ಮಹಾಲಿಂಗಪುರ ತಾಲೂಕು ರಚನೆಗೆ ಅಗತ್ಯ ವರದಿ ಡಿಸಿ ರವಾನೆ: ಬೀಡಿಕರ
ಮಹಾಲಿಂಗಪುರ 09: ಜಮಖಂಡಿ ಉಪ ವಿಭಾಗಕ್ಕೆ ಸಂಬಂಧಿಸಿದಂತೆ ಮಹಾಲಿಂಗಪುರ ನೂತನ ತಾಲೂಕು ರಚನೆಗೆ ಇರುವ ವಾಸ್ತವಿಕ ಭೌಗೋಳಿಕ ಹಿನ್ನೆಲೆಯನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಕಂದಾಯ ಗ್ರಾಮಗಳ ರಚನಾಕೋಶ ಪದ ನಿಮಿತ್ತ ಕಾರ್ಯದರ್ಶಿಗಳಿಗೆ ಜನವರಿ 8ಕ್ಕೆ ಜಿಲ್ಲಾಧಿಕಾರಿಗಳು ಅಗತ್ಯ ವರದಿಯನ್ನು ರವಾನಿಸಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದರು.
ಗುರುವಾರ ಮುಂಜಾನೆ ಪಟ್ಟಣದ ಜಿಎಲ್ಬಿಸಿ ವಸತಿ ಗೃಹದಲ್ಲಿ ತಾಲೂಕು ಹೋರಾಟ ಸಮಿತಿ, ಪಟ್ಟಣ ಮತ್ತು ಹಳ್ಳಿಗಳ ಮುಖಂಡರ ಸಭೆ ನಡೆಸಿ ಜಿಲ್ಲಾಧಿಕಾರಿಗಳ ವರದಿ ಪ್ರತಿ ಆಧರಿಸಿ ಮಾತನಾಡಿದ ಅವರು, ಮಹಾಲಿಂಗಪುರ ನೂತನ ತಾಲೂಕಿಗೆ ಆಡಳಿತಾತ್ಮಕವಾಗಿ ಅಗತ್ಯವಿರುವ 16 ಊರುಗಳು ಅದರ ಪ್ರದೇಶ, ಗ್ರಾಮ ಪಂಚಾಯಿತಿಗಳ ಠರಾವು ಪ್ರತಿಗಳನ್ನು ಲಗತ್ತಿಸಿರುವ ಮತ್ತು 2011 ರ ಜನಗಣತಿ ಪ್ರಕಾರ ಇರುವ ಜನಸಂಖ್ಯೆಯನ್ನು ಸಹ ಉಲ್ಲೇಖಿಸಲಾಗಿದೆ ಎಂಬ ಮಾಹಿತಿಯನ್ನು ಸಭೆಗೆ ಮನವರಿಕೆ ಮಾಡಿಕೊಟ್ಟು ತಮ್ಮ ಹೋರಾಟ ಬಹಳ ದಿನಗಳಿಂದ ಸಾಗಿ ಬಂದಿರುವುದನ್ನು ಕೂಡ ಲಿಖಿತ ರೂಪದಲ್ಲಿ ಕಂದಾಯ ಇಲಾಖೆ ಗಮನಕ್ಕೆ ತರಲಾಗಿದೆ ಎಂದರು.
ಅಗತ್ಯ ಜನಸಂಖ್ಯೆ : ಪ್ರಸ್ತುತ ರಬಕವಿ/ ಬನಹಟ್ಟಿ ತಾಲೂಕಿನಲ್ಲಿ ಮಹಾಲಿಂಗಪುರ 36,055, ಚಿಮ್ಮಡ 10,839, ಕೆಸರಗೊಪ್ಪ 6,100, ಬುದ್ನಿ ಪಿಡಿ 5,120, ಬಿಸನಾಳ 4,150, ಮಧಬಾವಿ 4,506, ಮಾರಾಪೂರ 3,247, ಸಂಗಾನಟ್ಟಿ 2,501, ಸೈದಾಪುರ 7,850, ನಂದಗಾಂವ 2,729, ಢವಳೇಶ್ವರ 7,992 ಇವೆ.ಮುಧೋಳ ತಾಲೂಕಿನಲ್ಲಿ ಬೆಳಗಲಿ 17,636, ಅಕ್ಕಿಮರಡಿ 2,636, ನಾಗರಾಳ 6,122, ಮಿರ್ಜಿ 2,490, ಮಲ್ಲಾಪೂರ 809 ಇವುಗಳು ಸೇರಿ ಒಟ್ಟು 1, 22,500 ಜನಸಂಖ್ಯೆಯೊಂದಿಗೆ ಕಾರ್ಯ ನಿರ್ವಹಿಸುತ್ತಿವೆ.
ಬಾಗಲಕೋಟ ಜಿಲ್ಲಾ ಕೇಂದ್ರದಿಂದ ಮಹಾಲಿಂಗಪುರ ಪಟ್ಟಣದ ದೂರ 77 ಕಿಮಿ, ರಬಕವಿ /ಬನಹಟ್ಟಿ ತಾಲೂಕಿನಿಂದ 12 ಕಿಮೀ, ತೇರದಾಳ ಹೋಬಳಿ ಕೇಂದ್ರದಿಂದ 17 ಕಿಮೀ ಹೀಗೆ ತಮ್ಮ ತಮ್ಮ ಊರುಗಳಿಂದ ಇನ್ನಷ್ಟು ದೂರ ಕ್ರಮಿಸುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ವಾಸ್ತವಾಂಶವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ನೂತನ ತಾಲೂಕಿಗೆ ಅವಶ್ಯವಿರುವ ಮಾನದಂಡಗಳನ್ನು ಪರೀಶೀಲನೆ ನಡೆಸಲು ಬೆಳಗಾವಿ ಪ್ರಾದೇಶಿಕ ಆಯುಕ್ತರು ಕಳೆದ ಮಾರ್ಚ್ 7 ರಂದು ಸೂಚಿಸಿದಂತೆ, ರಬಕವಿ ಬನಹಟ್ಟಿ ತಾಲೂಕಾಡಳಿತ ಸಾರ್ವಜನಿಕರ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹ ಮತ್ತು ತಾಲೂಕಿಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳ ಕೊರತೆ ಕುರಿತಾಗಿಯೂ ಈ ವರದಿಯಲ್ಲಿ ನಮೂದಿಸಲಾಗಿದೆ.
ಸಭೆಯಲ್ಲಿ ತಹಶೀಲ್ದಾರ ಗೀರೀಶ ಸ್ವಾದಿ ತಾಲೂಕಿಗಾಗಿ ಹೋರಾಟ ನಡೆಸಿರುವ ಮುಖಂಡರಾದ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ, ಸಂಗಪ್ಪ ಹಲ್ಲಿ, ಧರೆಪ್ಪ ಸಾಂಗ್ಲಿಕರ, ಶೇಖರ ಅಂಗಡಿ, ಮಹಾಂತೇಶ ಹಿಟ್ಟಿನಮಠ, ಮುಸ್ತಾಕ್ ಚಿಕ್ಕೋಡಿ, ಸುನೀಲಗೌಡ ಪಾಟೀಲ್, ಹಣ್ಮಂತ ಜಮಾದಾರ, ಗಂಗಾಧರ ಮೇಟಿ, ಮಹಾದೇವ ಮಾರಾಪೂರ, ಸಿದ್ದುಗೌಡ ಪಾಟೀಲ್, ವೀರೇಶ ಆಸಂಗಿ, ನಿಂಗಪ್ಪ ಬಾಳಿಕಾಯಿ, ಜಯರಾಂ ಶೆಟ್ಟಿ, ಶಿವನಗೌಡ ಪಾಟೀಲ, ಶಿವಲಿಂಗ ಟಿರಕಿ, ರಫೀಕ್ ಮಾಲದಾರ, ಮುರಗೋಡ, ರಾಜು ಮಿರ್ಜಿ, ಅರ್ಜುನ್ ಮೋಪಗಾರ ಇನ್ನೂ ಮುಂತಾದವರಿದ್ದರು.