ಶಿಶುವಿಗೆ ಅಗತ್ಯ ಲಸಿಕೆ ಒದಗಿಸಲು ಪಾಲಕರ ಮನವೊಲಿಸಿ: ಡಾ.ಆರ್.ಎಸ್.ಶ್ರೀಧರ
ಬಳ್ಳಾರಿ 21: ನವಜಾತ ಶಿಶುವಿಗೆ 12 ಮಾರಕ ರೋಗಗಳ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಯಸ್ಸಿಗನುಸಾರವಾಗಿ ನೀಡುವ ಲಸಿಕೆಗಳನ್ನು ತಪ್ಪದೇ ಕೊಡಿಸಲು ಪಾಲಕರ ಮನವೊಲಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಕ್ಷಣಾ ವೈದ್ಯಾಧಿಕಾರಿ ಡಾ.ಆರ್.ಎಸ್ ಶ್ರೀಧರ ಅವರು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಬಳ್ಳಾರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಮತ್ತು ಕ್ಷೇತ್ರ ಸಿಬ್ಬಂದಿಯವರಿಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಅನುಷ್ಟಾನ ಕುರಿತು ಶನಿವಾರ ಏರಿ್ಡಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಮಗುವಿಗೆ ಬಾಲ್ಯಾವಧಿಯಲ್ಲಿ ಕಾಡುವ ಮಾರಕ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಬೇಕು ಎಂದರು. ಮುಖ್ಯವಾಗಿ 12 ಮಾರಕ ರೋಗಗಳು ಮತ್ತು ಅವುಗಳ ವಿರುದ್ದ ನೀಡುವ ಲಸಿಕೆಗಳನ್ನು ವಯಸ್ಸಿಗನುಸಾರವಾಗಿ ಪೋಲಿಯೋ ರೋಗಕ್ಕೆ ಪೋಲಿಯೋ ದ್ರಾವಣ, ಬಾಲಕ್ಷಯಕ್ಕೆ ಬಿಸಿಜಿ ಲಸಿಕೆ, ಕಾಮಾಲೆ ರೋಗಕ್ಕೆ ಹೆಪಟೈಟಿಸ್ ಚುಚ್ಚುಮದ್ದು, ಗಂಟಲು ಮಾರಿ, ನಾಯಿಕೆಮ್ಮು ಧನುರ್ವಾಯು ರೋಟ ವೈರಸ್, ಹೆಚ್ ಇನ್ಪ್ಲ್ಯುಯೆಂಜಾ, ಕಾಮಾಲೆಗಾಗಿ ಪೆಂಟಾವೈಲೆಂಟ್ ಲಸಿಕೆ, ರೋಟಾವೈರಸ್ ಅತಿಸಾರಭೇದಿಗೆ ನಿಮೋಕಾಕಲ್ ಲಸಿಕೆ, ಮೆದುಳು ಜ್ವರ ರೋಗಕ್ಕೆ ಜಾಪನೀಸ್ ಎನ್ಸ್ಪಲಿಟಿಸ್ ಲಸಿಕೆ, ದಡಾರ ರೂಬೇಲ್ಲಾ ರೋಗಕ್ಕೆ ಮಿಸಲ್ಸ್ ರೂಬೆಲ್ಲಾ ಲಸಿಕೆ ಹಾಗೂ ಸಂಜೆಯ ಹೊತ್ತು ಕಂಡುಬರುವ ಇರುಳುಗಣ್ಣು ರೋಗಕ್ಕೆ ವಿಟಾಮಿನ್-ಎ ಅನ್ನಾಂಗ ದ್ರಾವಣ ನೀಡಲಾಗುತ್ತದೆ. ಇವೆಲ್ಲವುಗಳನ್ನು ಮಗುವಿನ ಒಂದು ವರ್ಷದೊಳಗೆ ಹಾಕಲು ತಿಳಿಸಬೇಕು ಎಂದು ಅವರು ಸೂಚಿಸಿದರು.
ಲಸಿಕೆಗಳನ್ನು ಪ್ರತಿ ಅರೋಗ್ಯ ಕೇಂದ್ರಗಳಲ್ಲಿ ಹಾಗೂ ಗ್ರಾಮ ವಾರ್ಡ್ಗಳಲ್ಲಿ ಪ್ರತಿ ಗುರುವಾರ ಹಾಕುವ ಕುರಿತು ಹೆಚ್ಚು ಜಾಗೃತಿ ನೀಡುವಂತೆ ತಿಳಿಸಿದರು. ಜಿಲ್ಲಾ ಆರಿ್ಸ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಲಸಿಕೆ ನೀಡುವಲ್ಲಿ ಸಾರ್ವಜನಿಕರ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಕ್ರೂಢೀಕರಿಸಿ ತಪ್ಪು ನಂಬಿಕೆಗಳ ಕುರಿತು ಜಾಗೃತಿ ನೀಡಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು. ಕೆಲವು ರೋಗಗಳಿಗೆ ಅಂದರೆ ಪೋಲಿಯೋ, ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ದಡಾರ-ರೂಬೆಲ್ಲಾ ಮೆದುಳು ಜ್ವರಕ್ಕೆ 16 ರಿಂದ 23 ತಿಂಗಳು ಒಳಗೆ ಹೆಚ್ಚುವರಿಯಾಗಿ ಬೂಸ್ಟರ್ ಡೋಸ್ ರೂಪದಲ್ಲಿ ನೀಡಲಾಗುತ್ತಿದೆ ಎಂದರು.
5 ರಿಂದ 6 ವರ್ಷದಲ್ಲಿ ಪುನಃ ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ರೋಗಿಗಳಿಗೆ ಎರಡನೇಯ ಬಾರಿ ಬೂಸ್ಟರ್ ಡೋಸ್ ನೀಡಲಾಗುವುದು. ಈ ಹಿನ್ನಲೆಯಲ್ಲಿ ಗಾಳಿಸುದ್ದಿ ನಂಬಿ ಲಸಿಕೆ ಬೇಡವೆನ್ನುವವರಿಗೆ ವ್ಯಾಪಕವಾಗಿ ಮನೆ ಭೇಟಿ ಗುಂಪು ಸಭೆ, ಸಮುದಾಯ ಮುಖಂಡರ ಜೊತೆಗೂಡಿ ಮಾಹಿತಿ ಒದಗಿಸಿ ಅವರಲ್ಲಿಯ ತಪ್ಪು ನಂಬಿಕೆಗಳನ್ನು ಹೋಗಲಾಡಿಸಿ ಎಲ್ಲಾ ಲಸಿಕೆಗಳನ್ನು ಹಾಕಿಸುವಂತೆ ಅವರು ಕೋರಿದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ ಅವರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಡಾ.ಸುರೇಖ, ಡಾ.ಸೌಜನ್ಯ, ಡಾ.ಕರುಣಾ, ಡಾ.ಶಗುಪ್ತಾ, ಡಾ.ಯಾಸ್ಮಿನ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ತಾಲ್ಲೂಕ ಕಾರ್ಯಕ್ರಮ ವ್ಯವಸ್ಥಾಪಕ ಮೇಘರಾಜ್, ತಾಲ್ಲೂಕ ಆಶಾ ಮೇಲ್ವಿಚಾರಕರಾದ ನೇತ್ರಾ ಸೇರಿದಂತೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನೀರೀಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.