ಸಂಸ್ಕೃತಿ ಕಾಪಾಡುವುದು ಎಲ್ಲರ ಹೊಣೆ: ಮುಲ್ಲಂಗಿ ಚಂದ್ರಶೇಖರ್ ಚೌದರಿ
ಬಳ್ಳಾರಿ 06: ಸಂಪ್ರದಾಯ ಮತ್ತು ಪರಂಪರೆಗಳನ್ನು ಇಂದಿನ ಪೀಳಿಗೆ ಅಳವಡಿಸಿಕೊಂಡು ಸಂಸ್ಕೃತಿ ಕಾಪಾಡಿಕೊಂಡು ಹೋಗುವುದು ಅಗತ್ಯವಾಗಿದೆ ಎಂದು ಆಂಧ್ರ ಕಳಾ ಸಮಿತಿಯ ಅಧ್ಯಕ್ಷ ಮುಲ್ಲಂಗಿ ಚಂದ್ರಶೇಖರ್ ಚೌದರಿ ತಿಳಿಸಿದರು.ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ 74ನೇ ವರ್ಷದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂತಹ ಸ್ಪರ್ಧೆಗಳಿಂದ ಮಕ್ಕಳು ಭಾರತೀಯ ಸನಾತನ ಪದ್ಧತಿಗಳನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ.
ಆಂಧ್ರ್ರದೇಶದಲ್ಲಿ ’ಮುಗ್ಗುಲು ಪೋಟಿ’ ಎಂದು ಕರೆಯುವ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮಗಳಿಂದ ಆಚರಿಸಲಾಗುತ್ತಿದೆ. ಈ ವೇಳೆ ಮನರಂಜನೆಗಾಗಿ ಕೋಳಿ, ಟಗರು, ಎತ್ತಿನ ಕಾಳಗ ನಡೆಯುತ್ತದೆ. ಹೆಣ್ಣು ಮಕ್ಕಳಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಸಜ್ಜೆ, ಜೋಳದ ರೊಟ್ಟಿಯೂಟ ಸವಿಯುವುದು ವಾಡಿಕೆ. ಕರ್ನಾಟಕದ ಗಡಿ ಭಾಗದಲ್ಲಿಯೂ ಕೂಡ ಹೆಣ್ಣುಮಕ್ಕಳು ರಂಗು ರಂಗಿನ ಚಿತ್ತಾರದ ರಂಗೋಲಿ ಚಿತ್ರಿಸುವ ಮೂಲಕ ಸಂಪ್ರದಾಯ ಊರ್ಜಿತಗೊಳಿಸಲಿ, ಹಬ್ಬಕ್ಕೆ ಕಳೆ ಕಟ್ಟಲಿ ಎನ್ನುವ ಸದಾಶಯದಿಂದ ಈ ಸ್ಪರ್ಧೆ ಆಯೋಜಿಸಿಕೊಂಡು ಬರುತ್ತಿದ್ದೇವೆ. ಹೆಣ್ಣು ಮಕ್ಕಳಿಗಾಗಿ ನಮ್ಮ ಸಮಿತಿಯು ಸ್ವಂತ ಖರ್ಚಿನಿಂದಲೇ ಆಯೋಜಿಸಿಕೊಂಡು ಬರುತ್ತಿದ್ದೇವೆ ಎಂದರು.ಬಳ್ಳಾರಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಲಿ ಸದಸ್ಯರಾದ ಎಂ.ರಾಜೇಶ್ವರಿ ಅವರು ಮಾತನಾಡಿ, ಆಂಧ್ರ ಕಲಾ ಸಮಿತಿಯವರು ಹೆಣ್ಣು ಮಕ್ಕಳಿಗಾಗಿ ಇಂತಹ ಸ್ಪರ್ಧೆಗಳನ್ನು ಏರಿ್ಡಸುತ್ತಿರುವುದು ಅಭಿನಂದನೀಯ. ವಿದ್ಯಾರ್ಥಿನಿಯರು ಕೇವಲ ಅಂಕಗಳನ್ನು ಗಳಿಸುವ ಪಠ್ಯದ ಜೊತೆಗೆ ಇಂತಹ ಸಾಂಸ್ಕೃತಿಕವಾದ ಪಠ್ಯತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಖುಷಿಯ ವಿಚಾರ. ಪಾಶ್ಚಾತ್ಯ ಸಂಸ್ಕೃತಿಯಿಂದ ಮುಕ್ತರಾಗಿ ಇಂದಿನ ಯುವತಿಯರು ಹಬ್ಬ-ಹರಿದಿನಗಳನ್ನು ಅರಿತುಕೊಳ್ಳಬೇಕು. ಕಳೆದ ಮೂರು ವರ್ಷಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಭಾಗವಹಿಸುತ್ತಿದ್ದಾರೆ. ಇಂದೂ ಕೂಡ ಬಿಸಿಲನ್ನು ಲೆಕ್ಕಿಸದೇ ಉತ್ಸಾಹದಿಂದ ಪಾಲ್ಗೊಂಡಿರುವುದು ಅವರಲ್ಲಿನ ಸ್ಪರ್ಧಾ ಮನೋಭಾವದ ಜೊತೆಗೆ ಸಂಸ್ಕೃತಿ ಉಳಿಸುವ ಉದ್ದೇಶ ಇದೆ ಎಂದರು.ಹಿರಿಯ ನಿವೃತ್ತ ನ್ಯಾಯಾಧೀಶರು ಟಿ.ಶೋಭಾದೇವಿ ಅವರು ಮಾತನಾಡಿ, ಇಂತಹ ಕಾರ್ಯಕ್ರಮದಲ್ಲಿ ಹೆಣ್ಣು ಮೈಕಳು ಆಸಕ್ತಿಯಿಂದ ಪಾಲ್ಗೊಂಡಿರುವುದು ಸಂತಸದ ವಿಚಾರ. ಸಂಸ್ಕೃತಿ, ಆಚಾರ, ವಿಚಾರಗಳನ್ನು ಅಳವಡಿಸಿಕೊಂಡು ನಮ್ಮ ಹಬ್ಬಗಳನ್ನು ವಿಜೃಂಭಿಸಬೇಕು. ಪಾಶ್ಚಾತ್ಯರು ನಮ್ಮ ಸಂಸ್ಕೃತಿಯನ್ನು ಅಳವಡಿಸಕೊಳ್ಳುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ನಾವು ಪೂರ್ವದ ಸಂಸ್ಕಾರಗಳನ್ನು ಉಳಿಸಿಕೊಳ್ಳಬೇಕು. ಚುಕ್ಕೆ ರಂಗೋಲಿ ಹಾಕುವುದು ಅಷ್ಟು ಸುಲಭದ ಕೆಲಸವಲ್ಲ. ಇಲ್ಲಿ ಪಾಲ್ಗೊಂಡಿರುವ ಎಲ್ಲ ಹೆಣ್ಣು ಮಕ್ಕಳು ಬಿಸಿಲು ಲೆಕ್ಕಿಸದೇ ಶ್ರದ್ದೆಯಿಂದ ರಂಗೋಲಿ ಬಿಡಿಸುವಲ್ಲಿ ತಲ್ಲೀನರಾಗಿದ್ದು ಕಂಡು ಹೆಮ್ಮೆ ಆಯಿತು ಎಂದರು.ರಂಗೋಲಿ ಸ್ಪರ್ಧೆಯ ನಿರ್ಣಾಯಕರಾದ ಸೌಮ್ಯ ಅವರು ಮಾತನಾಡಿ, ದೈನಂದಿನ ಚಟುವಟಿಕೆಗಳಲ್ಲಿ ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಬದಲಾವಣೆಗೆ ಎಳಸುತ್ತಾರೆ. ಇಂತಹ ಸ್ಪರ್ಧೆಗಳು ಹೆಣ್ಣು ಮಕ್ಕಳಿಗೆ ಪ್ರೇರಕವಾಗಿವೆ.
ಆಂಧ್ರ ಕಳಾ ಸಮಿತಿಯವರು ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ಮೂಡಿಸುತ್ತಿರುವುದು ಹೆಮ್ಮೆಯ ವಿಚಾರ. ನಾನೂ ಗೃಹಿಣಿಯಾಗಿ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಸಂಷೋಷ ಎನಿಸುತ್ತದೆ ಎಂದರು.ಶಾಲೆ, ಕಾಲೇಜು ಸೇರಿದಂತೆ ಅನೇಕ ಮಹಿಳೆಯರು ಮತ್ತು ಗೃಹಿಣಿಯರು ಈ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಹೈಸ್ಕೂಲ್ ವಿಭಾಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಅರ್ಚನಾ ಪ್ರಥಮ, ಸರ್ಕಾರಿ ಬಾಲಕಿಯರ ಪೌಢಶಾಲೆಯ ತ್ರಿವೇಣಿ ದ್ವಿತೀಯ, ಬಾಲಭಾರತಿ ಶಾಲೆಯ ನವ್ಯ ತೃತೀಯ ಸ್ಥಾನ ಪಡೆದರು.ಮಹಿಳೆಯರ ವಿಭಾಗದಲ್ಲಿ ಕವಿತಾ ಪ್ರಥಮ, ಪರಿಮಳ ದ್ವಿತೀಯ ಮತ್ತು ನಿರ್ಮಲಾ ತೃತೀಯ ಸ್ಥಾನ ಪಡೆದರು.
ಕಾಲೇಜು ವಿಭಾಗದಲ್ಲಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಕಾಲೇಜಿನ ಸುಜಾತಾ ಪ್ರಥಮ, ಮೇಧಾ ಕಾಲೇಜಿನ ಅಂಬಿಕಾ ದ್ವಿತೀಯ ಸ್ಥಾನ ಪಡೆದಿದ್ದು ಎಲ್ಲರಿಗೂ ನಗದು ಹಣ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಆಂಧ್ರ ಕಲಾ ಸಮಿತಿಯ ಪದಾಧಿಕಾರಿಗಳಾದ ಎಂ.ರಾಮಾಂಜಿನೇಯ, ಶಾಮಸುಂದರ್, ಬೀಮನೇನಿ ಭಾಸ್ಕರ್. ಭೀಮನೇನಿ ಪ್ರಸಾದ್, ನರೇಂದ್ರ..ರಾಜಶೇಖರ್. ಜಿ.ವೆಂಕಟೇಶುಲು, ಜಿ.ಪ್ರಭಾಕರ್, ನಾರಾಯಣ ರೆಡ್ಡಿ, ವೆಂಕಮಾಂಬ. ಕಲಾವಿದರಾದ ನೇತಿ ರಘುರಾಮ್, ರಾಜಶೇಖರ್, ಹರಿಕುಮಾರ್, ಇನ್ನಿತರರು ಇದ್ದರು. ಶ್ರೀನಿವಾಸ ರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು.