ರಾಷ್ಟ್ರೀಯ ಪ್ರಶಸ್ತಿ: ಉದ್ಯಮ ಕ್ಷೇತ್ರದಲ್ಲಿ ಸಾಧನೆ ಸುರೇಶ ತಳವಾರ

ರಾಷ್ಟ್ರೀಯ ಪ್ರಶಸ್ತಿ: ಉದ್ಯಮ ಕ್ಷೇತ್ರದಲ್ಲಿ ಸಾಧನೆ ಸುರೇಶ ತಳವಾರ National Award: Suresh Talawara for achievement in the field of entrepreneurship

ಹುಕ್ಕೇರಿ, 03 : ಉದ್ಯಮ ಕ್ಷೇತ್ರದಲ್ಲಿ ಪ್ರದರ್ಶಿಸಿರುವ ವಿಶಿಷ್ಟ ಸಾಧನೆ, ನವೋದ್ಯಮಿಗಳಿಗೆ ನೀಡಿರುವ ಪ್ರೇರಣೆ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ನೀಡಿರುವ ಮಹತ್ವದ ಕೊಡುಗೆಗಳನ್ನು ಪರಿಗಣಿಸಿ, ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದ ಯುವ ಉದ್ಯಮಿ ಸುರೇಶ ತಳವಾರ ಅವರಿಗೆ ಪ್ರತಿಷ್ಠಿತ 2025ನೇ ಸಾಲಿನ ರಾಷ್ಟ್ರ ಮಟ್ಟದ ಅತ್ಯುತ್ತಮ ಉದ್ಯಮಿ ಪ್ರಶಸ್ತಿ ಲಭಿಸಿದೆ.  

ಈ ಗೌರವಪ್ರದ ಪ್ರಶಸ್ತಿಯನ್ನು ಭಾರತದ ರಾಜ್ಯ ಕೈಗಾರಿಕಾ ಅಭಿವೃದ್ಧಿ ಮತ್ತು ಹೂಡಿಕೆ ನಿಗಮಗಳ ಸಾಧಕರಿಗೆ ರಾಷ್ಟ್ರ ಮಟ್ಟದಲ್ಲಿ ನೀಡಲಾಗುತ್ತದೆ. ಬೆಳಗಾವಿ ಕಂದಾಯ ವಿಭಾಗದಿಂದ ಈ ವರ್ಷ ಈ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಉದ್ಯಮಿ ಎಂಬ ಹೆಗ್ಗಳಿಕೆಗೆ ಸುರೇಶ ತಳವಾರ ಪಾತ್ರರಾಗಿದ್ದಾರೆ. ಉದ್ಯಮ ಆರಂಭದಿಂದಲೂ ನವೀನತೆಗೆ, ಗುಣಮಟ್ಟಕ್ಕೆ ಹಾಗೂ ಉದ್ಯೋಗಾವಕಾಶಗಳ ನಿರ್ಮಾಣಕ್ಕೆ ಸುರೇಶ ತಳವಾರ ಒತ್ತು ನೀಡಿದ್ದು, ಇವರ ಮುಂದಾಳತ್ವದಲ್ಲಿ ಹಲವು ಯುವಕರು ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.  

ಇದರಿಂದಾಗಿ ಈ ಭಾಗದಲ್ಲಿ ಉದ್ಯಮಶೀಲ ವಾತಾವರಣ ಸೃಷ್ಟಿಯಾಗಲು ಇವರ ಕೊಡುಗೆ ಮಹತ್ತರವಾಗಿದೆ ಎಂದು ಮಂಡಳಿ ಶ್ಲಾಘಿಸಿದೆ. ಪ್ರಶಸ್ತಿ ಪ್ರಕಟವಾದ ನಂತರ ಹುಕ್ಕೇರಿ ಹಾಗೂ ಸುತ್ತಮುತ್ತಲಿನ ಉದ್ಯಮ ವಲಯದಲ್ಲಿ ಖುಷಿಯ ಸಂಭ್ರಮ ಮೂಡಿದೆ. ನವ ಉದ್ಯಮಿಗಳಿಗೆ ದಿಕ್ಕು ತೋರಿ, ಅವರಿಗೆ ಪ್ರೋತ್ಸಾಹ ನೀಡುವ ವ್ಯಕ್ತಿಯಾಗಿ ತಳವಾರ ಗುರುತಿಸಿಕೊಂಡಿರುವುದು ಈ ಪ್ರದೇಶದ ಉದ್ಯಮಶೀಲತೆಗೆ ಹೊಸ ಚೈತನ್ಯ ನೀಡಿದೆ. ಈ ಪ್ರಶಸ್ತಿಯನ್ನು ಡಿಸೆಂಬರ್ 5ರಂದು ಆಂಧ್ರ​‍್ರದೇಶದ ವಿಶಾಖಪಟ್ಟಣದಲ್ಲಿ ನಡೆಯಲಿರುವ ವೈಭವಶಾಲಿ ರಾಷ್ಟ್ರೀಯ ಸಮಾರಂಭದಲ್ಲಿ ಸುರೇಶ ತಳವಾರ ಅವರಿಗೆ ಪ್ರದಾನ ಮಾಡಲಾಗುವುದು. ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ ಪ್ರಮುಖ ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುರೇಶ ತಳವಾರ ಅವರ ಸಾಧನೆಗೆ ಗ್ರಾಮಸ್ಥರು, ಉದ್ಯಮಿಗಳು ಹಾಗೂ ಹಲವು ಸಂಘಟನೆಗಳು ಹಾರೈಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಮಹತ್ತರ ಯಶಸ್ಸು ಗಳಿಸಲಿ ಎಂದು ಆಶಿಸಿದ್ದಾರೆ.