ಪಿಡಿಓ-ಗ್ರಾ.ಪಂ. ಸದಸ್ಯರ ತಿಕ್ಕಾಟ: ಅಭಿವೃದ್ಧಿ ಕುಂಠಿತ ಕಂಗಾಲಾದ ಉಗಾರ ಬುದ್ರಕ್ ಗ್ರಾಮದ ಗ್ರಾಮಸ್ಥರು
ಕಾಗವಾಡ 04: ತಾಲೂಕಿನ ಉಗಾರ ಬುದ್ರುಕ್ ಗ್ರಾಮ ಪಂಚಾಯತಿ ಪಿಡಿಓ ಮತ್ತು ಸದಸ್ಯರ ಮಧ್ಯದ ತಿಕ್ಕಾಟ ತಾರಕಕ್ಕೆರಿದ್ದು, ಗ್ರಾಮದಲ್ಲಿ ನಡೆಯಬೇಕಿದ್ದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ದಿನೆದಿನೆ ಬೇಸಿಗೆಯ ಬಿಸಿಲು ಹೆಚ್ಚುತ್ತಿದ್ದು, ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಯ ಮೋಟಾರ ಕೆಟ್ಟು ನಿಂತು ನಾಲ್ಕು ದಿನಗಳಾದರೂ ದುರಸ್ತಿ ಕಾಣದೇ ಪಕ್ಕದಲ್ಲಿಯೇ ನದಿ ಇದ್ದರೂ ಗ್ರಾಮಸ್ಥರು ನೀರಿಗಾಗಿ ಹಾತೋರಿಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕಳೆದ 2 ವರ್ಷದಿಂದ ಗ್ರಾಮ ಪಂಚಾಯಿತಿಗೆ ಆಗಮಿಸಿರುವ ಪಿಡಿಓ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರು ಮತ್ತು ಸದಸ್ಯರ ಮಧ್ಯೆ ತಿಕ್ಕಾಟ ಮುಂದುವರೆದಿದೆ. ಕಳೆದ ತಿಂಗಳು ಪಿಡಿಓ ಬದಲಾವಣೆ ಮಾಡಬೇಕೆಂದು ಗ್ರಾಮ ಪಂಚಾಯತಿ ಸದಸ್ಯರು ಪಂಚಾಯತಿ ಕಾರ್ಯಾಲಯಕ್ಕೆ ಬೀಗ ಜಡಿದ ಪ್ರತಿಭಟನೆ ಕೂಡಾ ನಡೆಸಿದ್ದರು. ಆದರೇ ಯಾವುದೇ ಪ್ರಯೋಜನವಾಗಿಲ್ಲ. ಪಿಡಿಓ ಪಂಚಾಯತಿಗೆ ಸರಿಯಾದ ಸಮಯಕ್ಕೆ ಬರುವುದಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿಗೆ ಸಹಕಾರ ನೀಡುತ್ತಿಲ್ಲ. ಈ ಕುರಿತು ತಾಲೂಕಾ ಪಂಚಾಯತಿ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದರೂ ಮತ್ತು ಎಲ್ಲ 26 ಜನ ಗ್ರಾಮ ಪಂಚಾಯತಿ ಸದಸ್ಯರು ರಾಜೀನಾಮೆ ನೀಡಿ, ಪ್ರತಿಭಟಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಿಡಿಓ ಅವರ ನಿರ್ಲಕ್ಷ್ಯಕ್ಕೆ ಜನಪ್ರತಿನಿಧಿಗಳು ಕೂಡಾ ಬೇಸತ್ತು ಹೋಗಿದ್ದಾರೆ. ಇದರಿಂದ ಗ್ರಾಮಕ್ಕೆ ಅನಾಥಪ್ರದ್ಞೆ ಕಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮದಲ್ಲಿಯ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣವಾಗಿ ಕುಂಠಿತಗೊಂಡಿದ್ದು, ಸದಸ್ಯರು ತಮ್ಮ ವಾರ್ಡುಗಳಿಗೆ ಹೋದರೇ ಅಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಅವರಿಂದ ಹಿಡಿಶಾಪ ಹಾಕಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಉಗಾರ ಬುದ್ರಕ್ ಗ್ರಾಮದಲ್ಲಿ ಪ್ರಸಿದ್ಧ ಪದ್ಮಾವತಿ ದೇವಿ ಮಂದಿರವಿದ್ದು, ದೂರದೂರದಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದು, ಇಲ್ಲಿ ಮೂಲಭೂತ ಸೌಕರ್ಯಗಳ ಕೊರೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿಯ ಸಾರ್ವಜನಿಕ ಶೌಚಾಲಯಗಳು ಗಬ್ಬೆದ್ದು, ನಾರುತ್ತಿದ್ದರೂ ಸಹ ಇತ್ತ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಕ್ಯಾರೆ ಎನ್ನುತ್ತಿಲ್ಲ. ಮುಖ್ಯವಾಗಿ ಮಾರ್ಚ ತಿಂಗಳು ಇದ್ದದ್ದರಿಂದ ಎಲ್ಲ ಗ್ರಾಮಸ್ಥರ ಮನೆ ಉತಾರಾ ಸೇರಿದಂತೆ ವಿವಿಧ ಕೆಲಸಗಳಿಗೆ ಪಂಚಾಯತಿಗೆ ಆಗಮಿಸಿದರೇ ಅಲ್ಲಿ ಪಿಡಿಓ ಇಲ್ಲದ ಕಾರಣ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದು, ಸಂಬಂಧಪಟ್ಟ ಮೇಲಾಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ, ಸಮಸ್ಯೆಯನ್ನು ಬಗೆ ಹರಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮುಖಂಡರಾದ ಶೀತಲ ಪಾಟೀಲ ಹಾಗೂ ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.