ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿ: ಪ್ರಯಾಣಿಕರಿಗೆ ನರಕಯಾತನೆ
ಯಮಕನಮರಡಿ 18: ಸಮೀಪದ ರಾಷ್ಟ್ರೀಯ ಹೆದ್ದಾರಿ ನಂ 4 ಅಗಲೀಕರಣ ಪ್ರಾರಂಭವಾಗಿ ಸುಮಾರು 1 ವರ್ಷ ಗತಿಸಿದರೂ ಕಾಮಗಾರಿ ಇನ್ನು ಮುಗಿಯದೆ ಇರುವುದರಿಂದ ಪ್ರಯಾಣಿಕರು, ಸಾರ್ವಜನಿಕರಿಗೆ ನರಕ ಯಾತನೆ ಅನುಭವಿಸುವಂತಾಗಿದೆ.
ಕಳಪೆ ಕಾಮಗಾರಿಯಿಂದಾಗಿ ಪಕ್ಕದ ಚರಂಡಿಗಳು ಕಳಚಿ ಬೀಳುತ್ತಲಿವೆ ಅವುಗಳ ಕಟ್ಟಡಕ್ಕೆ ಕೇವಲ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಿದ್ದು ಅವುಗಳ ಮೇಲಿನ ಛಾವಣಿಗಳು ಕುಸಿದು ಬೀಳುತ್ತಲಿವೆ. ಬೆಳಗಾವಿಯಿಂದ ನಿಪ್ಪಾಣಿಯ ಕರ್ನಾಟಕದ ಗಡಿಯವರೆಗೆ ಒಂದು ಕಾಮಗಾರಿ ಪೂರ್ತಿಯಾಗಿರುವುದಿಲ್ಲ. ಹಿಗಾಗಿ ಪ್ರಯಾಣಿಕರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 4 ದಾದಬಾನಹಟ್ಟಿಯ ಹತ್ತಿರ ಚರಂಡಿಯ ನೀರು ಹಾಗೂ ಕೊಳಚೆ ರಸ್ತೆಯ ಮೇಲೆ ಬರುತ್ತಿರುವುದರಿಂದ ಬಹಳಷ್ಟು ಜನ ಆ ನೀರಿನಲ್ಲಿ ದ್ವಿಚಕ್ರ ವಾಹನ ಚಾಲಕರು ನಿಯಂತ್ರಣ ತಪ್ಪಿ ಅದೇ ಗಲೀಜು ನೀರಿನಲ್ಲಿ ಸ್ನಾನ ಮಾಡುವ ಪರಿಸ್ಥಿತಿ ಬಂದಿದೆ. ಇಲ್ಲಿ ರಸ್ತೆ ನಿಯಂತ್ರಣದ ಬಗ್ಗೆ ಯಾವುದೇ ತರಹದ ವ್ಯವಸ್ಥೆ ಇರುವುದಿಲ್ಲ ಪೋಲಿಸರಂತು ಕಾಣುವುದೇ ಇಲ್ಲ ಹಾಗೂ ಗುತ್ತಿಗೆದಾರರಾದ ಅಶೋಕ ಕಂಪನಿಯವರು ಕೂಡ ಯಾವುದೇ ತರಹದ ರಸ್ತೆ ನಿಯಂತ್ರಣದ ಬಗ್ಗೆ ಈ ಸ್ಥಳಗಳಲ್ಲಿ ನೇಮಕ ಮಾಡದೇ ಇರುವುದರಿಂದ ಪ್ರಯಾಣಿಕರು ರಸ್ತೆ ದಾಟುವಾಗ ತಮ್ಮ ಜಿವವನ್ನು ಕಾಪಾಡಿಕೊಂಡು ಹೋಗುವುದೇ ದೊಡ್ಡ ಸಾಧನೆಯಾಗಿದೆ. ಯಾವುದೇ ಸ್ಥಳದಲ್ಲಿ ಕಾಮಗಾರಿ ಪೂರ್ತಿಯಾಗಿರುವುದು ಕಂಡು ಬಂದಿಲ್ಲ. ಹೆದ್ದಾರಿ ಪಕ್ಕದ ಕಾಲುವೆಯ ನೀರು ಎಲ್ಲಿ ತಲುಪುತ್ತದೆ ಎಂದು ಯಾರಿಗೂ ತಿಳಿದು ಬಂದಿಲ್ಲ. ಬೇರೆ ಊರಿಗೆ ಹೋಗಲು ನಿಲ್ಲುವ ಪ್ರಯಾಣಿಕರಿಗೆ ತಂಗುದಾನವು ಇಲ್ಲ. ಹಾಗಾಗಿ ಪ್ರಯಾಣಿಕರು ಬಸ್ಸಿಗಾಗಿ ಹಾಗೂ ಇತರೇ ವಾಹನಗಳಿಗಾಗಿ ಉರಿಬಿಸಿಲಿನಲ್ಲಿ ರಸ್ತೆ ಮೇಲೆಯೆ ನಿಂತು ವಾಹನಗಳಿಗೆ ದಾರಿ ಕಾಯಬೇಕಾಗಿದೆ. ಈ ಯಾತನೇ ನಿವಾರಣೆ ಯಾವಾಗ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.