ಸರಿಯಾದ ಕ್ರಮದಲ್ಲಿ ಆದಾಯ ತೆರಿಗೆ ಪಾವತಿಸುವುದು ಎಲ್ಲರ ಆದ್ಯ ಕರ್ತವ್ಯ: ಸಿದ್ರಾಮೇಶ್ವರ
ಕೊಪ್ಪಳ 21: ಯಾವುದೇ ತಪ್ಪಿಲ್ಲದಂತೆ ಸರಿಯಾದ ಕ್ರಮದಲ್ಲಿ ಆದಾಯ ತೆರಿಗೆ ಪಾವತಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು. ಅವರು ಶುಕ್ರವಾರ ಜಿಲ್ಲಾಡಳಿತ ಭವನ ಆಡಿಟೋರಿಯಂ ಹಾಲ್‌ನಲ್ಲಿ ಆದಾಯ ತೆರಿಗೆ ಲೆಕ್ಕಾಚಾರ ಮಾಡುವ ಮತ್ತು ಇ ಫೈಲಿಂಗ್ ಕ್ರಮದ ಬಗ್ಗೆ ಡಿ.ಡಿ.ಓ.ಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಿವಿಧ ಇಲಾಖೆಗಳಲ್ಲಿನ ಡಿ.ಡಿ.ಓ.ಗಳು ಹಾಗೂ ಸಿಬ್ಬಂದಿಗಳಿಗೆ ಆದಾಯ ತೆರಿಗೆ ಮತ್ತು ಇ ಫೈಲಿಂಗ್ ಬಗ್ಗೆ ಮಾಹಿತಿ ಇರಬೇಕು. ಇದರಿಂದ ವೈಯಕ್ತಿಕ ಮತ್ತು ಕಛೇರಿಯ ಕಾರ್ಯನಿರ್ವಹಣೆಗೂ ಅನುಕೂಲವಾಗುತ್ತದೆ. ಡಿ.ಡಿ.ಓ.ಗಳು ಹಾಗೂ ಸಿಬ್ಬಂದಿಗಳಿಗೆ ಇಂತಹ ತರಬೇತಿ ಅತ್ಯವಶ್ಯಕವಾಗಿದೆ. ಇದರ ಸದುಪಯೋಗ ಪಡೆದುಕೊಂಡು, ಆದಾಯ ತೆರಿಗೆಯನ್ನು ಸರಿಯಾದ ಕ್ರಮದಲ್ಲಿ ಲೆಕ್ಕಾಚಾರ ಮಾಡಬೇಕು ಮತ್ತು ನಿಗದಿತ ಅವಧಿಯೊಳಗೆ ಇ ಫೈಲಿಂಗ್ ಮಾಡಬೇಕು. ಇವುಗಳ ಬಗ್ಗೆ ಯಾವುದೇ ಪ್ರಶ್ನೆಗಳು, ಸಮಸ್ಯೆಯಿದ್ದಲ್ಲಿ, ಸಂಪನ್ಮೂಲ ವ್ಯಕ್ತಿಗಳಲ್ಲಿ ಹೇಳಿ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ, ಸಂಪನ್ಮೂಲವ್ಯಕ್ತಿಗಳು ಹಾಗೂ ಆದಾಯ ತೆರಿಗೆ ಅಧಿಕಾರಿಗಳಾದ ಕೊಪ್ಪಳದ ಎಂ.ವಿ ಪ್ರಸನ್ನ ಕುಮಾರ ಮತ್ತು ಗದಗ ಜಿಲ್ಲೆಯ ಮಹೇಶ ಮಂತ್ರಶೆಟ್ಟಿ, ಕೊಪ್ಪಳದ ಚಾರ್ಟಡ್ ಅಕೌಂಟೆಂಟ್ ಶ್ರಿನಿವಾಸ, ನೀರೀಕ್ಷಕರಾದ ವೆಂಕೋಬ ನಾಡಿಗೇರ ಹಾಗೂ ಸುನೀಲ್ ಕುಮಾರ, ಜಿಲ್ಲಾ ತರಬೇತಿ ಸಂಸ್ಥೆಯ ಬೋದಕರಾದ ಶ್ರೀಧರ, ನರ್ಮದಾ ಸೇರಿದಂತೆ ಮತ್ತಿತರರಿದ್ದರು. ಕಾರ್ಯಾಗಾರದಲ್ಲಿ ವೇತನದಲ್ಲಿ ಆದಾಯ ತೆರಿಗೆ, ಟಿ.ಡಿ.ಎಸ್.ಸಿ ಮೂಲದಲ್ಲಿ ತೆರಿಗೆ ಕಟಾವಣೆ, ಆದಾಯ ತೆರಿಗೆ ರೀಟರ್ನ್ ಸಲ್ಲಿಕೆ ಕುರಿತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. 100ಕ್ಕೂ ಅಧಿಕ ಡಿ.ಡಿ.ಓ.ಗಳು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು.