ಧಾರವಾಡ 23: ನೀರಾವರಿ ಪಂಪ್ಸೆಟ್ ಫೀಡರಗಳಿಗೆ (ಮಾರ್ಗಗಳಿಗೆ) ಸರ್ಕಾರಿ ಆದೇಶದನ್ವಯ 3ಫೇಸ್ ವಿದ್ಯುತ್ ಪೂರೈಕೆಯನ್ನು 7 ಗಂಟೆಗಳ ಕಾಲ ಎರಡು ಅಥವಾ ಒಂದೇ ಸರದಿಯಲ್ಲಿ ನೀಡಲಾಗುತ್ತಿದೆ. ರಾತ್ರಿ ಹೊಲದಲ್ಲಿರುವ ಮನೆಗಳಿಗಾಗಿ ಓಪನ್ಡೆಲ್ಟಾ (ಸಿಂಗಲ್ ಫೇಸ್) ನೀಡಲಾಗುತ್ತಿದೆ. ಈಗಾಗಲೇ ಎಲ್ಲಾ ಉಪಕೇಂದ್ರಗಳಲ್ಲಿ ನೀರಾವರಿ ಪಂಪ್ಸೆಟ್ ಮಾರ್ಗಗಳಿಗೆ ನ್ಯೂಮರಿಕಲ್ರಿಲೆ ಅಳವಡಿಸಲಾಗಿದ್ದು ಉಳಿದಂತಹ ಮಾರ್ಗಗಳಿಗೆ ಆಗಸ್ಟ್ 01 ರೊಳಗಾಗಿ ನ್ಯೂಮರಿಕಲ್ರಿಲೆ ಅಳವಡಿಸಲಾಗುತ್ತಿದೆ ಎಂದು ಹೆಸ್ಕಾಂ ನ ಕಾರ್ಯ ಮತ್ತು ಪಾಲನೆ ವಿಭಾಗದ ಧಾರವಾಡ ಗ್ರಾಮೀಣ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಮಂಜುನಾಥ್ ಟಿಂಗರೀಕರ್ ಹೇಳಿದರು.
ತಾಲೂಕಿನ ನಿಗದಿ ಗ್ರಾಮ ಹಾಗೂ ಅಳ್ನಾವರ ಪಟ್ಟಣದಲ್ಲಿ ಸೋಮವಾರ ಪ್ರತ್ಯೇಕವಾಗಿ ಜರುಗಿದ ವಿದ್ಯುತ್ ಬಳಕೆಯಲ್ಲಿ ಸುರಕ್ಷತೆ ಮತ್ತು ಉಳಿತಾಯದ ಕುರಿತ ಗ್ರಾಹಕ ಜಾಗೃತಿ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೆಸ್ಕಾಂ ಗ್ರಾಹಕರು ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆಮಾಡಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು. ಪ್ರತಿ ತಿಂಗಳ 3ನೇ ಶನಿವಾರದಂದು ನಡೆಯುವ ವಿದ್ಯುತ್ ಅದಾಲತ್ ಹಾಗೂ ಗ್ರಾಹಕರ ಸಂವಾದ ಸಭೆಯಲ್ಲಿ ಭಾಗವಹಿಸಿ ತಮ್ಮ ದೂರುಗಳನ್ನು ನೀಡಬಹುದು. ಒಂದು ವೇಳೆ ರೈತರು ಓಪನ್ ಡೆಲ್ಟಾ(ಸಿಂಗಲ್ ಫೇಸ್ ಪೂರೈಕೆ) ಸಮಯದಲ್ಲಿ ಕೆಪ್ಯಾಸಿಟರ್ ಅಳವಡಿಸಿ ತಮ್ಮ ಪಂಪ್ಸೆಟ್ಗಳನ್ನು ಚಾಲನೆ ಮಾಡಿದರೆ ಸಂಪೂರ್ಣ ಮಾರ್ಗ (ಫೀಡರ್) ಟ್ರಿಪ್ ಆಗಿ ಹೊಲದಲ್ಲಿರುವ ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತವಾಗುತ್ತದೆ. ರೈತರು 3ಫೇಸ್ ವಿದ್ಯುತ್ ಪೂರೈಕೆ ಸಮಯದಲ್ಲಿ ಮಾತ್ರ ತಮ್ಮ ಪಂಪ್ಸೆಟ್ಗಳನ್ನು ಚಾಲನೆಯಲ್ಲಿಟ್ಟು ಸಹಕರಿಸಬೇಕು ಎಂದರು.
ಗ್ರಾಮೀಣ ಶಾಖೆ-2ರ ಶಾಖಾಧಿಕಾರಿ ಸಹದೇವ ಇಂಗಳಗಿ ಹಾಗೂ ಅಳ್ನಾವರ ಶಾಖೆಯ ರೋಹಿತ್ ಸಾಳುಂಕೆ ಮಾತನಾಡಿದರು.
ಅಳ್ನಾವರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಸಿ.ಎನ್. ಹೆಬ್ಬಾಳ, ಶಿವು ಬಸನಕೊಪ್ಪ ನಿಗದಿಯ ಮಲೆನಾಡು ಶಿಕ್ಷಣ ಸಂಸ್ಥೆಯ ಫ್ರೌಡ ಶಾಲೆಯ ಅಧ್ಯಕ್ಷ ಮಲ್ಲನಗೌಡ. ಎಸ್. ಪಾಟೀಲ್ ಸೇರಿದಂತೆ ಸಭೆಯಲ್ಲಿ ಗ್ರಾಮ ಪಂಚಾಯತಿಯ ಸದಸ್ಯರು, ಅಧ್ಯಕ್ಷರು ಹಾಗೂ ರೈತರು ಭಾಗವಹಿಸಿದ್ದರು.