ಸಮಾಜವನ್ನು ಒಡೆಯುವ ಜಾತಿವಾದಿ - ಕೋಮುವಾದಿ ದಾಳಿಗಳಿಂದ ಸಮಾಜವನ್ನು ಕಾಪಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ

ಸಮಾಜವನ್ನು ಒಡೆಯುವ ಜಾತಿವಾದಿ - ಕೋಮುವಾದಿ ದಾಳಿಗಳಿಂದ ಸಮಾಜವನ್ನು ಕಾಪಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ Only education can protect society from the casteist-communal attacks that divide it.

ಬೆಳಗಾವಿ 01 : ಕೆಪಿಎಸ್ ಮ್ಯಾಗ್ನೆಟ್‌- ಖಾಸಗೀಕರಣದ ಹುನ್ನಾರ! ಸರ್ಕಾರಿ ಶಾಲೆ ಮುಚ್ಚುವುದರ ವಿರುದ್ಧ ಜನಾಂದೋಲನ! ಇರುವ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ನೀಡಿ ಬಲ ಪಡಿಸುವುದರ ಬದಲಾಗಿ ಕೆಪಿಎಸ್ ಮ್ಯಾಗ್ನೆಟ್ ಹೆಸರಲ್ಲಿ ಶಾಲೆಗಳನ್ನು ಮುಚ್ಚುತ್ತಿರುವುದರ ವಿರುದ್ದ ಪಾಲಕರು, ಗ್ರಾಮಸ್ಥರು, ಸಾಹಿತಿಗಳು, ವಿವಿಧ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಗಳನ್ನು ಉಳಿಸಲು ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಇಂದು ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಎಐಡಿಎಸ್‌ಓ ನೇತೃತ್ವದಲ್ಲಿ ಪೋಷಕರ ಸಮಾವೇಶ ನಡೆಯಿತು.ಈ ಸಂದರ್ಭದಲ್ಲಿ ಸಾಹಿತಿಗಳಾದ ಎಲ್ಲಪ್ಪ ಹಿಮ್ಮಡಿ ಮಾತನಾಡಿ, "ಕರ್ನಾಟಕ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ತನ್ನ ನಿರ್ಧಾರವನ್ನು ಬದಲಿಸಲೇಬೇಕು.

ಈ ನಿಟ್ಟಿನಲ್ಲಿ ಜನ ಚಳುವಳಿ ತೀವ್ರಗೊಳ್ಳಬೇಕು. ಸಮಾಜವನ್ನು ಒಡೆಯುವ ಜಾತಿವಾದಿ - ಕೋಮುವಾದಿ ದಾಳಿಗಳಿಂದ ಸಮಾಜವನ್ನು ಕಾಪಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ. ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಶಿಕ್ಷಣದ ಉಳಿವು. ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ ಮುಂತಾದವರ ಪರಿಶ್ರಮದಿಂದ ಬಂದಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ಒಪ್ಪಲು ಸಾಧ್ಯವಿಲ್ಲ." ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕನ್ನಡ ಪ್ರಾಧ್ಯಾಪಕರಾದ ಡಾಕ್ಟರ್ ಎಚ್ ಬಿ ಕೋಲ್ಕಾರ್ ಮಾತನಾಡಿ, "ಖಾಸಗಿ ಸಂಸ್ಥೆಗಳನ್ನು ಬಲಪಡಿಸುವ ತಂತ್ರವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಬಂಡವಾಳಶಾಹಿಗಳೊಂದಿಗೆ ಆಳ್ವಿಕರು ರಾಜಿ ಮಾಡಿಕೊಂಡಿದ್ದಾರೆ. ಖಾಸಗೀಕರಣಕ್ಕೆ ಒತ್ತು ನೀಡಿ ಬಡವರ ಬದುಕನ್ನು ದುಸ್ತರ ಗೊಳಿಸಲಾಗಿದೆ. ಈ ನಾಡಿನ ಬಡವರ ಬದುಕನ್ನು ಕಾಪಾಡಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಉಳಿಸುವುದು ಅಗತ್ಯ.

ಈ ನಿಟ್ಟಿನಲ್ಲಿ ಚಳುವಳಿಯನ್ನು ಮುನ್ನಡೆಸೋಣ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಹಿರಿಯ ಹೋರಾಟಗಾರಾದ ಅಶೋಕ್ ಚಂದರಗಿ ಮಾತನಾಡಿ, "ಏಷಿಯನ್ ಡೆವಲಪ್ಮೆಂಟ್ ಬ್ಯಾಂಕಿನ 2500 ಕೋಟಿ ಸಾಲದ ಹಿಂದೆ ಬಿದ್ದಿರುವ ಸರ್ಕಾರವು ಶತಾಯಗತಾಯ ಶಾಲೆಗಳನ್ನು ಮುಚ್ಚಲು ಹವಣಿಸುತ್ತಿದೆ. ಒಂದೆಡೆ ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ ಎಂದು ಹೇಳುತ್ತಾ ಇನ್ನೊಂದೆಡೆ ಸರ್ಕಾರಿ ಶಾಲೆ ಮುಚ್ಚಲು ಪಿತೂರಿ ನಡೆಸಿದ್ದಾರೆ. ಗಡಿನಾಡು ಬೆಳಗಾವಿ ಸಾಂಸ್ಕೃತಿಕವಾಗಿ ಸೂಕ್ಷ್ಮ ಪ್ರದೇಶ. ಸರ್ಕಾರವು ತನ್ನ ನಿರ್ಧಾರ ಬದಲಿಸದಿದ್ದರೆ. ಜನರ ದಂಗೆಯನ್ನು ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.ಕರ್ನಾಟಕ ರಕ್ಷಣಾ ವೇದಿಕೆಯ ಮಹದೇವ್ ತಳವಾರ್ ಮಾತನಾಡಿ, "ಕಳೆದ 10 ವರ್ಷದಲ್ಲಿ ದೇಶವ್ಯಾಪಿ 93000 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡಿದರೆ ಬಿಜೆಪಿ ರಾಜ್ಯಗಳಲ್ಲಿ ಶಾಲೆ ಮುಚ್ಚಿರುವ ಬಗ್ಗೆ ಹೇಳುತ್ತಿದ್ದಾರೆ.

ಕಾಂಗ್ರೆಸ್ ಬಿಜೆಪಿ ಸೇರಿದಂತೆ ಎಲ್ಲ ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿವೆ. ವ್ಯವಸ್ಥಿತವಾಗಿ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಕುಗ್ಗಿಸಿ ಖಾಸಗೀ ಶಾಲೆಗಳ ಅಭಿವೃದ್ಧಿ ಮಾಡಲಾಗುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಿನಯ ಚಂದ್ರ ಮಾತನಾಡಿ, "ಶಿಕ್ಷಣವನ್ನು ಮಾರಾಟದ ಸರಕಾಗಿಸಿರುವ ಸರ್ಕಾರಗಳು ಖಾಸಗೀಕರಣದ ತುತ್ತೂರಿ ಊದುತ್ತಿವೆ. ಕರ್ನಾಟಕದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಹೆಸರಲ್ಲಿ 40,000 ಶಾಲೆಗಳನ್ನು ಮುಚ್ಚಲಾಗುತ್ತಿದ್ದರೆ ಮಧ್ಯಪ್ರದೇಶ, ಉತ್ತರ​‍್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಬಡವರಿಂದ ಜ್ಞಾನವನ್ನು ಕಸಿಯುವ ಈ ಹುನ್ನಾರದ ವಿರುದ್ಧ ರಾಜ್ಯದಾದ್ಯಂತ ಜನ ಹೋರಾಟ ನಡೆದಿದೆ.

ಕಾಂಗ್ರೆಸ್‌- ಬಿಜೆಪಿ ಸೇರಿದಂತೆ ಎಲ್ಲ ಆಡಳಿತಾರೂಢ ಪಕ್ಷಗಳ ನೀತಿಯು ಬಡವರ ಬದುಕನ್ನು ನಾಶಗೊಳಿಸುವುದಾಗಿದೆ. ಹಳ್ಳಿ-ಹಳ್ಳಿಗೆ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳನ್ನು ರಚಿಸಿ ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟವನ್ನು ಬುಡಮಟ್ಟದಿಂದ ಬಲಪಡಿಸಬೇಕು ಎಂದು ಕರೆ ನೀಡಿದರು. *ಸಾರ್ವಜನಿಕ ಶಿಕ್ಷಣ ಉಳಿಸಿ ಬೆಳಗಾವಿ ಜಿಲ್ಲಾ ಸಮಿತಿ ಆಯ್ಕೆ*ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧದ ಹೋರಾಟವನ್ನು ಜಿಲ್ಲೆಯಾದ್ಯಂತ ಬಲಪಡಿಸಲು ಸಾರ್ವಜನಿಕ ಶಿಕ್ಷಣ ಉಳಿಸಿ ಬೆಳಗಾವಿ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಜಿಲ್ಲೆಯ ಎಲ್ಲಾ ರೈತ, ಕಾರ್ಮಿಕ, ವಿದ್ಯಾರ್ಥಿ ಯುವಜನ, ಮಹಿಳಾ , ದಲಿತ ಮತ್ತು ಕನ್ನಡ ಪರ ಸಂಘಟನೆಗಳನ್ನು ಸೇರಿಸಿಕೊಂಡು ಹೋರಾಟವನ್ನು ಜಿಲ್ಲೆಯಾದ್ಯಂತ ಮುನ್ನಡೆಸುವ ಸಂಕಲ್ಪ ತೆಗೆದುಕೊಳ್ಳಲಾಯಿತು.