ರಂಗತೋರಣದ ಸ್ವಂತ ಕಟ್ಟಡದಲ್ಲಿ ನೀನಾಸಮ್ ನಾಟಕೋತ್ಸವ ಆರಂಭ
ಬಳ್ಳಾರಿ 12: ನಾಡಿನ ಹೆಮ್ಮೆಯ ರಂಗತೋರಣದ ಈ ವರ್ಷದ ಕೊನೆ ನಾಟಕೋತ್ಸವ, ಬಳ್ಳಾರಿಯ ಸ್ವಂತ ನಿರ್ಮಾಣದ ಕಟ್ಟಡದಲ್ಲಿ ನೀನಾಸಮ್ ಕಲಾವಿದರ ಅಭಿನಯದ ಮಾಲತಿ ಮಾಧವ ನಾಟಕದೊಂದಿಗೆ ಆರಂಭಗೊಂಡಿತು.
ರಂಗ ಸಜ್ಜಿಕೆಯ ವೇದಿಕೆಯಲ್ಲಿ ಶುಭ ತುಳಸಿಗೆ ನೀರೆರೆಯುವುದರ ಮೂಲಕ ನಿವೃತ್ತ ಮುಖ್ಯೋಪಾಧ್ಯಾಯ ಮೆಹತಾಬ್ ಶುಭಾರಂಭಗೊಳಿಸಿದರು.
ಪ್ರಗತೀಶೀಲ ನಿರ್ಮಾಣದ ಹಂತದಲ್ಲಿರುವ ಕಲಾಕ್ಷೇತ್ರದ ಒಳಾಂಗಣ ವಿಶಾಲ ಮೆಟ್ಟಿಲುಗಳ ಮೇಲೆ ಕುಳಿತಿದ್ದ ನಗರದ ಪ್ರೇಕ್ಷಕ ಬಂಧು ಭಗಿನಿಯರನ್ನು ಕಂಡು ಪುಳಕಿತರಾದ ಮೆಹತಾಬ್, ನಿರ್ಮಾಣದ ಮಧ್ಯೆಯೂ ನಾಟಕೋತ್ಸವಗಳನ್ನು ನಡೆಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಪ್ರೇಕ್ಷಕರಿಂದ ಸುಶೋಭಿತವಾದ ರಂಗಮಂದಿರ ಪೂರ್ಣಗೊಂಡಾಗ ಕಾಣುವ ಭವ್ಯತೆಯನ್ನು ನೆನಪಿಸಿದರು. ಇಡೀ ಕಲ್ಯಾಣ ಕರ್ನಾಟಕದಲ್ಲೇ ಒಂದು ಅತ್ಯುತ್ತಮ ಕಲಾಕ್ಷೇತ್ರವಾಗಲಿರುವುದು ಹಾಗೂ ರಂಗತೋರಣ ಕಾರ್ಯ ಚಟುವಟಿಕೆಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ, ಆಕರ್ಷಕವಾಗಿ ನಡೆಸುತ್ತಿರುವುದು ಬಳ್ಳಾರಿಯ ಹೆಮ್ಮೆಯೆಂದು ನುಡಿದರು.
ರಂಗತೋರಣದ ಅಧ್ಯಕ್ಷ ಪ್ರೊ.ಆರ್.ಭೀಮಸೇನ, ರಂಗತೋರಣದ ನಿರಂತರ 20 ವರ್ಷಗಳ ಕಾರ್ಯ ಚಟುವಟಿಕೆಗಳನ್ನು ಬೆಂಬಲಿಸಿ, ಮುನ್ನಡೆಸಿದ ಎಲ್ಲಾ ಪ್ಷೇಕ್ಷಕರು ಸಹಕರಿಸಿದ ಎಲ್ಲರ ನೆರವಿನಿಂದ ಈ ಕನಸು ನನಸಾಗುತ್ತಿದೆ. ಕಳೆದ ವರ್ಷ ನಡೆದ ನೀನಾಸಮ್ ನಾಟಕ ಸಮತಟ್ಟು ನಲದಿಂದ ಪ್ರದರ್ಶಿತವಾಗಿತ್ತು. ಈಗ ಮಂದಿರದ ಹಂತ ತಲುಪಿದ್ದು 2025ರಲ್ಲಿ ಲೋಕಾರೆ್ಣ ಆಗಲಿರುವುದು ಎಂದರು.
ವೇದಿಕೆಯಲ್ಲಿ ನಗರದ ಮೇಘ ಸೌಹಾರ್ದ ಸಹಕಾರ ನಿಯಮಿತದ ಸತ್ಯನಾರಾಯಣರಾವ್, ವಿವೇಕತೋರಣ ಕಾರ್ಯದರ್ಶಿ ಡಾ. ಎಸ್.ಕೃಷ್ಣ ಹಾಗೂ ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಇದ್ದರು. ಅಡವಿಸ್ವಾಮಿ ಹಾಗೂ ಉಪನ್ಯಾಸಕ ಗಂಗಾಧರ ದುರ್ಗಂ ಕಾರ್ಯಕ್ರಮ ನಿರ್ವಹಿಸಿದರು.
ಸಂಗೀತಮಯ ರಮ್ಯ ನಾಟಕ ಮಾಲತಿ ಮಾಧವ : ನಾಡಿನ ಹೆಸರಾಂತ ಸಂಸ್ಥೆ ‘ನೀನಾಸಮ್’ನ ‘ಮಾಲತಿ-ಮಾಧವ’ ನಾಟಕ ಬಳ್ಳಾರಿ ರಂಗತೋರಣದ ನಿರ್ಮಾಣದ ಸ್ವಂತ ಕಟ್ಟಡದಲ್ಲ್ಲಿ ನಿನ್ನೆ ರಂಜನೀಯ ಪ್ರದರ್ಶನ ನೀಡಿತು.
ಮೂಲ ಸಂಸ್ಕೃತ ಭವಭೂತಿಯ ನಾಟಕವನ್ನು ಕನ್ನಡಕ್ಕೆ ಅಳವಡಿಸಿ ನಿರ್ದೇಶಿಸಿದ್ದು ನೀನಾಸಮ್ ಮುಖ್ಯಸ್ಥ ಕೆ.ವಿ. ಅಕ್ಷರ, ಯುವ ಪ್ರಣಯ ಮಾಲತಿ ಮತ್ತು ಮಾಧವರ ಮದುವೆಗೆ ನಡೆಯುವ ತಂತ್ರ-ಪ್ರತಿತಂತ್ರ ಅವುಗಳನ್ನು ಹೆಣೆಯುತ್ತಲೇ ಮತ್ತೊಂದು ಯುವಜೋಡಿಗಳ ಮದುವೆಯೂ ನಡೆದು ನಮ್ಮ ಗತಕಾಲದ ‘ಶುಭಂ’ ನೆನಪಿಸಿತು.
ಸಂಗೀತಮಯ ನಾಟಕೀಯ ಸಂಭಾಷಣೆಗಳಿದ್ದರೂ ಬಣ್ಣ ಬಣ್ಣದ ನೆರಳು ಬೆಳಕಿನ ವ್ಯವಸ್ಥೆಯಿಂದ ಶಿವ, ಕಾಳಿ, ಕಾಪಾಲಿಕ, ಸ್ಮಶಾನದ ಭೂತ ಪ್ರೇತ, ಅರಮನೆ, ಬೌದ್ಧ ಭಿಕ್ಷುಗಳ ತಂತ್ರಗಳ ಅತಿ ರಂಜಿತ ರಮ್ಯ ಲೋಕ ಸೃಷ್ಟಿಸಿ ಪ್ರೇಕ್ಷಕರನ್ನು ಎರಡು ಗಂಟೆಗಳ ಕಾಲ ಹಿಡಿದಿಟ್ಟಿದ್ದು ಸಭಿಕರು ಸಂತಸ ವ್ಯಕ್ತಪಡಿಸಿದರು.
ಇಂದಿನ ನಾಟಕ-‘ಅಂಕದ ಪರದೆ’: ನೀನಾಸಮ್ ತಿರುಗಾಟದ ಮತ್ತೊಂದು ನಾಟಕ ಅಂಕದ ಪರದೆ ರಂಗತೋರಣ ನಿರ್ಮಾಣದ ಸ್ವಂತ ರಂಗಮಂದಿರದಲ್ಲಿ ಸಂಜೆ 6.30ಕ್ಕೆ ಪ್ರದರ್ಶನವಾಗಲಿದೆ. ನಗರದ ಮೋಕ ರಸ್ತೆಯ ಅಟಲ ಬಿಹಾರಿ ವಾಜಪೇಯಿ ನಗರದ ರಂಗತೋರಣ ಕಟ್ಟಡದಲ್ಲಿ ನಡೆಯಲಿರುವ ಎರಡು ದಿನಗಳ ನಾಟಕೋತ್ಸವದಲ್ಲಿ ಇಂದು ಕೊನೆ ನಾಟಕ ‘ಅಂಕದ ಪರದೆ’. ನೀನಾಸಮ್ ಕಲಾವಿದರ ಲವಲವಿಕೆಯ ಅಭಿನಯ, ವರ್ಣರಂಜಿತ ನೆರಳು ಬೆಳಕಿನ ಚಿತ್ತಾರದ ನಾಟಕ ನೋಡಿ ಸಂತಸಪಡಲು ನಗರದ ನಾಗರಿಕರಿಗೆ ಉತ್ತಮ ಅವಕಾಶವಿದ್ದು, ಅಪರೂಪದ ಇಂತಹ ನಾಟಕಗಳನ್ನು ಸವಿಯಲು ರಂಗತೋರಣ ವಿನಂತಿಸಿ ಆಹ್ವಾನಿಸುತ್ತದೆ.