆಯನ್ನು ಪ್ರಾರಂಭಿಸಬೇಕು. ಮತ್ತು 5531 ವಿಧದ ಮೆಣಸಿನಕಾಯಿ ಬೆಳೆಗೆ ಒಂದು ಕ್ವಿಂಟಲ್ ಗೆ ರೂ 25,000, ಬ್ಯಾಡಗಿ 2043 ವಿಧದ ಮೆಣಸಿನಕಾಯಿ ಬೆಳೆಗೆ ಒಂದು ಕ್ವಿಂಟಲ್ ಗೆ ರೂ 50,000 ಬೆಂಬಲ ಬೆಲೆ ನೀಡಬೇಕು. ಕೇಂದ್ರ ಸರ್ಕಾರವು ಮೆಣಸಿನಕಾಯಿ ಬೆಳೆಗೆ ಬೆಂಬಲ ಬೆಲೆ ನೀಡಲು ಮುಂದಾಗುತ್ತಿಲ್ಲ, ಈ ಬೆಳೆ ವಾಣಿಜ್ಯ ಬೆಳೆಯಾದ ಕಾರಣ ಇದು ಎಂ ಎಸ್ ಪಿ ಅಡಿಯಲ್ಲಿ ಸೇರುವುದಿಲ್ಲವೆಂದು ಕಾರಣ ನೀಡಿ ಇದಕ್ಕೆ ಬೆಂಬಲ ಬೆಲೆ ನೀಡದೆ, ನಿರಾಕರಿಸಲಾಗುತ್ತಿದೆ.
ಮೆಣಸಿನಕಾಯಿ ಬೆಳೆಯು ವಾಣಿಜ್ಯ ಬೆಳೆ ಎಂಬುದಾದರು ಸಹ ಅದು ಆಹಾರ ಪದಾರ್ಥಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಹಾಗಾಗಿ ಮೆಣಸಿನಕಾಯಿ ಬೆಳೆಯು ಸಹ ಆಹಾರದಲ್ಲಿ ಅಗತ್ಯವಾದುದು ಎಂದು ಪರಿಗಣಿಸಿ , ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಮೆಣಸಿನಕಾಯಿ ಬೆಳೆಯನ್ನು ಸರ್ಕಾರವೇ ಖರೀದಿಸಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದರು ರಾಜ್ಯ ಸಮಿತಿ ಸದಸ್ಯರಾದ ಈ.ಹನುಮಂತಪ್ಪ ಅವರು ಮಾತನಾಡುತ್ತಾ ಬಳ್ಳಾರಿ, ಕುರುಗೋಡು, ಸಿರುಗುಪ್ಪ , ಸಂಡೂರು ಮತ್ತು ಕಂಪ್ಲಿ ಸೇರಿದಂತೆ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಬಹುತೇಕ ರೈತರು ಮೆಣಸಿನಕಾಯಿ ಬೆಳೆದಿದ್ದಾರೆ. ಇಲ್ಲಿಯ ಬಹುತೇಕ ಮೆಣಸಿನಕಾಯಿ ಬೆಳೆಯು ಬ್ಯಾಡಗಿಯ ಮಾರುಕಟ್ಟೆಗೆ ಹೋಗಿ ಮಾರಾಟವಾಗುತ್ತಿದೆ, ಇದರಿಂದ ಪ್ರಯಾಣದ ವೆಚ್ಚವೂ ಸಹ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಒಂದು ಎಕರೆ ಮೆಣಸಿನಕಾಯಿ ಬೆಳೆ ಬೆಳೆಯಲು ಬಳಸುವ ಕೀಟನಾಶಕದ ವೆಚ್ಚ ರೂ 50,000, ರಸಗೊಬ್ಬರದ ವೆಚ್ಚ ರೂ 25,000, ಬೀಜ,ಸಸಿ ಗೆ 25,000 ರೂ , ಕೆಲಸಗಾರರ ವೆಚ್ಚ 30,000 ರೂ ಮತ್ತು ಕುಂಟೆ, ಮಡಿಕೆ ಸೇರಿದಂತೆ ಇನ್ನಿತರೇ ಖರ್ಚುಗಳು ಸೇರಿ ಒಂದೂವರೆ ಲಕ್ಷದಿಂದ ಎರೆಡು ಲಕ್ಷದಷ್ಟು ದುಬಾರಿ ವೆಚ್ಚವಾಗುತ್ತಿದೆ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯಸ್ಥಿಕೆ ವಹಿಸಿಕೊಂಡು, ರೈತರ ಮೆಣಸಿನಕಾಯಿ ಬೆಳೆಗೆ ಬೆಂಬಲ ಬೆಲೆ ನೀಡಿ, ಮೆಣಸಿನಕಾಯಿ ಬೆಳೆಯುವ ರೈತರಿಗೆ ನ್ಯಾಯ ನೀಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ(ಂಋಏಒಖ) ಬಳ್ಳಾರಿ ಜಿಲ್ಲಾ ಸಮಿತಿಯು ಇದೇ ತಿಂಗಳ 30 ರಂದು ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು,
ಈ ಪ್ರತಿಭಟನೆಯಲ್ಲಿ ಬಳ್ಳಾರಿ ಜಿಲ್ಲೆಯ ಮೆಣಸಿನಕಾಯಿ ಬೆಳೆ ಬೆಳೆಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರುಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಪ್ರಾಸ್ತಾವಿಕವಾಗಿ ಮಾತನಾಡುತ್ತಾ 1) ಮೆಣಸಿನಕಾಯಿ ಬೆಳೆಗೆ (5531 ಗೆ ರೂ 25,000, ಬ್ಯಾಡಗಿ 2043 ಗೆ ರೂ 50,000 ) ಬೆಂಬಲ ಬೆಲೆ ನೀಡಬೇಕು.2) ಬಳ್ಳಾರಿಯಲ್ಲಿ ಶೀಘ್ರವಾಗಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು.3) ಮೆಣಸಿನಕಾಯಿ ಬೆಳೆಗೆ ತಗುಲುತ್ತಿರುವ ಕಪ್ಪು ಮಚ್ಚೆ ರೋಗಕ್ಕೆ ಓಷಧ ಕಂಡುಹಿಯಬೇಕು.4) ಬೀಜ,ರಸಗೊಬ್ಬರ ಮತ್ತು ಕೀಟ ನಾಶಕಗಳ ಬೆಳೆಯನ್ನು ನಿಯಂತ್ರಿಸಬೇಕು ಮತ್ತು ಸರ್ಕಾರವೇ ಓಷಧಗಳ ವಿತರಣಾ ಕೇಂದ್ರ ತೆರೆಯಬೇಕು ಎಂಬ ಬೇಡಿಕೆಗಳು ನ್ಯಾಯಬದ್ಧವಾಗಿವೆ, ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಈ ಬೇಡಿಕೆಗಳನ್ನು ಹಿಡೇರಿಸಬೇಕು ಇಲ್ಲದಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಈ ಹೋರಾಟವನ್ನು ಬೆಳಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬಸಣ್ಣ, ಬಳ್ಳಾರಿ ತಾಲೂಕು ಕಾರ್ಯದರ್ಶಿ ಧನರಾಜ್, ಜಿಲ್ಲಾ ಸಮಿತಿ ಸದಸ್ಯರಾದ ಹೊನ್ನೂರ್ಪ ಉಪಸ್ಥಿತರಿದ್ದರು.