ಗ್ರಾಮ ಪಂಚಾಯತ್‌ಗಳ 5,257.70 ಕೋಟಿ ರೂ ವಿದ್ಯುತ್ ಶುಲ್ಕ ತೀರುವಳಿ: ಸಚಿವ ಪ್ರಿಯಾಂಕ್ ಖರ್ಗೆ

Payment of Rs 5,257.70 crore electricity charges of Gram Panchayats: Minister Priyank Kharge

ಗ್ರಾಮ ಪಂಚಾಯತ್‌ಗಳ 5,257.70 ಕೋಟಿ ರೂ  ವಿದ್ಯುತ್ ಶುಲ್ಕ ತೀರುವಳಿ: ಸಚಿವ ಪ್ರಿಯಾಂಕ್ ಖರ್ಗೆ 

ಸುವರ್ಣಸೌಧ 13: ರಾಜ್ಯದ ಗ್ರಾಮ ಪಂಚಾಯತ್ ಗಳು ಏಪ್ರಿಲ್ 2015 ರಿಂದ ಮಾರ್ಚ್‌ 2023 ರ ವರೆಗೆ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಪಾವತಿಸಬೇಕಾಗಿರುವ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ಬಾಕಿ ವಿದ್ಯುತ್ ಶುಲ್ಕದ ಒಟ್ಟು ಮೊ ತ್ತ ರೂ.6,509,90 ಕೋಟಿಗಳಲ್ಲಿ ಅಸಲು ಮೊತ್ತ ರೂ.5,257.70 ಕೋಟಿಗಳನ್ನು ಸರ್ಕಾರದ ಖಾತರೀಕರಣ ಮೂಲಕ ತೀರುವಳಿ ಮಾಡಿ ಹಾಗೂ ಬಡ್ಡಿ ಮೊತ್ತ ರೂ.1,252.20 ಕೋಟಿಗಳನ್ನು ಮನ್ನಾ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. 

       ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಡಾ.ತಿಮ್ಮಯ್ಯ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. 

 ಎಪ್ರಿಲ್ 2023 ರಿಂದ ಸೆಪ್ಟೆಂಬರ್ 2024 ರ ವರೆಗೆ ಗ್ರಾಮ ಪಂಚಾಯತಿಗಳ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಯಾವರಗಳ ವಿದ್ಯುತ್ ಶುಲ್ಕದ ಒಟ್ಟು ಮೊತ್ತ ರೂ.3,719.20 ಕೋಟಿಗಳು ಬಾಕಿ ಇರುತ್ತದೆ. ಈ ಮೊತ್ತದಲ್ಲಿ ಅಸಲು ಮೊತ್ತ ರೂ.2,749.54 ಕೋಟಿಗಳು ಮತ್ತು ಬಡ್ಡಿ ಮೊತ್ತ ರೂ.969.66 ಕೋಟಿಗಳು ಒಳಗೊಂಡಿದ್ದು, ಸದರಿ ಮೊತ್ತವನ್ನು ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಬೇಕಾಗಿರುತ್ತದೆ.  

       ಗ್ರಾಮ ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗದ ಅಭಿವೃದ್ಧಿ ಅನುದಾನ / ಗ್ರಾಮ ಪಂಚಾಯತಿಗಳಿಗೆ ಸಹಾಯ ಹೆಸರಿನಲ್ಲಿ ಒಟ್ಟು 1202.18 ಕೋಟಿಗಳ ಅನುದಾನವನ್ನು 2024-25 ನೇ ಸಾಲಿನಲ್ಲಿ ಒದಗಿಸಿದ್ದು, ಈ ಪೈಕಿ ರೂ. 391.79 ಕೋಟಿಗಳ ಅನುದಾನವನ್ನು ಗ್ರಾಮ ಪಂಚಾಯತಿಗಳ ವಿದ್ಯುತ್ ಶುಲ್ಕದ ಮೊತ್ತ ಭರಿಸಲು ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೆ, ಗ್ರಾಮ ಪಂಚಾಯತಿಗಳು ಸ್ವಂತ ಸಂಪನ್ಮೂಲದಿಂದ ವಿದ್ಯುತ್ ಶುಲ್ಕದ ಮೊತ್ತವನ್ನು ಭರಿಸಬಹುದಾಗಿದೆ ಎಂದರು. 

       2024-25ನೇ ಸಾಲಿನ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳ ಗೌರವ ಧನಕ್ಕಾಗಿ 273.78 ಕೋಟಿಗಳ ಅನುದಾನ ಒದಗಿಸಲಾಗಿದ್ದು, ಡಿಸೆಂಬರ್ 2024 ರವರೆಗಿನ ಗೌರವಧನವನ್ನು ಬಿಡುಗಡೆ ಮಾಡಲಾಗಿದೆ . ಗ್ರಾಮಾಂತರದಲ್ಲಿರುವ ಪಂಚಾಯತ್ ಗಳಿಗೆ ಅನುದಾನ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿರುವುದಿಲ್ಲ ಎಂದರು.