ಅಂಬಿಗ ಸಮುದಾಯದ ವೃತ್ತಿಗಳು
ಹಂಪಿ 20: ‘ಪಾರಂಪರಿಕ ವೃತ್ತಿಗಳನ್ನು ನಿರ್ವಹಿಸುತ್ತಿರುವ ಸಮುದಾಯಗಳಲ್ಲಿ ಅಂಬಿಗ ಸಮುದಾಯವೂ ಒಂದು’ ಎಂದು ಸಂಶೋಧಕರಾದ ಬಸಪ್ಪ ಬಿ. ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಡಿಸೆಂಬರ್ 19, 2024ರ ಗುರುವಾರದಂದು ಹಮ್ಮಿಕೊಂಡಿದ್ದ 276ನೇ ಆನ್‌ಲೈನ್ ವಾರದ ಮಾತು ಕಾರ್ಯಕ್ರಮದಲ್ಲಿ “ಅಂಬಿಗ ಸಮುದಾಯದ ವೃತ್ತಿಗಳು” ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು. ತುಂಗಭದ್ರ ನದಿ ಪರಿಸರದ ವ್ಯಾಪ್ತಿಯಲ್ಲಿ ವಿಜಯನಗರ ಪರಿಸರವನ್ನು ಕೇಂದ್ರೀಕರಿಸಿ ಈ ಸಮುದಾಯದ ವೃತ್ತಿಗಳಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ನಡೆದಿರುವ, ನಡೆಯುತ್ತಿರುವ ವೃತ್ತಿಪಲ್ಲಟ, ವೃತ್ತಿನಷ್ಟ, ಆಧುನೀಕರಣದ ಹಿನ್ನೆಲೆಯಲ್ಲಿ ಭಾಷಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳನ್ನು ಕುರಿತು ಅಧ್ಯಯನ ಮಾಡಬೇಕಾಗಿದೆ ಎಂದರು. ಮುಂದುವರೆದು ಅಂಬಿಗ ಸಮುದಾಯವು ಅನೇಕ ಪರ್ಯಾಯ ಹೆಸರುಗಳಿಂದ ಗುರುತಿಸಿಕೊಂಡಿದ್ದು, ವಿಶೇಷವಾಗಿ ನದಿ, ಕೆರೆ, ಹಳ್ಳ, ಸಮುದ್ರದ ದಂಡೆಗಳಲ್ಲಿ ವಾಸಿಸುತ್ತಾರೆ. ಇವರು ಪ್ರಧಾನವಾಗಿ ನೀರಿನ ಜೊತೆಗೆ ವೃತ್ತಿಗಳನ್ನು ಹೊಂದಿದವರು. ಉದಾಹರಣೆಗೆ ದೋಣಿ ನಡೆಸುವುದು, ದೋಣಿ ತಯಾರಿಕೆ, ಮೀನುಗಾರಿಕೆ, ಬಲೆ ತಯಾರಿಕೆ, ನೀರಗಂಟಿ ಮುಂತಾದವು. ಇವರು ತಮ್ಮನ್ನು ಗಂಗೆಕುಲ, ಗಂಗೆ ಮಕ್ಕಳು, ಗಂಗಾಮತಸ್ಥರು, ಗಂಗಾಪುತ್ರರು, ಗೌರಿಮತಸ್ಥರು ಹೀಗೆ ಮುಂತಾದ ಹೆಸರುಗಳಿಂದ ಕರ್ನಾಟಕದಾದ್ಯಂತ ಗುರುತಿಸಿಕೊಂಡಿದ್ದಾರೆ ಎಂದು ಉದಾಹರಣೆ ಸಹಿತ ಅವರು ವಿವರಿಸಿದರು.
ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಪಿ. ಮಹಾದೇವಯ್ಯ ಅವರು, ವಿಭಾಗದ ಸಂಶೋಧನಾರ್ಥಿಗಳಾದ ಪ್ರಜ್ವಲ್ ಜೆ., ಶ್ರೀದೇವಿ ಅವರು ಪ್ರತಿಕ್ರಿಯೆ ನೀಡಿದರು. ಕಾರ್ಯಕ್ರಮದ ಸಂಚಾಲಕರಾದ ಚೌಡಪ್ಪ ಪಿ., ಅಂಬಿಕಾ, ಶಿಲ್ಪಾ ಹೆಚ್.ವಿ ಉಪಸ್ಥಿತರಿದ್ದರು. ವಿಭಾಗದ ಆಂತರಿಕ ಮತ್ತು ಬಾಹ್ಯ ಸಂಶೋಧನಾ ವಿದ್ಯಾರ್ಥಿಗಳು ಅಂತರ್ಜಾಲ ವೇದಿಕೆಯಲ್ಲಿ ಭಾಗವಹಿಸಿದ್ದರು.