25 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದಾಡುತ್ತಿರುವ 70ಕ್ಕೂ ಹೆಚ್ಚು ಕಾರ್ಮಿಕ ಮಹಿಳೆಯರು

25 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದಾಡುತ್ತಿರುವ 70ಕ್ಕೂ ಹೆಚ್ಚು ಕಾರ್ಮಿಕ ಮಹಿಳೆಯರು  Over 70 women workers who have been running from pillar to post for justice for 25 years

ರಾಣೇಬೆನ್ನೂರು 19: ಪ್ರತಿಷ್ಠಿತ ಬಿರ್ಲಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 70ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರನ್ನು ಯಾವುದೇ ಮುನ್ಸೂಚನೆ ನೀಡದೆ 2001ರಲ್ಲಿ ಏಕಾಏಕಿ ಕೆಲಸದಿಂದ ತೆಗೆದುಹಾಕಲಾಗಿದ್ದು, ಕಳೆದ 25 ವರ್ಷಗಳಿಂದ ಅವರು ನ್ಯಾಯಕ್ಕಾಗಿ ಬೆಳಗಾವಿ, ಹುಬ್ಬಳ್ಳಿ ಹಾಗೂ ಹಾವೇರಿ ಲೇಬರ್ ಕೋರ್ಟ್ಗಳ ಮೆಟ್ಟಿಲೇರುತ್ತಿದ್ದಾರೆ.  

ಈ ಹಿನ್ನೆಲೆಯಲ್ಲಿ ರೈತ ಮುಖಂಡ ಹಾಗೂ ಪ್ರಗತಿಪರ ಚಿಂತಕ ರವೀಂದ್ರಗೌಡ ಪಾಟೀಲ ಅವರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಮಾನವೀಯ ದೃಷ್ಟಿಕೋನದಿಂದ ಮಧ್ಯಪ್ರವೇಶಿಸಿ ಕಂಪನಿ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಸೂಕ್ತ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾರೆ.  

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಕಂಪನಿ ಮುಖ್ಯಸ್ಥರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಬಡ ಮಹಿಳಾ ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದು, ಕಂಪನಿಯೊಂದಿಗೆ ಒಂದು ಸುತ್ತಿನ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ವೃದ್ಧ ಕಾರ್ಮಿಕ ಮಹಿಳೆಯರಲ್ಲಿ ಆಶಾಭಾವನೆ ಮೂಡಿದೆ.  

ಈ ಸಂದರ್ಭದಲ್ಲಿ ಹನಮಜ್ಜಿ, ಹೊನ್ನಮ್ಮ, ಈರಮ್ಮ, ಈರಮ್ಮ ಶಿಗಾಂವಿ, ಚೌಡಮ್ಮ, ಜೋಗಮ್ಮ, ಜಗದೀಶ್ವರಿ, ಬಸಮ್ಮ ಕರಡಪ್ಪನವರ, ಚನ್ನಮ್ಮ ಕರಬಸಯ್ಯ ಶಂಕ್ರಿಮಠ, ಶಿವಮೂರ್ತೇಶ್ವರ ಶಿವಪ್ಪ ಎಚ್‌., ಹನುಮಪ್ಪ ಕುಂಬಳೂರ, ನಾಗರಾಜ ಮೋರನಾಳ, ಉಚ್ಚಪ್ಪ ಕಾಯಿಕದ, ಮಲ್ಲಿಕ ಕಾಯಿಕದ, ಶೇಖರ​‍್ಪ ಹರಗನಹಳ್ಳಿ, ಉಜ್ಜಪ್ಪ ನೆಲವಾಗಲ, ಗದಿಗಯ್ಯ ಯಲ್ಲಪ್ಪ ಓಲೇಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.