ಭಾರತ ಹುಲಿಗಳ ಅತಿದೊಡ್ಡ ತಾಣ ಪ್ರಧಾನಿ ಮೋದಿ

ನವದೆಹಲಿ 29: ಹುಲಿ ಸಂರಕ್ಷಣೆಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸುಮಾರು 3000 ಹುಲಿಗಳೊಂದಿಗೆ ಭಾರತ ಹುಲಿಗಳ ಅತಿದೊಡ್ಡ ಮತ್ತು ಭದ್ರ ಆವಾಸ ಸ್ಥಾನವಾಗಿದೆ ಎಂದು ಹೇಳಿದ್ದಾರೆ.    

 ಅಂತಾರಾಷ್ಟ್ರೀಯ ವ್ಯಾಘ್ರ ದಿನದ ಅಂಗವಾಗಿ ಅಖಿಲ ಭಾರತ ಹುಲಿ ಗಣತಿ ಅಂದಾಜು 2018 ಬಿಡುಗಡೆ ಮಾಡಿ ಮಾತನಾಡಿದ ಅವರು, ಈಗಷ್ಟೇ ಬಿಡುಗಡೆಯಾದ ಹುಲಿ ಗಣತಿ ಭಾರತೀಯರಿಗೆ ಸಂತಸ ತಂದಿದೆ. ಸುಮಾರು 3000 ಹುಲಿಗಳೊಂದಿಗೆ ಭಾರತ ಹುಲಿಗಳ ಅತಿದೊಡ್ಡ ನೆಲೆಯಾಗಿದೆ ಎಂದರು. 

 ಒಂಭತ್ತು ವರ್ಷಗಳ ಹಿಂದೆ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಹುಲಿಗಳ ಸಂಖ್ಯೆಯನ್ನು 2022 ರ ವೇಳೆಗೆ ದ್ವಿಗುಣಗೊಳಿಸಲು ನಿರ್ಧರಿಸಲಾಗಿತ್ತು. 

  ಈ ಗುರಿಯನ್ನು ನಾಲ್ಕು ವರ್ಷಗಳ ಮೊದಲೇ ಸಾಧಿಸಲಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. 

 ಹುಲಿ ಸಂರಕ್ಷಣೆಗೆ ಪ್ರಯತ್ನಗಳನ್ನು ವಿಸ್ತರಿಸಬೇಕು ಎಂದು ಒತ್ತಿ ಹೇಳಿದ ಪ್ರಧಾನಿ, ಅಭಿವೃದ್ಧಿ ಮತ್ತು ಪರಿಸರದೊಂದಿಗೆ ನೇರ ನಂಟಿದೆ ಎಂದರು. ಆರ್ಥಿಕ ನೀತಿಗಳಲ್ಲಿ ಇಂತಹ ಪರಿಸರ ಸಂರಕ್ಷಣೆಗೂ ಅವಕಾಶ ನೀಡುವಂತೆ ಮಾರ್ಪಡಿಸಬೇಕಿದೆ ಎಂದು ಸಲಹೆ ನೀಡಿದರು.  ಭಾರತ ಆರ್ಥಿಕವಾಗಿ ಮಾತ್ರವಲ್ಲದೇ ಪರಿಸರಾತ್ಮಕವಾಗಿ ಸಮೃದ್ಧವಾಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದ ಪ್ರಧಾನಿ ಭಾರತದಲ್ಲಿ ಹೆಚ್ಚು ರಸ್ತೆಗಳಿರವಿ, ಶುದ್ಧ ನದಿ ಇರಲಿದೆ. ಹಾಗೆಯೇ ರೈಲು ಸಂಪರ್ಕ ಹಾಗೂ ಮರ ಗಿಡಗಳ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  

  ಇದೇ ಸಂದರ್ಭದಲ್ಲಿ ಅವರು " ಹುಲಿ ಸಂರಕ್ಷಣೆ ಪರಿಣಾಮಕಾರಿ ನಿರ್ವಹಣೆ ಮತ್ತು ಮೌಲ್ಯಮಾಪನ" ವರದಿ ಬಿಡುಗಡೆ ಮಾಡಿದರು.