ಸಮುದಾಯಗಳ ಸಂಸ್ಕೃತಿ ಅಧ್ಯಯನದಲ್ಲಿ ನುಡಿಯ ಸಾಧ್ಯತೆಗಳು

Possibilities of language in the study of the culture of communities

ಸಮುದಾಯಗಳ ಸಂಸ್ಕೃತಿ ಅಧ್ಯಯನದಲ್ಲಿ ನುಡಿಯ ಸಾಧ್ಯತೆಗಳು 

ಹಂಪಿ 12: ‘ಮಾನವಶಾಸ್ತ್ರದಲ್ಲಿ ಸಂಶೋಧನೆ ಎಂದರೆ ಕಳೆದುಹೋದ ಕೊಂಡಿಗಳನ್ನು ಹುಡುಕಿ ಜೋಡಿಸುವುದು’ ಎಂದು ಮಾನವ ಕುಲಶಾಸ್ತ್ರಜ್ಞರು ಮತ್ತು ಅನುವಾದಕರಾದ ಆರಡಿ ಮಲ್ಲಯ್ಯ ಕಟ್ಟೇರ ಪಿ. ಅವರು ಹೇಳಿದರು. 

ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಡಿಸೆಂಬರ್ 12 ಗುರುವಾರ ಹಮ್ಮಿಕೊಂಡಿದ್ದ 275ನೇ ವಾರದ ಮಾತು ವಿಶೇಷ ಉಪನ್ಯಾಸ ಆನ್‌ಲೈನ್ ಕಾರ್ಯಕ್ರಮದಲ್ಲಿ ‘ಸಮುದಾಯಗಳ ಸಂಸ್ಕೃತಿ ಅಧ್ಯಯನದಲ್ಲಿ ನುಡಿಯ ಸಾಧ್ಯತೆಗಳು’ ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.  

ಭಾಷೆ ಮತ್ತು ಸಂಸ್ಕೃತಿಗಳು ಅವಿಭಾಜ್ಯ ಅಂಗಗಳು. ಮಲಿನೋವಸ್ಕಿ ಅವರು ಒಂದು ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಜನ ಅಥವಾ ಒಂದು ಜನಸಮುದಾಯ ತನ್ನ ಆಹಾರವನ್ನು ಹುಡುಕಿಕೊಂಡು ತನ್ನ ಬದುಕನ್ನು ಕಟ್ಟಿಕೊಳ್ಳಲು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಮೈಗ್ರೇಟ್ ಆಗುತ್ತಾ ಹೋಗುತ್ತೋ ಅಲ್ಲೆಲ್ಲಾ ತನ್ನ ಸಂಸ್ಕೃತಿಯನ್ನು ಮತ್ತು ನುಡಿಯನ್ನು ರೂಪಿಸಿಕೊಳ್ಳತ್ತಾ ಹಿಂದಿನ ನುಡಿಯ ಜೊತೆಗೆ ಮುಂದಿನ ನುಡಿಯನ್ನು ಸೇರಿಸುತ್ತಾ ಹೋಗುತ್ತದೆ ಎಂದಿದ್ದಾರೆ.  

ಹಾಗಾಗಿ ನಾವು ಸಂಸ್ಕೃತಿ ಅಧ್ಯಯನದಲ್ಲಿ ನುಡಿಯನ್ನು ಕುರಿತು ಮಾತನಾಡುವಾಗ ಭೂಗೋಳಶಾಸ್ತ್ರ ಮತ್ತು ಪುರಾತತ್ವ ಆಧಾರಗಳು ಬಹಳ ಮುಖ್ಯವಾಗಿ ಬೇಕಾಗುತ್ತವೆ. ಭಾಷೆ ಮತ್ತು ಸಂಸ್ಕೃತಿಯನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಎರಡು ಸಾಧ್ಯತೆಗಳಿರುತ್ತವೆ. ಒಂದು ಭಾಷೆಯನ್ನೇ ಪ್ರಧಾನ ಆಕರವನ್ನಾಗಿಸಿಕೊಂಡು ಸಂಸ್ಕೃತಿಯನ್ನು ಅಧ್ಯಯನ ಮಾಡುವುದು. ಉದಾಹರಣೆಗೆ ಲೆವಿಸ್ಟ್ರಾಸ್, ಮಲಿನೋವಸ್ಕಿ, ಕರ್ನಾಟಕದ ಶಂಭಾ ಜೋಶಿ ಮತ್ತು ಭಾಷಾಶಾಸ್ತ್ರಜ್ಞರ ಅಧ್ಯಯನಗಳು. ಎರಡನೆಯದು ಭಾಷೆಯನ್ನು ಒಂದು ಉಪ ಅಂಗವನ್ನಾಗಿಟ್ಟುಕೊಂಡು ಸಂಸ್ಕೃತಿಯನ್ನು ಅಧ್ಯಯನ ಮಾಡುವುದು. ಉದಾಹರಣೆಗೆ ಕರ್ನಾಟಕದ ಬಹುತೇಕ ಭಾಷಾಧ್ಯಯನಗಳು ಮತ್ತು ಬರಗೂರ ರಾಮಚಂದ್ರ​‍್ಪ ಅವರ ಸಂಪಾದಕತ್ವದಲ್ಲಿ ಬಂದ ಉಪಸಂಸ್ಕೃತಿ ಮಾಲೆ ಇತ್ಯಾದಿ. ಸಾಂಸ್ಕೃತಿಕ ಪರಿಭಾಷೆಗೆ ಎರೆಡು ಆಯಾಮಗಳಿವೆ.  

ಒಂದು ಬದುಕಿನ ಭಾಷೆ(ಬಾಯಿ ನೆಲೆಯ ಭಾಷೆ), ಎರಡನೆಯದು ಆಚರಣಾತ್ಮಕ ಭಾಷೆ (ಕಣ್ಣು ಮತ್ತು ಕೈ). ಇವೆರಡೂ ನೆಲೆಯಲ್ಲಿ ಸಂಸ್ಕೃತಿಯನ್ನು ಅಧ್ಯಯನ ಮಾಡುವಾಗ ಯಾವುದೇ ಒಂದು ಸಾಂಸ್ಕೃತಿಕ ಲೋಕ ದೃಷ್ಠಿಯಲ್ಲಿ ಭಾಷಿಕ ಸಂಕೇತಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬಹುದು ಎಂಬ ಪ್ರಶ್ನೆಗೆ ಉತ್ತರ ಕ್ಷೇತ್ರ ಅಧ್ಯಯನ. ಅಂದರೆ ಸಮುದಾಯದೆಡೆಗೆ ಹೋಗಬೇಕಾಗುತ್ತದೆ. ಇಲ್ಲಿ ಸಮುದಾಯದ ಸಂಕಥನಗಳ ಮೂಲಕ ಅವರ ನುಡಿಜಗತ್ತು ಸಂಕೇತಗಳು ಅಥವಾ ಶಬ್ದಪ್ರತಿಮೆಗಳಾಗಿ ನಮಗೆ ಸಿಗುತ್ತದೆ. ಅದನ್ನು ಅರ್ಥಮಾಡಿಕೊಳ್ಳುವುದು ಸಂಶೋಧಕರ ಮುಂದಿರುವ ದೊಡ್ಡ ಸವಾಲು. ಇಂತಹ ಸವಾಲನ್ನು ಕರ್ನಾಟಕದಲ್ಲಿ ಮೊದಲು ಎದುರುಗೊಂಡವರು ಶಂಭಾ ಜೋಶಿಯವರು ಎಂದರು.  

ಸಂಸ್ಕೃತಿ ಅಧ್ಯಯನದಲ್ಲಿ ಕ್ಷೇತ್ರಾಧ್ಯಯನ, ಹಿರಿಯ ವಿದ್ವಾಂಸರ ಸಾಂಸ್ಕೃತಿಕ ಅಧ್ಯಯನದಲ್ಲಿ ದಾಖಲಾಗಿರುವ ಮತ್ತು ಸ್ವತಃ ಸಮುದಾಯವೇ ಕಟ್ಟಿಕೊಂಡ ಸಂಕಥನಗಳು ಈ ಮೂರನ್ನೂ ಕುರಿತು ನೋಡುವಾಗ ನಮಗೆ ಕೆಲವು ವಿಶೇಷವಾಗಿ ಕಾಣುವ ಪದಗಳು ಇಡೀ ಸಮುದಾಯದ ಸಂಸ್ಕೃತಿಯನ್ನು ಹೇಗೆ ತೋರಿಸುತ್ತವೆ ಎಂಬುದನ್ನು ಪಶುಪಾಲನ ಸಮುದಾಯದಲ್ಲಿನ ಹಟ್ಟಿ, ದೊಡ್ಡಿ, ಎಲಚಿ, ಗಾವುಸಿಗಿಯುವುದು ಇತ್ಯಾದಿ ಪದಗಳನ್ನು ಉದಾಹರಣೆ ಸಹಿತ ಮಂಡಿಸಿದರು.  

ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಪಿ. ಮಹಾದೇವಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ದಿನೇಶ್ ಎಸ್‌. ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀದೇವಿ ಅವರು ಉಪನ್ಯಾಸಕರನ್ನು ಪರಿಚಯಿಸಿದರು. ಸಂಧ್ಯಾ ಅವರು ಪ್ರಾರ್ಥಿಸಿದರು. ಅಂಬಿಕಾ ಅವರು ವಂದಿಸಿದರು. ಚೆಂದಸ್ವಾಮಿ ಅವರು ನಿರೂಪಿಸದರು. ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಅಶೋಕಕುಮಾರ ರಂಜೇರೆಯವರು, ಕಾರ್ಯಕ್ರಮದ ಸಂಚಾಲಕರಾದ ಚೌಡಪ್ಪ ಪಿ., ಅಂಬಿಕಾ, ಶಿಲ್ಪಾ ಉಪಸ್ಥಿತರಿದ್ದರು. ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿಭಾಗದ ಆಂತರಿಕ ಮತ್ತು ಬಾಹ್ಯ ಸಂಶೋಧನಾರ್ಥಿಗಳು ಅಂತರ್ಜಾಲ ವೇದಿಕೆಯಲ್ಲಿ ಭಾಗವಹಿಸಿದ್ದರು.