ಧಾರವಾಡ 6: ಜೆಎನ್ಯು ವಿದ್ಯಾರ್ಥಿ ಗಳು ಮತ್ತು ಶಿಕ್ಷಕರ ಮೇಲೆ ಎಬಿವಿಪಿ ನಡೆಸಿದ ಹೇಯ ಗೂಂಡಾಗಿರಿಯನ್ನು ಎಐಡಿಎಸ್ಓ ಅತ್ಯುಗ್ರವಾಗಿ ಖಂಡಿಸಿ ಇಂದು ನಗರದ ವಿವೇಕಾನಂದ ವೃತ್ತದಲ್ಲಿ ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಎಐಡಿಎಸ್ಓ ನ ಜಿಲ್ಲಾ ಕಾರ್ಯದರ್ಶಿ ರಣಜೀತ ಧೂಪದ ಮಾತನಾಡಿ ಭಾರಿ ಸಂಖ್ಯೆಯ ಎಬಿವಿಪಿ ಗೂಂಡಾಗಳು ಮತ್ತು ಹೊರಗಿನಿಂದ ಬಂದ ಕಿಡಿಗೇಡಿಗಳು ಕಬ್ಬಿಣದರಾಡ್ ಮತ್ತು ಲಾಠಿಗಳನ್ನು ಹಿಡಿದು ಕ್ಯಾಂಪಸ್ ನಲ್ಲಿರುವ ಹಾಸ್ಟೆಲುಗಳು ಮತ್ತು ವಿದ್ಯಾರ್ಥಿಗಳು ಸೇರುವ ಸ್ಥಳಗಳಿಗೆ ನುಗ್ಗಿ ಸಿಕ್ಕ ಸಿಕ್ಕವರನ್ನು, ಅದರಲ್ಲೂ ಜೆಎನ್ಯು ಶುಲ್ಕ ಹೆಚ್ಚಳ ವಿರೋಧಿಸುತ್ತಿರುವ ವಿದ್ಯಾರ್ಥಿ ಗಳನ್ನು ಗುರಿಯಾಗಿರಿಸಿಕೊಂಡು ಮನಬಂದಂತೆ ದಾಳಿ ಮಾಡಿದ್ದಾರೆ. ವಿದ್ಯಾರ್ಥಿ ನಿಯನ್ನು ಸಹ ಬಿಡದೇ ಥಳಿಸಿದ್ದಾರೆ. ಜೆಎನ್ಯುಎಸ್ಯು ಅಧ್ಯಕ್ಷೆ ಸೇರಿದಂತೆ ಹಲವಾರು ವಿದ್ಯಾರ್ಥಿ ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾರೀ ಸೆಕ್ಯೂರಿಟಿ ಇದ್ದ ಜೆಎನ್ಯು ಗೇಟುಗಳ ಮೂಲಕ ಮಾರಣಾಂತಿಕ ಅಸ್ತ್ರಗಳನ್ನು ಹಿಡಿದಿದ್ದ ಎಬಿವಿಪಿ ಗೂಂಡಾಗಳು ಒಳಗೆ ಬಂದಿದ್ದು ಗಮನಿಸಿದರೆ, ಆಡಳಿತ ವರ್ಗವು ಈ ಗೂಂಡಾಗಿರಿಗೆ ಬೆಂಬಲವಾಗಿ ನಿಂತಿರುವುದು ಸ್ಪಷ್ಟವಾಗುತ್ತದೆ ಎಂದು ಎಐಡಿಎಸ್ಓ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸೌರವ್ ಘೋಷ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಲ್ಲಾ ಅಡೆತಡೆಗಳನ್ನು ಮೀರಿ ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಶುಲ್ಕ ಹೆಚ್ಚಳ ವಿರೋಧಿ ಹೋರಾಟದ ವಿರುದ್ಧ ಆಡಳಿತ ವರ್ಗದ ಸಹಕಾರದೊಂದಿಗೆ ಕೋಮುವಾದಿ ಎಬಿವಿಪಿ ನಡೆಸಿದ ಈ ದಾಳಿಯು, ಆಡಳಿತ ವರ್ಗದ ಹೊಣೆಗೇಡಿತನವನ್ನು ತೋರಿಸುತ್ತದೆ. ಶುಲ್ಕ ಹೆಚ್ಚಳ ವಿರೋಧಿ ಹೋರಾಟದ ದಿಕ್ಕು ತಪ್ಪಿಸಲು ಮತ್ತು ವಿದ್ಯಾರ್ಥಿ ಸಮುದಾಯದಲ್ಲಿ ಭಯ ಮೂಡಿಸಲು ಜೆಎನ್ಯು ಆಡಳಿತ ವರ್ಗ ಮತ್ತು ಎಬಿವಿಪಿ ಈ ಕುತಂತ್ರವನ್ನು ಹೆಣೆದಿವೆ.
ಹೋರಾಟನಿರತ ವಿದ್ಯಾರ್ಥಿ ಗಳು ಮತ್ತು ಶಿಕ್ಷಕರಿಗೆ ಬೆಂಬಲ ಸೂಚಿಸುತ್ತಾ, ದೇಶದ ವಿದ್ಯಾರ್ಥಿ ಸಮುದಾಯ ಮತ್ತು ಎಲ್ಲಾ ಜನಗಳಲ್ಲಿ ಈ ಸಂಕಷ್ಟದ ಸಮಯದಲ್ಲಿ ಜೆಎನ್ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಬೆಂಬಲವಾಗಿ ನಿಲ್ಲಲು ಎಐಡಿಎಸ್ಓ ಕರೆ ನೀಡುತ್ತದೆ. ಈ ರೀತಿಯ ದಾಳಿಗಳನ್ನು ಎದುರಿಸಲು ನಾವೆಲ್ಲರೂ ಒಂದಾಗಬೇಕು ಮತ್ತು ಇಂತಹ ಅಪ್ರಜಾತಾಂತ್ರಿಕ, ನಿರಂಕುಶವಾದಿ ಮತ್ತು ಕ್ರೂರ ಆಡಳಿತದ ವಿರುದ್ಧ ಬಲಿಷ್ಠ ಜನ ಹೋರಾಟವನ್ನು ಕಟ್ಟಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಮತ್ತು ಹೆಚ್ಚಳವಾಗಿರುವ ಶುಲ್ಕವನ್ನು ಈ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಮಹಾಂತೇಶ ಬಿ. ಜಂಟಿಕಾರ್ಯದರ್ಶಿ ಶಶಿಕಲಾ ಮೇಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಿಂಧೂ ಕೌದಿ, ಸಹನಾ, ವಿದ್ಯಾರ್ಥಿಗಳಾದ ಮಹಾಂತೇಶ, ಬಸನಗೌಡ, ಕರೆಪ್ಪ, ಅಶೋಕ, ಅಕ್ಷತಾ, ಮಂಜು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.