ದಾಂಡೇಲಿ ಡಿ.ಎಫ್‌.ಎ. ಟೌನ್‌ಶಿಪ್ ಪ್ರದೇಶದಲ್ಲಿನ ಅತಿಕ್ರಮಣ ಜಾಗದ ಮುಂದುವರಿದ ಪ್ರತಿಭಟನೆ

ದಾಂಡೇಲಿ ಡಿ.ಎಫ್‌.ಎ. ಟೌನ್‌ಶಿಪ್ ಪ್ರದೇಶದಲ್ಲಿನ ಅತಿಕ್ರಮಣ ಜಾಗದ ಮುಂದುವರಿದ ಪ್ರತಿಭಟನೆ Protest continues over encroachment in Dandeli DFA Township area

ಕಾರವಾರ 13: ದಾಂಡೇಲಿ ಡಿ.ಎಫ್‌.ಎ. ಟೌನ್ ಶಿಪ್ ಪ್ರದೇಶದಲ್ಲಿ ನಡೆಯುತ್ತಿರುವ ಜಾಗೆ ಅತಿಕ್ರಮಣ ಪ್ರಕರಣ ಯಥಾಸ್ಥಿತಿ ಮುಂದುವರಿದಿದ್ದು  ನಿವೇಶನ ರಹಿತ ಸ್ಥಳೀಯರು ಪ್ರತಿಭಟನೆ ಮುಂದುವರಿಸಿದ್ದಾರೆ.  ಯುಟೂಬರನ ಸೈಟ್  ಅತಿಕ್ರಮಣ   ಸ್ಥಳೀಯರ ಅಸಮಾಧಾನಕ್ಕೆ  ಕಾರಣವಾಗಿದೆ.  ಹಾಗೂ ಸ್ಥಳೀಯ ಮಹಿಳೆಯರು ಪ್ರತಿಭಟನೆ ಮುಂದುವರಿಸಿದ್ದಾರೆ. ಬಡವರಾದ  ನಮಗೆ ಮನೆ ಕಟ್ಟಲು ಸರ್ಕಾರ ಜಾಗೆ ಕೊಡುತ್ತಿಲ್ಲ. ಆದರೆ ಪರವೂರಿನವರು ಪ್ರಭಾವ ಬೀರಿ  ಸೈಟ್ ಅತಿಕ್ರಮಿಸುತ್ತಿದ್ದರೂ,  ಅಧಿಕಾರಿಗಳು ಕಣ್ಣು ಮುಚ್ಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದ ಮಧ್ಯಭಾಗದಲ್ಲಿರುವ ಪ್ರಮುಖ ಜಾಗೆಯಲ್ಲಿ, ಯುಟ್ಯೂಬರ್ ಹಾಗೂ ಪತ್ರಕರ್ತನೊಬ್ಬ ಅತಿಕ್ರಮಣ ಮಾಡಿದನೆಂಬ ಆರೋಪ ಕೇಳಿಬಂದಿದೆ. ಆ ಜಾಗೆಯ ಪಕ್ಕದ ಪ್ರದೇಶದಲ್ಲಿ ಸ್ಥಳೀಯ ಮಹಿಳೆಯರು ಮತ್ತು ಕುಟುಂಬಗಳು ಮುಳ್ಳುಬೇಲಿ ಹಾಕಿ, ಸೀರೆ ತೊಟ್ಟು ಬೀಡು ಬಿಟ್ಟು ಅಡಿಗೆ ಮಾಡುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ. 2ನೇ ದಿನಕ್ಕೂ ಈ ಹೋರಾಟ ಮುಂದುವರಿದಿದೆ. ಪೌರಾಯುಕ್ತರ ಸೂಚನೆ:  ಪೌರಾಯುಕ್ತರು ಬೇಲಿ ತೆರವುಗೊಳಿಸಲು ಸೂಚಿಸಿದರೂ ಯುಟ್ಯೂಬರ್‌’ಸೈಟ್  ನನ್ನದೇ’  ಎಂದು ಉದ್ದಟವಾಗಿ ಪ್ರತಿಕ್ರಿಯಿಸಿದನೆಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ಸ್ಥಳೀಯರ ಕೋಪ ಉಲ್ಬಣಿಸಿದೆ. ನಿರ್ಲಕ್ಷ್ಯದ ಆರೋಪ: ಅತಿಕ್ರಮಣ ವಿಷಯವನ್ನು  ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಾನಂದ ಗಗ್ಗರಿ ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಜಿಲ್ಲಾಧಿಕಾರಿಗಳಿಂದ ಕ್ರಮ ಕೈಗೊಳ್ಳುವ ಸೂಚನೆ ಬಂದಿದ್ದರೂ, ಸ್ಥಳೀಯ ತಹಶೀಲದಾರರು ಕ್ರಮ ಕೈಗೊಳ್ಳದಿರುವುದು ಸಂಶಯಾಸ್ಪದವಾಗಿದೆ. ತಹಶೀಲದಾರರು ಯುಟ್ಯೂಬರ್ ಜೊತೆ ಆತ್ಮೀಯತೆ ಹೊಂದಿರುವ ಕಾರಣ ಕ್ರಮದಿಂದ ಹಿಂದೆ ಸರಿದಿದ್ದಾರೆ ಎಂದು ಸ್ಥಳೀಯರು  ಆರೋಪಿಸಿದ್ದಾರೆ.ಮಹಿಳಾ ಹೋರಾಟಗಾರರ ಬೇಡಿಕೆ :ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ  ಅವರನ್ನು ದಾಂಡೇಲಿ ನಗರಸಭೆಯ ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಿಸಿರುವುದರಿಂದ ಅವರು ಸ್ವತಃ ಸ್ಥಳಕ್ಕೆ ಬಂದು ವಿಚಾರಣೆ ನಡೆಸಬೇಕು ಎಂದು ಪ್ರತಿಭಟನಾಕಾರರು  ಆಗ್ರಹಿಸಿದ್ದಾರೆ. ಬೆಲೆಬಾಳುವ ಸೈಟ್ ಕಬಳಿಕೆ :  ನಗರಾಡಳಿತದ ಅವಧಿ ಮುಗಿಯುವುದನ್ನು ಕಾಯುತ್ತಿದ್ದ ಯುಟ್ಯೂಬರ್, ಆಡಳಿತದ ಶಿಥಿಲಾವಸ್ಥೆಯ ಸಮಯದಲ್ಲಿ ಈ ಬೆಲೆ ಬಾಳುವ ಸೈಟ್ನ್ನು ಅತಿಕ್ರಮಿಸಿರುವುದು ಸ್ಥಳೀಯರ ಮಧ್ಯೆ ತೀವ್ರ ಚರ್ಚೆಗೆ ಕಾರಣವಾಗಿದೆ. ನಮಗೂ ಮನೆ ಕಟ್ಟಲು ಸರಕಾರದ ಸೈಟ್ ನೀಡಿ  ಸಹಾಯ ಮಾಡಬೇಕು.  ಇಲ್ಲದಿದ್ದರೆ ನೆಲೆಯ  ಹಕ್ಕಿಗಾಗಿ ಪ್ರತಿಭಟನೆ  ಮುಂದುವರಿಸುತ್ತೇವೆ ಎಂದು ದಾಂಡೇಲಿ ನಾಗರಿಕರು ಹೇಳಿದ್ದಾರೆ. ...