ಅಡಿಲೇಡ್, ಡಿ 1- ಆಸ್ಟ್ರೇಲಿಯಾ ಹಿರಿಯ ವೇಗಿ ಪ್ಯಾಟ್ ಕಮಿನ್ಸ್ ಅವರು ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ವಿಶಿಷ್ಠ ದಾಖಲೆಯನ್ನು ಮಾಡಿದ್ದಾಾರೆ. 2019ರ ಆವೃತ್ತಿಯ ಟೆಸ್ಟ್ ಕ್ರಿಕೆಟ್ ನಲ್ಲಿ 50 ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ನೂತನ ಮೈಲುಗಲ್ಲು ಸೃಷ್ಠಿಸಿದರು.
ಪ್ರಸ್ತುತ ಪಾಕಿಸ್ತಾನ ವಿರುದ್ಧ ಅಡಿಲೇಡ್ ನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಹಾಗೂ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ಪ್ಯಾಟ್ ಕಮಿನ್‌ಸ್ ಈ ಸಾಧನೆಗೆ ಭಾಜನರಾದರು. 91ನೇ ಓವರ್‌ನಲ್ಲಿ ಮೊಹಮ್ಮದ್ ಅಬ್ಬಾಾಸ್ ಅವರ ವಿಕೆಟ್ ಪಡೆಯುತ್ತಿದ್ದಂತೆ ಕಮಿನ್ಸ್ , ವೃತ್ತಿ ಜೀವನದ 50 ವಿಕೆಟ್ ಅನ್ನು ತನ್ನ ಕಿಸೆಗೆ ಹಾಕಿಕೊಂಡರು. ನಂತರ, ಯಾಸೀರ್ ಶಾ ಅವರ ವಿಕೆಟ್ ಪಡೆದು ಒಟ್ಟು 51 ವಿಕೆಟ್‌ಗಳನ್ನು ಪಡೆದರು. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರ ಸ್ಥಾಾನದಲ್ಲಿದ್ದಾಾರೆ.
ಇಂಗ್ಲೆೆಂಡ್ ತಂಡದ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಅವರು 38 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಮೊಹಮ್ಮದ್ ಶಮಿ 16 ಇನಿಂಗ್ಸ್ ಗಳಲ್ಲಿ 33 ವಿಕೆಟ್ ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ವರ್ಷದಲ್ಲಿ ಒಟ್ಟಾಾರೆ ಆರು ಬೌಲರ್‌ಗಳು ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಆಸ್ಟ್ರೇಲಿಯಾದ ನಾಲ್ಕು ಬೌಲರ್‌ಗಳಿರುವುದು ವಿಶೇಷ.
10 ಇನಿಂಗ್ಸ್ ಗಳಲ್ಲಿ ಮಿಚೆಲ್ ಸ್ಟಾರ್ಕ್ 30 ವಿಕೆಟ್, ಸ್ಪಿನ್ನರ್ ನಥಾನ್ ಲಿಯಾನ್ ಹಾಗೂ ಜೋಶ್ ಹೇಜಲ್‌ವುಡ್ ಕ್ರಮವಾಗಿ 30 ಮತ್ತು 29 ವಿಕೆಟ್ ಪಡೆದುಕೊಂಡಿದ್ದಾರೆ. ಇದೀಗ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಆರು ವಿಕೆಟ್ ಪಡೆದಿದ್ದಾರೆ.ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ ನಲ್ಲಿ 127 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 589 ರನ್ ಗಳಿಸಿತ್ತು. ಡೇವಿಡ್ ವಾರ್ನರ್ 335 ರನ್ ಗಳಿಸಿ ದಾಖಲೆ ಮಾಡಿದ್ದರು. ಪಾಕಿಸ್ತಾನ ಪ್ರಥಮ ಇನಿಂಗ್ಸ್ ನಲ್ಲಿ 94.4 ಓವರ್ ಗಳಿಗೆ 302 ರನ್ ಗಳಿಗೆ ಆಲೌಟ್ ಆಯಿತು. ಫಾಲೋ ಆನ್‌ಗೆ ಸಿಲುಕಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ, ಮೂರನೇ ದಿನದಾಟ ಮುಕ್ತಾಯಕ್ಕೆೆ 16.5 ಓವರ್ ಗಳಿಗೆ ಮೂರು ವಿಕೆಟ್ ನಷ್ಟಕ್ಕೆೆ 39 ರನ್ ಗಳಿಸಿದ್ದು, ಇನ್ನೂ 248 ರನ್ ಹಿನ್ನಡೆ ಅನುಭವಿಸಿದೆ.