ತತ್ವಪದಕರಾರ, ಪ್ರವಚನಕಾರರಿಂದಲೆ ಶ್ರೀಮಂತವಾಗಿದೆ ನಮ್ಮ ಸಂಸ್ಕೃತಿ: ಡಾ. ಜಯರಾಜ್

ತತ್ವಪದಕರಾರ, ಪ್ರವಚನಕಾರರಿಂದಲೆ ಶ್ರೀಮಂತವಾಗಿದೆ ನಮ್ಮ ಸಂಸ್ಕೃತಿ: ಡಾ. ಜಯರಾಜ್  Our culture is enriched by philosophers and orators: Dr. Jayaraj

ತತ್ವಪದಕರಾರ, ಪ್ರವಚನಕಾರರಿಂದಲೆ ಶ್ರೀಮಂತವಾಗಿದೆ ನಮ್ಮ ಸಂಸ್ಕೃತಿ: ಡಾ. ಜಯರಾಜ್  


ವಿಜಯಪುರ 11: ದೇವಸ್ಥಾನಗಳಲ್ಲಿ ನಿತ್ಯ ಭಜನೆ ಪದಗಳನ್ನು ಹಾಡಲಾಗುತ್ತದೆ. ಆ ಎಲ್ಲ ಭಜನೆ ಪದಗಳು ತತ್ವಪದಗಳನ್ನೇ ಹೊಂದಿವೆ. ಈ ಭಜನಾ ಮಂಡಳಿಗಳು ಹಳ್ಳಿಗಳಲ್ಲಿ ಇಂದಿಗೂ ತತ್ವಪದಗಳನ್ನು ಜೀವಂತವಾಗಿರಿಸಿವೆ ಎಂದು ಬಿ.ಎಲ್‌.ಡಿ.ಇ ಸಂಸ್ಥೆಯ ಸಮ ಕುಲಾಧಿಪತಿ ಡಾ.ವೈ ಎಂ. ಜೈಯರಾಜ್ ಹೇಳಿದರು. 


ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರ ಅಧ್ಯಯನ ಕೇಂದ್ರ ಹಾಗೂ ಐ ಕ್ಯೂ ಎ ಸಿ, ಕನ್ನಡ ವಿಭಾಗ, ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದ ಸಹಯೋಗದಲ್ಲಿ ದಿ. 10ರಂದು ಹಮ್ಮಿಕೊಳ್ಳಲಾಗಿದ್ದ ತತ್ವಪದಕಾರ್ತಿಯರ ಲೋಕ ದೃಷ್ಟಿ ಎಂಬ ವಿಷಯದ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಈ ಭಜನೆಕಾರರು,  ತತ್ವಪದಕರಾರು ಹಾಗೂ ಪ್ರವಚನಕಾರರು ಹಳ್ಳಿಗಳಲ್ಲಿ ಇರುವುದರಿಂದಲೇ ಇಂದು ನಮ್ಮ ಸಂಸ್ಕೃತಿ ಶ್ರೀಮಂತವಾಗಿ ಉಳಿದಿದೆ. ಹೇಳಿದಂತೆ ಯಥಾವತ್ತಾಗಿ ಹೇಳಲು ಹಾಗೂ ಬರೆಯಲು ಸಾಧ್ಯವಾಗುವ ಭಾಷೆ ಕನ್ನಡ, ಈ ಕನ್ನಡ ಭಾಷೆಯ ತತ್ವಪದಗಳ ಬಗ್ಗೆ ಸಮಗ್ರ ಅಧ್ಯಯನ ಹಾಗೂ ಸಂಶೋಧನೆ ನಡೆಯಬೇಕು ಎಂದರು. 


ಕೇವಲ ಮನುಷ್ಯ ಅಲ್ಲ ಗಿಡ ಮರಗಳು ಸಹಿತ ಸಂವಹನ ನಡೆಸುತ್ತವೆ ಎನ್ನುವುದು ನಾವು ಅಧ್ಯಯನಗಳಿಂದ ತಿಳಿದುಕೊಂಡಿದ್ದೇವೆ. ಆ ಸಂವಹನಕ್ಕೆ ಭಾಷೆ ಅತೀ ಮುಖ್ಯ. ಅಕ್ಷರ ಜ್ಞಾನವಿಲ್ಲದ ನಮ್ಮ ಜನಪದರು ತತ್ವಪದಗಳು, ಒಗಟು ಸೇರಿದಂತೆ ವಿವಿಧ ಸಾಹಿತ್ಯವನ್ನು ನಮಗೆ ಜ್ಞಾನವನ್ನಾಗಿ ಧಾರೆಯೆರಿದ್ದಾರೆ. ವಚನ ಸಾಹಿತ್ಯ ಜನಸಾಮಾನ್ಯರು ತಲುಪುವ ಸಾಹಿತ್ಯ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಸಲುವಾಗಿ ಶರಣರು ವಚನ ಸಾಹಿತ್ಯವನ್ನು ರಚಿಸಿದರು. ಅನಂತಹ ಅಪರೂಪದ ವಚನ ಸಾಹಿತ್ಯವನ್ನು ಉಳಿಸಿ ಜಗತ್ತಿಗೆ ಪರಿಚಯಿಸುವಲ್ಲಿ ಡಾ.ಪ.ಗು.ಹಳಕಟ್ಟಿ ಶ್ರಮವನ್ನು ಮರೆಯುವಂತಿಲ್ಲ ಎಂದರು. 


ವಚನ ಸಾಹಿತ್ಯ ಜಗತ್ತಿನಲ್ಲಿ ಸಾಮಾಜಿಕ ಕ್ರಾಂತಿ ಮೂಡಿಸಿ ಸಾಮಾಜಿಕ ಬದಲಾವಣೆಯನ್ನೇ ಮೂಡಿಸಿತು. ಅದರ ನೆನಪಿಗಾಗಿಯೇ ಬಿಎಲ್‌ಡಿಈ ಆವರಣದಲ್ಲಿ 770 ಲಿಂಗಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು. ಎಲ್ಲಕ್ಕಿಂತಲೂ ಮುಖ್ಯವಾಗಿ ಹಳ್ಳಿಗಾಡಿನ ಸೊಗಡು, ಸಂಸ್ಕೃತಿ ಶ್ರೀಮಂತಿಕೆಯ ಮೇಲೆ ಬೆಳಕು ಚಲ್ಲುವ ಜಾನಪದ ಸಾಹಿತ್ಯ ಭಾರತ ಶ್ರೀಮಂತ ಸಾಹಿತ್ಯವಾಗಿ ಹೊರ ಹೊಮ್ಮಿತು. ಜೈನ ಸಾಹಿತ್ಯ ವಿಶಾಲವಾಗಿದೆ. ಜೈನ ಕವಿಗಳು ಅಹಿಂಸಾವಾದಿಗಳು. ಜಗತ್ತಿಗೆ ಅಂಹಿಸಾ ಮಾರ್ಗವನ್ನು ತೋರುವಲ್ಲಿ ಜೈನ ಸಾಹಿತ್ಯ ಅತೀ ಮಹತ್ವದ್ದು. ಸಾಮಾಜಿಕ ಕ್ರಾಂತಿಗೆ ಅನೇಕ ಧರ್ಮಗಳು ತಮ್ಮದೇ ಆದ ಕೊಡುಗೆ ನೀಡಿವೆ ಎಂದರು. 


 ಶಿಶುನಾಳ ಶರೀಪ್ ತತ್ವಪದಗಳು ಮನುಕುಲದ ಒಳಿತನ್ನು ಹೇಳುತ್ತವೆ. ಶರೀಪರ ಅಜ್ಞಾನದಿಂದ ಸೋರುತ್ತಿದೆ ಮನೆ ಮಾಳಿಗೆ.... ಎನ್ನುವ ತತ್ವಪದ ಹಾಗೂ ಒಗಟುಗಳ ಮೂಲಕ ಸಾಹಿತ್ಯವನ್ನು ರಚಿಸಿ ಜಗತ್ತಿಗೆ ಆದ್ಯಾತ್ಮದ ಜ್ಞಾನವನ್ನು ನೀಡಿದ್ದಾರೆ ಎಂದು ಹೇಳಿದರು. 


ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರ ಅಧ್ಯಯನ ಕೇಂದ್ರದ ಸದಸ್ಯ ಡಾ.ದಸ್ತಗೀರ ಸಾಬ್ ದಿನ್ನಿ ಮಾತನಾಡಿ, ಸಂತಕವಿ ಕನಕದಾಸ ಮತ್ತು ತತ್ವಪದಗಳ ಅಧ್ಯಯನ ಕೇಂದ್ರದಲ್ಲಿ ಪುಸ್ತಕ ಪ್ರಕಟಣೆ, ಮಾರಾಟ ನಿರಂತರವಾಗಿ ನಡೆಯುತ್ತಿವೆ. ತತ್ವಪದಗಳ ದಾಖಲೀಕರಣ ನಡೆಯಬೇಕು,  ತತ್ವಪದಕಾರ್ತಿಯರು ಬಹಳಷ್ಟು ಕಡಿಮೆ ಇದ್ದಾರೆ. ನಾವು ಅವರನ್ನು ಹುಡುಕುವ ಕೆಲಸ ಮಾಡುತ್ತಿದ್ದೇವೆ. ಜೀವನದ ಮೌಲ್ಯಗಳನ್ನು ಹುಡುಕಿ ಕೊಟ್ಟಿರುವ ತತ್ವಪದಕಾರ್ತಿಯರನ್ನು ಹುಡುಕು ಕೆಲಸವನ್ನು ನಮ್ಮ ಅಧ್ಯಯನ ಕೇಂದ್ರ ಮಾಡಲಿದೆ ಎಂದರು. 


ಈ ವೇಳೆಯಲ್ಲಿ ಮೂರು ಗೋಷ್ಠಿಗಳು ನಡೆಸಲಾಯಿತು. ತತ್ವಪದ ಕಾರ್ತಿಯರ ಕಟ್ಟು ಬಯಸುವ ಸಮಾಜ-ಡಾ.ಗರುಲಿಂಗಪ್ಪ ದಬಾಲೆ, ತತ್ವಪದಕಾರ್ತಿಯರ ತಾತ್ವಿಕ ಜಿಜ್ಞಾಸೆ-ಡಾ.ಸಂಗಮನಾಥ ಲೋಕಾಪುರ ಹಾಗೂ ತತ್ವಪದಕಾರ್ತಿಯರ ಕಾಯ ಮತ್ತು ಮನಸ್ಸುಗಳ ಕಲ್ಪನೆ ಎಂಬ ವಿಷಯದ ಕುರಿತು ಡಾ.ಗೌರಮ್ಮ  ಎಸ್‌.ಎಂ ಅವರು ವಿಚಾರವನ್ನು ಮಂಡಿಸಿದರು. 


ಆಡಳಿತಾಧಿಕಾರಿ ಪ್ರೊ.ವಿ.ಎಸ್‌.ಬಗಲಿ, ಪ್ರಾಚಾರ್ಯೆ ಡಾ.ಆರ್‌.ಎಂ ಮಿರ್ಧೆ,ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್‌.ಪಾಟೀಲ ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀನಿವಾಸ್ ದೊಡಮನಿ, ಡಾ.ಉಷಾದೇವಿ ಹಿರೇಮಠ, ಡಾ.ಆರ್‌.ಜಿ.ಕಮತರ,ಪ್ರೊ.ಎಸ್ ವಾಯ್ ಅಂಗಡಿ ಮಹಾವಿದ್ಯಾಲಯದ ಇನ್ನಿತರ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕುಮಾರಿ ಸ್ವಪ್ನಾ ಸಂಗಡಿಗರು ಪ್ರಾರ್ಥಿಸಿದರು, ಡಾ.ಶುಭಾಸಚಂದ್ರ ಕನ್ನೂರ ಕಾರ್ಯಕ್ರಮ ನಿರೂಪಿಸಿದರು, ಡಾ.ಪಿ.ಎಸ್‌.ಪಾಟೀಲ ವಂದಿಸಿದರು.