‘ಸ್ವಾತಂತ್ರ್ಯದ ಓಟ’ ನಾಟಕಕ್ಕೆ ಭಾರೀ ಮೆಚ್ಚುಗೆ: ಜುಲೈ 5ರಂದು ಪ್ರದರ್ಶನಕ್ಕೆ ಸಿದ್ಧತೆ

‘ಸ್ವಾತಂತ್ರ್ಯದ ಓಟ’ ನಾಟಕಕ್ಕೆ ಭಾರೀ ಮೆಚ್ಚುಗೆ: ಜುಲೈ 5ರಂದು ಪ್ರದರ್ಶನಕ್ಕೆ ಸಿದ್ಧತೆ  Play ‘Swatantryada Ota’ Wins Great Acclaim: Preparations Underway for July 5 Performance

ಧಾರವಾಡ 02:  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಕುಂಞಿ ಅವರ ಕಾದಂಬರಿಯನ್ನು ಆಧರಿಸಿ ರಚಿಸಲಾದ ‘ಸ್ವಾತಂತ್ರ್ಯದ ಓಟ’ ನಾಟಕವು ಜುಲೈ 5ರಂದು ಸಂಜೆ 5.30ಕ್ಕೆ ಕನ್ನಡ ವಿದ್ಯಾವರ್ಧಕ ಸಂಘದ ನಾಡೋಜ ಡಾ. ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ರಂಗಾಯಣ ನಿರ್ದೇಶಕ ರಕೀರ್ ನದಾಫ್ ತಿಳಿಸಿದ್ದಾರೆ.  

ನಗರದ ರಂಗಾಯಣ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಟಕವು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳಗಿಸುವ ಪ್ರಯತ್ನವಾಗಿದೆ ಎಂದು ಹೇಳಿದರು.  

‘ಸ್ವಾತಂತ್ರ್ಯದ ಓಟ’ ನಾಟಕವು ಜಾತಿ, ಧರ್ಮ ಮತ್ತು ಸಾಮಾಜಿಕ ಅಸಮಾನತೆಗಳನ್ನು ಮೀರಿ ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರುತ್ತದೆ. ಭಾರತದ ವಿವಿಧ ನಗರಗಳ ಜೀವನಶೈಲಿ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಒಳಗೊಂಡ ಈ ಕಥೆ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ ಎಂದು ಅವರು ತಿಳಿಸಿದರು.  

ನಾಟಕದ ಪ್ರದರ್ಶನಕ್ಕೆ ಟಿಕೆಟ್ ದರವನ್ನು ರೂ.100 ನಿಗದಿಪಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಪಾಕಿಸ್ತಾನದಿಂದ ಭಾರತಕ್ಕೆ ಬರುವ ಯುವಕನ ಜೀವನಗಾಥೆಯ ಮೂಲಕ ಮಾನವೀಯ ಸಂಬಂಧಗಳ ಮಹತ್ವವನ್ನು ಈ ನಾಟಕ ಚಿತ್ರಿಸುತ್ತದೆ.  ಪತ್ರಿಕಾಗೋಷ್ಠಿಯಲ್ಲಿ ರಂಗಾಯಣ ಆಡಳಿತಾಧಿಕಾರಿ ಸೇರಿದಂತೆ ಹಲವು ಸಿಬ್ಬಂದಿ ಉಪಸ್ಥಿತರಿದ್ದರು.