ಜಿಲ್ಲೆಗೆ ಸಿಗಬೇಕಾಗಿರುವ 371 ಜೆ ಕಲ್ಯಾಣ ಕರ್ನಾಟಕ ಮೀಸಲಾತಿ ಕುರಿತು ಜನಪ್ರತಿನಿಧಿಗಳು ಅಧಿವೇಶನದಲ್ಲಿ ಧ್ವನಿ ಎತ್ತಲು ಆಗ್ರಹ

People's representatives are requested to raise their voice in the session regarding the 371 J Kaly

ಜಿಲ್ಲೆಗೆ ಸಿಗಬೇಕಾಗಿರುವ 371 ಜೆ ಕಲ್ಯಾಣ ಕರ್ನಾಟಕ ಮೀಸಲಾತಿ ಕುರಿತು ಜನಪ್ರತಿನಿಧಿಗಳು ಅಧಿವೇಶನದಲ್ಲಿ ಧ್ವನಿ ಎತ್ತಲು ಆಗ್ರಹ 

ವಿಜಯಪುರ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರಿದಂತೆ ವಿವಿಧ ರಾಜಕೀಯ ಮುಖಂಡರುಗಳು ವಿಜಯಪುರ ಜಿಲ್ಲೆಯ ಯುವ ಜನರ ಮತ ಪಡೆಯುವಗೋಸ್ಕರ ವಿಜಯಪುರ ಜಿಲ್ಲೆಗೆ ರಾಜಕೀಯ ಹಿತಾಸಕ್ತಿಗಾಗಿ ಈ ಹಿಂದೆ ತಪ್ಪಿ ಹೋಗಿರುವ 371 ಜೆ ಕಲ್ಯಾಣ ಕರ್ನಾಟಕ ಮೀಸಲಾತಿಯನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. ಚುನಾವಣೆ ಮುಗಿದ ನಂತರ ಯಾವೊಬ್ಬ ಜನಪ್ರತಿನಿಧಿಗಳು ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಶೈಕ್ಷಣಿಕ ಹಾಗೂ ಓದ್ಯೋಗಿಕ ಮೀಸಲಾತಿಯಾಗಿರುವ 371ಜೆ ಬಗ್ಗೆ ಮಾತನಾಡದೇ ಜಿಲ್ಲೆಯ ಯುವ ಜನತೆಗೆ ಜನಪ್ರತಿನಿಧಿಗಳು ಅನ್ಯಾಯ ಎಸಗುತ್ತಿರುವುದು ಖಂಡನೀಯವಾದುದು ಕೂಡಲೇ ಬೆಳಗಾವಿಯಲ್ಲಿ ಜರುಗುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾಗಿರುವ 371ಜೆ ಮೀಸಲಾತಿ ಬಗ್ಗೆ ಪಕ್ಷಾತೀತವಾಗಿ ಧ್ವನಿ ಎತ್ತಿ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಲು ಮುಂದಾಗಬೇಕೆಂದು ಕರ್ನಾಟಕ ರಾಜ್ಯ ಪದವೀಧರ ಒಕ್ಕೂಟದ ಅಧ್ಯಕ್ಷ ಲಾಯಪ್ಪ ಇಂಗಳೆ ಹಾಗೂ ಕಾರ್ಯಾಧ್ಯಕ್ಷ ಕಲ್ಲಪ್ಪ ಶಿವಶರಣ ಅವರು ಜಂಟಿಯಾಗಿ ಒತ್ತಾಯಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ವಿಜಯಪುರ ಜಿಲ್ಲೆಯು ನಂಜುಂಡಪ್ಪ ವರದಿಯ ಪ್ರಕಾರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಜಿಲ್ಲೆಯಾಗಿದೆ. ಈ ಹಿಂದೆ 1724 ವರೆಗೆ ಅಖಂಡ ವಿಜಯಪುರ ಜಿಲ್ಲೆ ಹೈದ್ರಾಬಾದ ನಿಜಾಮನ ಆಡಳಿತದಲ್ಲಿತ್ತು ಎಂಬುದು ಸರ್ಕಾರದ ಗೆಜಿಟಿಯರ್‌ನಲ್ಲಿ ದಾಖಲಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಜಿಲ್ಲೆಯ ಮಗ್ದ ಜನರ ಮೇಲೆ ರಜಾಕರ ಘೋರ ಹಾವಳಿ ನಡೆದಿರುವ ಬಗ್ಗೆ ಐತಿಹಾಸಿಕ ದಾಖಲೆಗಳು ಸಾರಿ ಹೇಳುತ್ತಿವೆ. ಐತಿಹಾಸಿಕವಾಗಿ ವಿಜಯಪುರ ಜಿಲ್ಲೆ ಅನ್ಯಾಯಕ್ಕೊಳಪಟ್ಟಿದೆ. ಮದ್ರಾಸ್ ಪ್ರಾಂತದಲ್ಲಿರುವ ಬಳ್ಳಾರಿ ಜಿಲ್ಲೆಯನ್ನು ಸೇರಿಸಲು ಅಲ್ಲಿನ ಜನಪ್ರತಿನಿಧಿಗಳು ತಮ್ಮ ರಾಜಕೀಯ ಹಿತಾಸಕ್ತಿ ಮರೆತು ಅಂದಿನ ಸರ್ಕಾರದ ಮೇಲೆ ಒತ್ತಡ ತಂದು ಮೀಸಲಾತಿ ಲಾಭವನ್ನು ಅಲ್ಲಿನ ಯುವ ಜನತೆಗೆ ಒದಗಿಸಿ ಯಶಸ್ವಿಯಾದರು.  

ನ್ಯಾಯಯುತವಾಗಿ ವಿಜಯಪುರ ಜಿಲ್ಲೆಗೆ ಸಿಗಬೇಕಾಗಿದ್ದ ಮೀಸಲಾತಿಯ ಬಗ್ಗೆ ಕರ್ನಾಟಕ 5ನೇ ವಿಧಾನ ಸಭೆಯ ಮುದ್ದೇಬಿಹಾಳದ ಶಾಸಕರಾಗಿದ್ದ ದಿವಂಗತ ಎಂ.ಎಂ. ಸಜ್ಜನ ಅವರು ಅಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ವಿಜಯಪುರ ಮತ್ತು ಬಾಗಲಕೋಟ ಎಲ್ಲ ಜನಪ್ರತಿನಿಧಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದರೂ ಕೂಡಾ ಅಂದು ಅಧಿಕಾರದಲ್ಲಿದ್ದ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯು ಜಿಲ್ಲೆಗೆ ಸಿಗಬೇಕಾಗಿದ್ದ ವಿಶೇಷ ಸ್ಥಾನ ಮಾನದ ಬಗ್ಗೆ ಮಾತನಾಡದೆ ತಮಗೆ ಅಧಿಕಾರ ನೀಡಿದ ಜನರಿಗೆ, ಮತದಾರರಿಗೆ ಐತಿಹಾಸಿಕ ದ್ರೋಹ ಬಗೆದರು. 

ಹಲವು ವರ್ಷಗಳಿಂದ ಕರ್ನಾಟಕ ರಾಜ್ಯ ಪದವೀಧರ ಒಕ್ಕೂಟದಿಂದ ದಾಖಲೆ ಸಮೇತವಾಗಿ ಜನರಿಗೆ ಮನವರಿಕೆ ಮಾಡುವ ಕೆಲಸ  ಪ್ರಾರಂಭಿಸಿದ ನಂತರ ಪ್ರಾದೇಶಿಕ ಪಕ್ಷವಾದ ಕರ್ನಾಟಕ  ರಾಷ್ಟ್ರ ಸಮಿತಿ ಮತ್ತು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಕೆಂಗನಾಳ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರೊ. ರಾಜು ಆಲಗೂರ ಅವರು ತಮ್ಮ ಪ್ರಣಾಳಿಕೆಯಲ್ಲಿ ಜಿಲ್ಲೆಗೆ 371 ಜೆ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಜೊತೆಗೆ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು ವಿಜಯಪುರ ನಗರದ ಶಾಸಕರಾದ ಬಸನಗೌಡ ಆರ್ ಪಾಟೀಲ ಯತ್ನಾಳ ಅವರು ಮಾಧ್ಯಮ ಹೇಳಿಕೆ ನೀಡಿ ಜಿಲ್ಲೆಗೆ ನ್ಯಾಯಯುತಗಿ ಸಿಗಬೇಕಾದ ಮೀಸಲಾತಿ ಬಗ್ಗೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಹೇಳಿದ್ದರು. ಚುನಾವಣೆ ಮುಗಿದ ನಂತರ ಯಾರೊಬ್ಬರು ಕೂಡಾ ಮೀಸಲಾತಿ ಬಗ್ಗೆ ಮಾತನಾಡದೆ ಇರುವುದು ದುರಂತದ ವಿಷಯ. ಕೂಡಲೇ ಲೋಕಸಭೆ ಚುನಾವಣೆಯಲ್ಲಿ ತಾ ಮುಂದು ನಾ ಮುಂದು ಎಂದು ಹೇಳಿಕೆ ನೀಡಿ ಪ್ರತಿಷ್ಠೆ ಮೆರೆದು ಜಿಲ್ಲೆಯ ಜನತೆಗೆ ಭರವಸೆ ನೀಡಿರುವ ಎಲ್ಲ ಪಕ್ಷದ ಮುಖಂಡರು ಚಳಿಗಾಲದ ಅಧಿವೇಶನದಲ್ಲಿ ಪಕ್ಷ ಬೇದ ಮರೆತು ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ತಿನ ಸದಸ್ಯರುಗಳು ವಿದ್ಯಾರ್ಥಿಗಳ ಶೈಕ್ಷಣಿಕ, ಓದ್ಯೋಗಿಕ ಹಿತ ದೃಷ್ಟಿಯಿಂದ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 371 ಜೆ ಮೀಸಲಾತಿ ಕುರಿತು ಧ್ವನಿ ಎತ್ತಬೇಕು. ಜಿಲ್ಲೆಯನ್ನು ಮೀಸಲಾತಿಯಿಂದ ಬಿಟ್ಟು ಹೋದ ಪ್ರದೇಶವೆಂದು ಪರಿಗಣಿಸಿ ಜಿಲ್ಲೆಗೆ ನ್ಯಾಯಯುತವಾಗಿ ಕಲ್ಯಾಣ ಕರ್ನಾಟಕ ಮೀಸಲಾತಿ ಒದಗಿಸಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.