ಸಂತ್ರಸ್ಥರಿಗೆ ಇರುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲು ಸೂಚನೆ
ಹಾವೇರಿ 27: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂತ್ರಸ್ಥರಿಗೆ ಹಾಗೂ ಸಾಕ್ಷಿದಾರರಿಗೆ ಇರುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುವ ಪೂರಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂತ್ರಸ್ಥರಿಗೆ ಆತ್ಮಸ್ಥೈರ್ಯ ತುಂಬಬೇಕು ಹಾಗೂ ನ್ಯಾಯದೊರಕಿಸುವ ನಿಟ್ಟಿನಲ್ಲಿ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ನಿವೇಶನಕ್ಕೆ ಜಮೀನು ಗುರುತಿಸಿ: ರಾಣೇಬೆನ್ನೂರು ತಾಲೂಕು ಬೇಲೂರ ಗ್ರಾಮದ ನಿವಾಸಿ ಶ್ರೀಮತಿ ಭರಮವ್ವ ಮಾಗಳ ಅವರ ಜಾಗದ ಬಗ್ಗೆ ಬಹಳ ದಿನದಿಂದ ಸಮಸ್ಯೆ ಇದ್ದು, ಫಲಾನುಭವಿಗೆ ಬರುವ ದಿನಗಳಲ್ಲಿ ಗ್ರಾಮ ಪಂಚಾಯತಿಯಿಂದ ನಿವೇಶನ ಹಂಚಿಕೆ ಮಾಡುವಾಗ ಆದ್ಯತೆ ಮೇರೆಗೆ ನಿವೇಶನ ಹಂಚಿಕೆ ಮಾಡಬೇಕು. ಬೇಲೂರ ಗ್ರಾಮದಲ್ಲಿ ಬಡವರಿಗೆ, ನಿರ್ಗತಿಕರಿಗೆ ಹಾಗೂ ವಸಹಿ ರಹಿತೆ ನಿವೇಶನ ನೀಡಲು ಕೂಡಲೇ ಜಮೀನು ಗುರುತಿಸಿ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೂಕ್ತ ಕ್ರಮದ ಎಚ್ಚರಿಕೆ: ಸವಣೂರು ತಾಲೂಕು ಚಿಕ್ಕಮುಗದೂರ ಸರ್ಕಾರಿ ಶಾಲೆಯಲ್ಲಿ ಖಾಲಿ ಇರುವ ಅಡುಗೆ ಸಿಬ್ಬಂದಿ ಸ್ಥಾನಕ್ಕೆ ಪರಿಶಿಷ್ಟ ಜಾತಿ ಅಭ್ಯರ್ಥಿ ನೇಮಕವಾಗಿದ್ದರಿಂದ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಎಸ್.ಡಿ.ಎಂ.ಸಿ.ಅಧ್ಯಕ್ಷರು ಸಹಿಮಾಡಿಲ್ಲ ಎಂದು ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರು ಸಭೆಯ ಗಮನಕ್ಕೆ ತಂದಾಗ, ಜಿಲ್ಲಾಧಿಕಾರಿಗಳು ಕೂಡಲೇ ಅರ್ಹ ಅಭ್ಯರ್ಥಿಯ ನೇಮಕಕ್ಕೆ ಕ್ರಮಕೈಗೊಳ್ಳಬೇಕು, ಇಲ್ಲವಾದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಕಾನೂನು ರೀತ್ಯ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ಮಶಾನಕ್ಕೆ ದಾರಿ: ಕಳ್ಳಿಹಾಳ ಗ್ರಾಮದಲ್ಲಿ ಪರಿಶಿಷ್ಟ ಜನಾಂಗದವರ ಸ್ಮಶಾನಕ್ಕೆ ದಾರಿಗೆ ಜಮೀನು ನೀಡಬೇಕಾದರೆ ಸ್ಮಶಾನದ ಸುತ್ತಲೂ ಕಂಪೌಂಡ ನಿರ್ಮಾಣ ಮಾಡಬೇಕು ಹಾಗೂ ಜಮೀನು ನೀಡುವ ಮಾಲೀಕನ ಜಮೀನಿನ ಸುತ್ತಲೂ ತಂತಿಬೇಲಿ ಹಾಕುವ ಕರಾರಿಗೆ ಒಪ್ಪಿದರೆ ಮಾತ್ರ ಸ್ಮಶಾಸನಕ್ಕೆ ದಾರಿ ನೀಡಲಾಗುವುದು ಎಂದು ಜಮೀನಿನ ಮಾಲೀಕರು ಸಭೆಗೆ ಮನವಿ ಮಾಡಿಕೊಂಡರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ತಮ್ಮ ಬೇಡಿಕೆ ಸಮಂಜಸವಾಗಿದ್ದು, ಕೂಡಲೇ ಸ್ಮಶಾನ ಜಾಗೆಗೆ ತಡೆಗೋಡೆ ನಿರ್ಮಾಣ ಸಾಧ್ಯವಾಗುವುದಿಲ್ಲ. ಹಂತ ಹಂತವಾಗಿ ಆದ್ಯತೆ ಮೇರೆಗೆ ಮಾಡಲಾಗುವುದು, ಇದು ಒಂದು ಪುಣ್ಯದ ಕೆಲಸವಾಗಿದ್ದು, ಸ್ಮಶಾನಕ್ಕೆ ಹೋಗಲು ದಾರಿಗೆ ಜಮೀನು ನೀಡಲು ಮನಸ್ಸು ಮಾಡಬೇಕು ಎಂದು ಜಮೀನನ ಮಾಲೀಕರನ್ನು ಕೋರಿಕೊಂಡರು.
ಮಾಹಿತಿ ಫಲಕ ಅಳವಡಿಕೆ: ಎಲ್ಲ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗದವರಿಗೆ ಇರುವ ಸೌಲಭ್ಯಗಳ ಕುರಿತು ಮಾಹಿತಿ ಫಲಕ ಅಳವಡಿಸಬೇಕು, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ನೇರ ಸಾಲ ಅನುಷ್ಠಾನ ವಿಳಂಬ ಕುರಿತು ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕಾಲಮಿತಿಯೊಳಗೆ ಯೋಜನೆಗಳ ಅನುಷ್ಠಾನಗೊಳಿಸಬೇಕು ಹಾಗೂ ಕೂಡಲೇ ಎಲ್ಲ ಇಲಾಖೆಗಳಲ್ಲಿ ಯೋಜನೆಗಳ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಜೊತೆಗೆ ಎಲ್ಲ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗದವರಿಗೆ ಇರುವ ಸೌಲಭ್ಯಗಳ ಮಾಹಿತಿ ಸಂಗ್ರಹಿಸಿ ಕಿರುಪುಸ್ತಕಮಾಡಿ ಜಿಲ್ಲಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಅವರು ಮಾತನಾಡಿ, ಜನವರಿ-2024 ರಿಂದ ಈವರೆಗೆ ವಿವಿಧ 60 ದೌರ್ಜನ್ಯ ಪ್ರಕರಣಗಳಲ್ಲಿ ರೂ.74 ಲಕ್ಷ ಪರಿಹಾರ ನೀಡಲಾಗಿದೆ. 71 ಪ್ರಕರಣಗಳು ನ್ಯಾಯಾಲದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶ್ರೀಮತಿ ಮಮತಾ, ಡಿ.ವೈ.ಎಸ್.ಪಿ. ಪಾಟೀಲ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬರಗಿಮಠ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ, ತಹಶೀಲ್ದಾರ ಶ್ರೀಮತಿ ಶರಣಮ್ಮ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ರಮೇಶ ಆನವಟ್ಟಿ, ಎನ್.ಎಂ.ಗಾಳೆಮ್ಮನವರ, ಮುತ್ತುರಾಜ ಮಾದರ, ಕೃಷ್ಣಪ್ಪ ಚವ್ಹಾಣ ಇತರರು ಉಪಸ್ಥಿತರಿದ್ದರು.