ಹೊಸದಿಲ್ಲಿ : ಯಾವುದೇ ತೆರಿಗೆ ಮತ್ತು ಡೀಲರ್ ಕಮಿಷನ್ ಸೇರದಿದ್ದಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಲೀಟರ್ ಬೆಲೆ ಎಷ್ಟಿರುತ್ತದೆ ಗೊತ್ತೇ? ಅನುಕ್ರಮವಾಗಿ ಕೇವಲ 34.04 ರೂ. ಮತ್ತು 38.67 ರೂ.
ಇಷ್ಟೊಂದು ಅಗ್ಗದ ಪೆಟ್ರೋಲ್ ಮತ್ತು ಡೀಸೆಲ್ ದರಗಳಿಗೆ ಸೇರುವ ತೆರಿಗೆ ಮತ್ತು ಡೀಲರ್ ಕಮಿಷನ್ ಪ್ರಮಾಣ ಅನುಕ್ರಮವಾಗಿ ಶೇ.96.9 ಮತ್ತು ಶೇ.60.3 ಆಗಿರುತ್ತದೆ ಎಂಬ ವಿಷಯವನ್ನು ಲೋಕಸಭೆಯಲ್ಲಿ ಇಂದು ಶುಕ್ರವಾರ ಸಹಾಯಕ ಹಣಕಾಸು ಸಚಿವ ಶಿವ ಪ್ರತಾಪ್ ಶುಕ್ಲಾ ಲಿಖೀತವಾಗಿ ತಿಳಿಸಿದರು.
ಅಂತೆಯೇ ಡಿ.19ರಂದು ದಿಲ್ಲಿಯಲ್ಲಿ ಪೆಟ್ರೋಲ್ ದರ ಲೀಟರಿಗೆ 70.63 ರೂ. ಇತ್ತು. ಇದರಲ್ಲಿ 17.98 ರೂ. ಕೇಂದ್ರ ಅಬಕಾರಿ ಸುಂಕ, 15.02 ರೂ. ರಾಜ್ಯ ವ್ಯಾಟ್ ಮತ್ತು 3.59 ರೂ. ಡೀಲರ್ ಕಮಿಷನ್ ಸೇರಿಕೊಂಡಿದೆ ಎಂದು ಶುಕ್ಲಾ ತಿಳಿಸಿದರು.
ಡೀಸೆಲ್ ಲೀಟರ್ ದರ 64.54ರಲ್ಲಿ 13.83 ರೂ. ಕೇಂದ್ರ ಅಬಕಾರಿ ಸುಂಕ, 9.51 ರೂ. ರಾಜ್ಯ ವ್ಯಾಟ್ ಮತ್ತು 2.53 ರೂ. ಡೀಲರ್ ಕಮಿಷನ್ ಸೇರಿಕೊಂಡಿದೆ ಎಂದವರು ತಿಳಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ದರಗಳು ದಿನ ನಿತ್ಯ ಮಾರುಕಟ್ಟೆಯ ಏರುಪೇರಿಗೆ ಅನುಗುಣವಾಗಿ ಬದಲಾಗುತ್ತವೆ. ಇವುಗಳ ದರ ರಾಜ್ಯದಿಂದ ರಾಜ್ಯಕ್ಕೆ ಬದಲಾಗಲು ಆಯಾ ರಾಜ್ಯಗಳಲ್ಲಿನ ವಿವಿಧ ಪ್ರಮಾಣದ ವ್ಯಾಟ್ ಕಾರಣವಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರಕ್ಕೆ ಪೆಟ್ರೋಲ್ ಮಾರಾಟದಿಂದ 73,516.80 ಕೋಟಿ ರೂ. ಅಬಕಾರಿ ಸುಂಕ ಸಿಕ್ಕಿದೆ; ಡೀಸೆಲ್ ಮಾರಾಟದಿಂದ 1.5 ಲಕ್ಷ ಕೋಟಿ ರೂ. ಸಿಕ್ಕಿದೆ ಎಂದು ಸಚಿವರು ಹೇಳಿದರು.
ಹಾಲಿ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಕೇಂದ್ರ ಸರಕಾರಕ್ಕೆ ಪೆಟ್ರೋಲ್ ಮಾರಾಟದಿಂದ 25,318.10 ಕೋಟಿ ರೂ. ಮತ್ತು ಡೀಸೆಲ್ ಮಾರಾಟದಿಂದ 46,548.80 ಕೋಟಿ ರೂ. ಅಬಕಾರಿ ಸುಂಕ ಸಂಗ್ರಹವಾಗಿದೆ ಎಂದು ಸಚಿವರು
ಹೇಳಿದರು.