ಅಮೀತ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳಿಂದ ಪಂಜಿನ ಮೆರವಣಿಗೆ
ದೇವರಹಿಪ್ಪರಗಿ 27: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅಪಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ವಿದ್ಯಾರ್ಥಿ ಒಕ್ಕೂಟ ತಾಲೂಕು ಘಟಕದ (ಪ್ರೊ.ಬಿ. ಕೃಷ್ಣಪ್ಪ ಬಣ) ವತಿಯಿಂದ ಗುರುವಾರ ಸಂಜೆ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ಮೊಹರೆ ವೃತ್ತದ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೆ ಪಂಜಿನ ಮೆರವಣಿಗೆ ನಡೆಸಿ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಡಿಎಸ್‌ಎಸ್ ಜಿಲ್ಲಾ ಸಂಘಟನೆಯ ಸಂಚಾಲಕರಾದ ಪ್ರಕಾಶ ಗುಡಿಮನಿ ಅವರು ಮಾತನಾಡಿ,ಡಾ. ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿನಲ್ಲೆ ಅತ್ಯುತ್ತಮ ಸಂವಿಧಾನ ರಚಿಸಿಕೊಟ್ಟಿದ್ದಾರೆ. ಸರ್ವರಿಗು ಸಮಬಾಳು, ಸಮಪಾಲು ತತ್ವದಡಿ ಸಂವಿಧಾನ ರಚನೆಯಾಗಿದೆ. ಬಿಜೆಪಿಯವರಿಗೆ ಈ ಸಂವಿಧಾನವನ್ನು ಬದಲಿಸುವ, ಮೀಸಲಾತಿಯನ್ನು ರದ್ದುಗೊಳಿಸುವ ಹಿಡನ್ ಅಜೆಂಡ್ ಇದೆ ಎಂದು ಆರೋಪಿಸಿದರು.ಕೇಂದ್ರ ಗೃಹ ಸಚಿವರು ರಾಜ್ಯಸಭೆಯಲ್ಲಿ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ತಕ್ಷಣ ದೇಶದ ಜನರ ಕ್ಷಮೆಯಾಚಿಸಿ ರಾಜೀನಾಮೆ ನೀಡಬೇಕು ಎಂದು ಹೇಳಿದರು.
ಹಲವಾರು ಪ್ರಗತಿಪರ ಸಂಘಟನೆಯ ಮುಖಂಡರು ಮಾತನಾಡಿ,ಅಂಬೇಡ್ಕರ್ ಬರೆದ ಸಂವಿಧಾನದ ಅಡಿಯಲ್ಲಿ ಬಿಜೆಪಿ ಕೇಂದ್ರ ಗೃಹ ಮಂತ್ರಿಯಾಗಿದ್ದು, ಹುದ್ದೆಗೆ ಯೋಗ್ಯವಲ್ಲ, ಇವರು ನೀಡಿದ ಹೇಳಿಕೆ ದೇಶಕ್ಕೆ ಅಪಮಾನ ಹೀಗಾಗಿ ಕೂಡಲೇ ಸಂಪುಟದಿಂದ ವಜಾ ಹಾಗೂ ರಾಷ್ಟ್ರಪತಿಗಳು ಅಮಾನತು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಪಂಜಿನ ಮೆರವಣಿಗೆ ನಂತರ ಅಂಬೇಡ್ಕರ್ ವೃತ್ತದ ಬಳಿ ಕೇಂದ್ರ ಗೃಹ ಸಚಿವರ ಹೇಳಿಕೆ ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರ ಮುಖಾಂತರ ರಾಷ್ಟ್ರಪತಿಗೆ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಸಂಘಟನೆಯ ಸಂಚಾಲಕರುಗಳಾದ ಪರಶುರಾಮ ದಿಂಡವಾರ, ಲಕ್ಕಪ್ಪ ಬಡಿಗೇರ.ತಾಲೂಕು ಸಂಚಾಲಕರಾದ ರಾಜಕುಮಾರ ಸಿಂದಗೇರಿ, ಮುಖಂಡರುಗಳಾದ ರಾವುತ ಮಾಸ್ತರ ತಳಕೇರಿ, ಬಸವರಾಜ ಇಂಗಳಗಿ, ಪರಶುರಾಮ ಬಡಿಗೇರ, ಪ್ರಕಾಶ ಶಾಂತಗಿರಿ, ಯಮನಪ್ಪ ಭೂತಾಳಿ, ರಮೇಶ ಬನಸೋಡೆ, ರಾಘವೇಂದ್ರ ಪಡಗಾನೂರ, ಪ್ರಕಾಶ ಮಣೂರ, ಸುನೀಲ ಕನಮಡಿ, ಮಹೇಶ ಗುಡಿಮನಿ, ಸುನಂದಾ ಸೊನ್ನಳ್ಳಿ, ಶಂಕರಗೌಡ ಹಿರೇಗೌಡ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಮುಖಂಡರು ಹಾಗೂ ವಿವಿಧ ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.